ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ತಡೆರಹಿತ ಬಸ್‌ಗಳ ಪ್ರಯಾಣದರವನ್ನು ಹೆಚ್ಚಿಸಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿರುವ ಬಿಜೆಪಿ, ಬೇಜುಗಳ್ಳರಿದ್ದಾರೆ ಎಚ್ಚರಿಕೆ ಎಂದಿದೆ.
ಉಭಯ ನಗರಗಳ ನಡುವಿನ ತಡೆರಹಿತ ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ 15 ರೂ. ಹೆಚ್ಚಿಸಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ಅದರಂತೆ, ಈ ಹಿಂದೆ ಪ್ರಯಾಣದರ 185 ರೂ.ನಿಂದ 200 ರೂ.ಗೆ ಏರಿಕೆಯಾಗಿದೆ. ಎಕ್ಸ್‌ಪ್ರೆಸ್-ವೇ ಟೋಲ್ ಶುಲ್ಕ ಪಾವತಿಸುವ ಕಾರಣದಿಂದಾಗಿ ಪ್ರಯಾಣದರ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ದರ ಏರಿಕೆ ಖಂಡಿಸಿ ಟ್ವೀಟ್ ಮಾಡಿರುವ ಬಿಜೆಪಿ, ಜೇಬುಗಳ್ಳದ್ದಾರೆ ಎಚ್ಚರಿಕೆ ಎಂದು ಬಸ್ಸುಗಳಲ್ಲಿ ಬರೆಯಲಾಗುತ್ತಿತ್ತು. ಈಗ ಅದನ್ನು ‘ಕಾಂಗ್ರೆಸ್ ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ ಎಚ್ಚರಿಕೆ’ ಎಂದು ಬದಲಿಸಬೇಕು. ಸಾಮಾನ್ಯ ಬಸ್‌ಗಳ ದರವನ್ನು ನಾಲ್ಕೇ ತಿಂಗಳಲ್ಲಿ ಶೇ.20ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಹಗಲು ದರೋಡೆ. ಮೊದಲು 160 ರೂ.ಗಳಲ್ಲಿ ಮುಗಿಯುತ್ತಿದ್ದ ಪ್ರಯಾಣ ಈಗ 200 ರೂ.ಕ್ಕೆ ಏರಿಕೆಯಾಗಿದೆ” ಎಂದು ಆರೋಪಿಸಿದೆ.
“ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ” ಎಂದು ಟ್ವೀಟ್ ಮಾಡಿದೆ.
ಬಿಜೆಪಿಯ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಿಜೆಪಿಯ ಮಾತುಗಳು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತೆ. ಬಿಜೆಪಿ ಕುಹುಕಗಳನ್ನು ನಂಬಲು ರಾಜ್ಯದಲ್ಲಿ ಬಿಜೆಪಿಯವರನ್ನು ಬಿಟ್ಟು ಇನ್ಯಾರೂ ಮೂರ್ಖರಿಲ್ಲ” ಎಂದಿದ್ದಾರೆ.
“5 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಆಯ್ಕೆ ಮಾಡಲಾಗಿಲ್ಲ. ಅವರು ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾದಂತೆ ವರ್ತಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತವೆ ಎಂದಿತ್ತು. ಆದರೆ, ನಿಗಮಗಳಿಗೆ ಹೆಚ್ಚು ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಹೆಚ್ಚಿಸಿ ಸಾರಿಗೆ ನಿಗಮ ಹಾಗೂ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬುತ್ತೇವೆ. ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿದೆ. ದೇವಾಲಯಗಳ ಆದಾಯಕ್ಕೆ ಶಕ್ತಿ ಬಂದಿದೆ. ಇಂತಹ ಯೋಜನೆ ನಿಲ್ಲಲಿದೆ ಎನ್ನುವ ಬಿಜೆಪಿದ್ದು ನನಸಾಗದ ಕನಸು ಮಾತ್ರ” ಎಂದಿದ್ದಾರೆ.
“ನಮ್ಮ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾದ ಕಾಲಕ್ಕೆ ಸಂಬಳ ನೀಡುತ್ತಿದೆ. ನೌಕರರಿಗೆ ವಿಮೆ ಸೌಲಭ್ಯ ಹೆಚ್ಚಿಸಿದೆ. ನೌಕರರ ಮಕ್ಕಳ ವಿದ್ಯಾಭ್ಯಾಸ ಮತ್ತು ಹೊಸ ಬಸ್‌ಗಳ ಖರೀದಿಗೆ ಯೋಜನೆ ರೂಪಿಸಿದೆ. ಹೊಸ ನೌಕರರ ನೇಮಕಕ್ಕೆ ಮುಂದಾಗಿದ್ದೇವೆ. ಆದರೆ, ಬಿಜೆಪಿ ಆಡಳಿತದಲ್ಲಿ ಆಗಿದ್ದೇನು? ನೌಕರರಿಗೆ ಸಂಬಳ ನೀಡದ ಕಾರಣ ಪ್ರತಿಭಟನೆ ನಡೆಸಿದ್ದರು. ಪ್ರತಿಭಟಿಸಿದ ನೌಕರರಿಗೆ ವಜಾಗೊಳಿಸುವ ಶಿಕ್ಷೆ ನೀಡಿ ದ್ವೇಷ ಸಾಧಿಸಿತ್ತು ಬಿಜೆಪಿ. ಬಸ್‌ಗಳು ನಿರ್ವಹಣೆ ಇಲ್ಲದೆ, ಗುಜರಿಗೆ ಸೇರಿದ್ದವು. ಸಾರಿಗೆ ನಿಗಮಗಳು ಡೀಸೆಲ್ ತುಂಬಿಸಲೂ ಹಣವಿಲ್ಲದೆ ನಷ್ಟದ ಕೂಪಕ್ಕೆ ಬಿದ್ದಿದ್ದವು” ಎಂದು ತಿರುಗೇಟು ನೀಡಿದ್ದಾರೆ.