ಸುಮಾರು ಎಂಟು ದಶಕಗಳ ಹಿಂದೆ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ದೇಶ ನಿಜವಾಗಿಯೂ ಸ್ವತಂತ್ರವಾಗಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬ್ಯಾನರ್ಜಿ, “ಬಿಜೆಪಿಯು ಜನರ ಮತದಾನದ ಹಕ್ಕುಗಳು, ವಾಕ್ ಸ್ವಾತಂತ್ರ್ಯ ಮತ್ತು ಇತರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಭಾರತ 78 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದಿದ್ದರೂ, ಫ್ಯಾಸಿಸ್ಟ್ ಬಿಜೆಪಿಯ ಆಳ್ವಿಕೆಯಲ್ಲಿ ಜನರು ನಿಜವಾಗಿಯೂ ಸ್ವತಂತ್ರರಾಗಿಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ‘ನನ್ನ ಹಾಗೂ ಅಭಿಷೇಕ್ ಬ್ಯಾನರ್ಜಿ ಜೀವಕ್ಕೆ ಬಿಜೆಪಿಯಿಂದ ಅಪಾಯ’: ಮಮತಾ ಬ್ಯಾನರ್ಜಿ
“ನಿಜವಾದ ಸ್ವಾತಂತ್ರ್ಯವನ್ನು ಸಾಧಿಸುವ ಕನಸಿನೊಂದಿಗೆ ನಾವು ಕೋಮು ಸಾಮರಸ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದೂ ತಿಳಿಸಿದ್ದಾರೆ.
ಇನ್ನು ಬಿಜೆಪಿ ವಿರುದ್ಧದ ತಮ್ಮ ಹಿಂದಿನ ಆರೋಪಗಳನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ, “ತಮ್ಮ ರಾಜ್ಯದ ಜನರು 100 ದಿನಗಳ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವೇತನವನ್ನು ಪಡೆಯುತ್ತಿಲ್ಲ. ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಂಗಾಳದಲ್ಲಿ ಎನ್‌ಆರ್‌ಸಿಯನ್ನು ಪರೋಕ್ಷವಾಗಿ ನಡೆಸಲು ಯತ್ನಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಈ ಪ್ರಯತ್ನ ಮಾಡುತ್ತಿದೆ” ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.
ಬಂಗಾಳಿ ಮಾತನಾಡುವ ಕೆಲವು ವಲಸೆ ಕಾರ್ಮಿಕರನ್ನು ನೆರೆಯ ದೇಶದ ನಾಗರಿಕರು ಮತ್ತು ಅಕ್ರಮ ವಲಸಿಗರು ಎಂಬ ನೆಪದಲ್ಲಿ ಬಾಂಗ್ಲಾದೇಶಕ್ಕೆ ತಳ್ಳಲಾಗುತ್ತಿದೆ ಎಂದೂ ದೂರಿದರು.
