ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ 9 ಪ್ರಮುಖ ವಿಷಯಗಳನ್ನು ಚರ್ಚಿಸುವಂತೆ ಕೋರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿರುವ ಸೋನಿಯಾ ಗಾಂಧಿ ಅವರು ಮುಂಬರುವ ವಿಶೇಷ ಅಧಿವೇಶನದಲ್ಲಿ ಅವುಗಳ ಬಗ್ಗೆ ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
“ನೀವು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಸೆಪ್ಟೆಂಬರ್ 18 ರಿಂದ ಕರೆದಿರುವಿರಿ. ಈ ವಿಶೇಷ ಅಧಿವೇಶನವನ್ನು ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಕರೆಯಲಾಗಿದೆ ಎಂದು ನಾನು ಗಮನಿಸಿರುವೆ. ನಮ್ಮ ಪ್ರತಿ ಪಕ್ಷದ ಯಾರಿಗೂ ಅದರ ಕಾರ್ಯಸೂಚಿಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ” ಎಂದು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತ, ಟರ್ಕಿಯಲ್ಲಿ ನಕಲಿ ಯಕೃತ್ತಿನ ಔಷಧಿ ಮಾರಾಟ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
“ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಅಧಿವೇಶನವು ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳನ್ನು ಪ್ರಸ್ತಾಪಿಸಲು ನಮಗೆ ಅವಕಾಶವನ್ನು ನೀಡಬೇಕು” ಎಂದು ತಿಳಿಸಿದ್ದಾರೆ.
ಚರ್ಚೆಗೆ ತೆಗೆದುಕೊಳ್ಳಬೇಕಾದ ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿರುವ ಸೋನಿಯಾ ಗಾಂಧಿ, “ಈ ವಿಷಯಗಳ ಬಗ್ಗೆ ಚರ್ಚೆಗೆ ಸೂಕ್ತ ನಿಯಮಗಳ ಅಡಿಯಲ್ಲಿ ಸಮಯವನ್ನು ನಿಗದಿಪಡಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಪಟ್ಟಿ ಮಾಡಿದ ವಿಷಯಗಳು
- ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಕೆಯಾಗಿರುವ ಅಗತ್ಯ ವಸ್ತುಗಳ ಬೆಲೆ, ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆಗಳ ಏರಿಕೆ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಕಷ್ಟದ ಮೇಲೆ ಕೇಂದ್ರೀಕರಿಸಿ.
- ಕನಿಷ್ಠ ಬೆಂಬಲ ಬೆಲೆ ಮತ್ತು ರೈತ ಸಂಘಟನೆಗಳು ಬೇಡಿಕೆಯಿಟ್ಟಿರುವ ಇತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೈತರು ಮತ್ತು ರೈತ ಸಂಘಟನೆಗಳಿಗೆ ಕೈಗೊಂಡಿರುವ ಬದ್ಧತೆ.
- ಈಗಾಗಲೇ ಎಲ್ಲಡೆ ಬಹಿರಂಗವಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಅದಾನಿ ವ್ಯಾಪಾರ ಸಮೂಹದ ವಹಿವಾಟುಗಳನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಗೆ ಬೇಡಿಕೆ.
- ಮಣಿಪುರದ ಜನರು ಎದುರಿಸುತ್ತಿರುವ ನಿರಂತರ ಸಂಕಟ ಮತ್ತು ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯದ ಕುಸಿತ.
- ಹರ್ಯಾಣದಂತಹ ವಿವಿಧ ರಾಜ್ಯಗಳಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ.
- ಚೀನಾದಿಂದ ಭಾರತೀಯ ಭೂಪ್ರದೇಶದ ಮುಂದುವರಿದ ಆಕ್ರಮಣ ಮತ್ತು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಗಳಲ್ಲಿ ನಮ್ಮ ಸಾರ್ವಭೌಮತ್ವಕ್ಕೆ ಉಂಟಾಗಿರುವ ಸವಾಲುಗಳು.
- ಜಾತಿ ಗಣತಿಯ ತುರ್ತು ಅಗತ್ಯ.
- ಕೇಂದ್ರ-ರಾಜ್ಯ ಸಂಬಂಧಗಳ ಮೇಲೆ ಆಗುತ್ತಿರುವ ಹಾನಿ.
- ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿ ಮತ್ತು ಇತರ ರಾಜ್ಯಗಳಲ್ಲಿ ಅನಾವೃಷ್ಟಿಯಿಂದ ಉಂಟಾದ ನೈಸರ್ಗಿಕ ವಿಕೋಪಗಳ ಪರಿಣಾಮದ ಬಗ್ಗೆ ಚರ್ಚೆ.