ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ದೇಶವು ಇಂದು ಕಮಲದ (ಬಿಜೆಪಿಯ) ಚಿಹ್ನೆಯನ್ನು ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಸಿಲುಕಿದೆ. ಆ ಚಕ್ರವ್ಯೂಹವನ್ನು ಆರು ಮಂದಿ ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಆರು ಜನ ಚಕ್ರವ್ಯೂಹದಲ್ಲಿ ಸಿಲುಕಿಸಿ ಹತ್ಯೆ ಮಾಡಿದ್ದರು. ಇದರ ಬಗ್ಗೆ ನಾನು ಸ್ವಲ್ಪ ಸಂಶೋಧನೆ ಮಾಡಿ ಬಂದಿದ್ದೇನೆ. ಚಕ್ರವ್ಯೂಹಕ್ಕೆ ಪದ್ಮ ಎಂದೂ ಕರೆಯಲಾಗುತ್ತದೆ. ಅಂದರೆ ಕಮಲ ರಚನೆ ಎಂದು ನನಗೆ ಗೊತ್ತಾಯಿತು. ‘ಚಕ್ರವ್ಯೂಹ’ ಕಮಲದ ಆಕಾರದಲ್ಲಿದೆ” ಎಂದು ಬಿಜೆಪಿ ನಾಯಕರನ್ನು ರಾಹುಲ್ ಗಾಂಧಿ ಕುಟುಕಿದ್ದಾರೆ.
“21ನೇ ಶತಮಾನದಲ್ಲಿ, ಹೊಸ ‘ಚಕ್ರವ್ಯೂಹ’ ರೂಪುಗೊಂಡಿದ್ದು ಅದು ಕಮಲದ ರೂಪದಲ್ಲಿದೆ. ಅದನ್ನು ಪ್ರಧಾನಿ ತಮ್ಮ ಎದೆಯ ಮೇಲೆ ಧರಿಸಿಕೊಂಡಿರುತ್ತಾರೆ. ಅಂದು ಅಭಿಮನ್ಯುವಿನೊಂದಿಗೆ ಏನು ಮಾಡಲಾಗಿದೆಯೋ ಅದನ್ನೇ ಇಂದು ನಮ್ಮ ದೇಶದ ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
“ಅಭಿಮನ್ಯುವನ್ನು ಆರು ಜನರು ಕೊಂದರು. ಈ ಆಧುನಿಕ ಯುಗದ ಚಕ್ರವ್ಯೂಹವನ್ನು ಕೇಂದ್ರದಲ್ಲಿ ಆರು ಮಂದಿ ನಿಯಂತ್ರಿಸುತ್ತಾರೆ. ಅವರೇ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ” ಎಂದು ರಾಹುಲ್ ಗಾಂಧಿ ಅಭಿಪ್ರಾಯಿಸಿದರು.
ರಾಹುಲ್ ಗಾಂಧಿ ಭಾಷಣಕ್ಕೆ ಸ್ಪೀಕರ್ ಓಂ ಬಿರ್ಲಾ ಅಸಮ್ಮತಿ ಸೂಚಿಸುತ್ತಿದ್ದಂತೆ, “ನೀವು ಬಯಸಿದರೆ, ನಾನು ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ), ಅಂಬಾನಿ ಮತ್ತು ಅದಾನಿ ಹೆಸರನ್ನು ಬಿಟ್ಟುಬಿಡುತ್ತೇನೆ. ಕೇವಲ ಮೂರು ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಅಬ್ಬರದ ಭಾಷಣ; ಹಿಂದೂ ಪರವೋ ವಿರುದ್ಧವೋ? Sansad I rahul gandhi I Hindu
“ನೀವು ನಿರ್ಮಿಸಿರುವ ‘ಚಕ್ರವ್ಯೂಹ’ವು ಕೋಟಿಗಟ್ಟಲೆ ಜನರಿಗೆ ಹಾನಿ ಉಂಟು ಮಾಡುತ್ತಿದೆ. ನಾವು ಈ ‘ಚಕ್ರವ್ಯೂಹ’ವನ್ನು ಒಡೆಯುತ್ತೇವೆ. ಅದನ್ನು ಸಾಧಿಸುವ ದಾರಿ ಜಾತಿ ಗಣತಿಯಾಗಿದೆ” ಎಂದು ರಾಹುಲ್ ಹೇಳಿದರು.
“ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಬೇಕೆಂದು ನಿರ್ಧರಿಸಿದರೆ, ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಸತತ ಮೂರು ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಕಾಲೆಳೆದರು.
#WATCH | LoP in Lok Sabha Rahul Gandhi says, "Thousands of years ago, in Kurukshetra, six people trapped Abhimanyu in a 'Chakravyuh' and killed him…I did a little research and found out that 'Chakravyuh' is also known as 'Padmavuyh' – which means 'Lotus formation'. 'Chakravyuh'… pic.twitter.com/bJ2EUXPhr8
— ANI (@ANI) July 29, 2024
ಕೇಂದ್ರ ಬಜೆಟ್ ಅನ್ನು ಟೀಕಿಸಿದ ರಾಹುಲ್
ಇನ್ನು ಜುಲೈ 22ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಅನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. “ಬಜೆಟ್ ತೆರಿಗೆ ಭಯೋತ್ಪಾದನೆಯ ಸಮಸ್ಯೆಯನ್ನು ಪರಿಹರಿಸಿಲ್ಲ ಮತ್ತು ಅದು ಸಣ್ಣ ಉದ್ಯಮಗಳಿಗೆ ತೀವ್ರವಾಗಿ ಹಾನಿ ಮಾಡಿದೆ” ಎಂದು ಹೇಳಿದರು.
“ಈ ಬಜೆಟ್ ಈ ‘ಚಕ್ರವ್ಯೂಹ’ದ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಈ ದೇಶದ ರೈತರಿಗೆ, ಯುವಕರಿಗೆ ಸಹಾಯ ಮಾಡುತ್ತದೆ, ಈ ದೇಶದ ಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ನಾನು ನೋಡಿದ್ದಂತೆ ಈ ಬಜೆಟ್‌ನ ಏಕೈಕ ಗುರಿ ರಾಜಕೀಯ ಏಕಸ್ವಾಮ್ಯವಾಗಿದೆ” ಎಂದು ಬಜೆಟ್ ಅನ್ನು ಟೀಕಿಸಿದರು.