ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾದಲ್ಲಿ ವೀಸಾ ಸೇವೆಗಳನ್ನು ಭಾರತ ಸರ್ಕಾರ ಸ್ಥಗಿತಗೊಳಿಸಿದೆ.
“ಭಾರತೀಯ ರಾಯಭಾರಿ ಕಚೇರಿಯಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ, 21ನೇ ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಬಿಎಲ್‌ಎಸ್ ವೆಬ್‌ಸೈಟ್ ಪರಿಶೀಲಿಸುತ್ತಿರಿ” ಎಂಬ ಸಂದೇಶ ಕೆನಡಾದ ಭಾರತೀಯ ವೀಸಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ನಿಂದ ಪ್ರಕಟಿಸಲಾಗಿದೆ.
ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಆರೋಪಿಸಿದ ಮೂರು ದಿನಗಳ ನಂತರ ಈ ಬೆಳವಣಿಗೆಗಳು ಸಂಭವಿಸಿವೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ
ಕೆನಡಾದ ಪ್ರಧಾನಿ ಟ್ರುಡೊ ಅವರು ಸೋಮವಾರ ಮಾತನಾಡಿ, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಅವರ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದ್ದರು.
ಕೆನಡಾದ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಕೆನಡಾದ ಪ್ರಜೆಯ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟರು ನಡೆಸಿದ್ದಾರೆ ಎಂದು ನಂಬಲು ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಪುರಾವೆಗಳನ್ನು ಹೊಂದಿದ್ದಾರೆ ಎಂದು ಟ್ರೂಡೊ ಹೇಳಿದ್ದಾರೆ.
ಕೆನಡಾ ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಭಾರತ ಸರ್ಕಾರ, ಆರೋಪವು “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ, “ನಾವು ತಮ್ಮ ಸಂಸತ್ತಿನಲ್ಲಿ ಕೆನಡಾದ ಪ್ರಧಾನಿಯವರ ಹೇಳಿಕೆಯನ್ನು ನೋಡಿದ್ದು, ಇದನ್ನು ತಿರಸ್ಕರಿಸಿದ್ದೇವೆ. ಅಲ್ಲದೆ ಅವರ ವಿದೇಶಾಂಗ ಸಚಿವರ ಹೇಳಿಕೆಯನ್ನು ಸಹ ತಿರಸ್ಕರಿಸಿದ್ದೇವೆ” ಎಂದು ಹೇಳಿದೆ.