ಸನಾತನ ಧರ್ಮ ನಿರ್ಮೂಲನೆ ಕುರಿತಾದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಸಂಸದ ಎ ರಾಜಾ ಹೇಳಿಕೆಗಳಿಗೆ ಕುರಿತಂತೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ ಎಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಮ ಧರ್ಮಗಳ ಬಗ್ಗೆ ಸಮಾನ ಗೌರವದ ಭಾವನೆ ಹೊಂದಿದೆ. ಒಂದು ಧರ್ಮಕ್ಕಿಂತ ಮತ್ತೊಂದು ಧರ್ಮ ಕೀಳು ಎಂದು ಯಾರೊಬ್ಬರೂ ಭಾವಿಸಬಾರದು. ಅಂತಹ ಹೇಳಿಕೆಗಳನ್ನು ಕಾಂಗ್ರೆಸ್ ನಂಬುವುದಿಲ್ಲ ಎಂದು ತಿಳಿಸಿದ್ದಾರೆ.
ಇಂಡಿಯಾ ಒಕ್ಕೂಟದ ಪ್ರತಿಯೊಬ್ಬ ಸದಸ್ಯನೂ ಎಲ್ಲ ಸಮುದಾಯ, ಧರ್ಮ ಮತ್ತು ನಂಬಿಕೆಗಳ ಬಗ್ಗೆ ಗೌರವ ಹೊಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅನ್ನು ಸೋಲಿಸುವ ಉದ್ದೇಶದಿಂದ ವಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ ಒಕ್ಕೂಟದಲ್ಲಿ ಡಿಎಂಕೆ ಸಹ ಇದೆ ಎಂದು ಪವನ್ ಖೇರಾ ಹೇಳಿದ್ದಾರೆ.
ಇದೇ ವೇಳೆ, ಇಂಡಿಯಾ, ಭಾರತ್ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಪವನ್ ಖೇರಾ, ಭಾರತ ಒಟ್ಟಾಗಿರುವುದನ್ನು ಕೆಲ ಶಕ್ತಿಗಳು ಸಹಿಸುವುದಿಲ್ಲ. ಹಾಗಾಗಿ, ಇಂಡಿಯಾ ಮತ್ತು ಭಾರತ ಎಂದು ಬಿರುಕು ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ
‘ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ, ಕೊರೊನಾ ರೋಗ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಉದಯನಿಧಿ ಹೇಳಿದ್ದರು.
ತಮಿಳುನಾಡಿನ ಸಂಸದ ಎ ರಾಜಾ, ಸನಾತನ ಧರ್ಮ ಎಚ್‌ಐವಿ, ಕುಷ್ಠ ರೋಗ ಇದ್ದಂತೆ. ಉದಯನಿಧಿ ಹೇಳಿಕೆ ಸರಿಯಾಗಿಯೆ ಇದೆ ಎಂದು ಸಮರ್ಥಿಸಿಕೊಂಡಿದ್ದರು.
ಉದಯನಿಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಇತರ ಸಚಿವರು ಪ್ರತಿಕ್ರಿಯಿಸಿದ ರೀತಿಯ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಗೆ ಪತ್ರ ಬರೆದಿರುವ ಎಂ ಕೆ ಸ್ಟಾಲಿನ್, ನನ್ನ ಮಗ ಎಲ್ಲಿಯೂ ‘ಜನಾಂಗೀಯ ಹತ್ಯೆ’ ಪದವನ್ನು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಬಳಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ದಬ್ಬಾಳಿಕೆಯ ತತ್ವಗಳ ವಿರುದ್ಧ ಉದಯನಿಧಿ ಅವರ ನಿಲುವನ್ನು ಸಹಿಸಲಾಗದ ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿ ಹಬ್ಬಿಸಿ, ಸನಾತನ ಚಿಂತನೆಯುಳ್ಳ ಜನರ ಹತ್ಯೆಗೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಸ್ಟಾಲಿನ್ ಪಿಎಂ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.