ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತವು ‘ಹಿಂದೂ ರಾಷ್ಟ್ರ’ ಎಂದು ಶನಿವಾರ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಟೀಕಿಸಿದ್ದಾರೆ. ಭಾರತವು ಎಂದಿಗೂ ‘ಹಿಂದೂ ರಾಷ್ಟ್ರ’ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಭಾಗವತ್ ಹೇಳಿಕೆಯನ್ನು ಖಂಡಿಸಿ ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಭಾರತವು ಹಿಂದೂ ರಾಷ್ಟ್ರವಲ್ಲ ಮತ್ತು ಅದು ಎಂದಿಗೂ ಹಿಂದೂ ರಾಷ್ಟ್ರ ಆಗಿರಲಿಲ್ಲ. ಭಾರತವು ಅಂತರ್ಗತವಾಗಿ ಬಹುತ್ವದ ರಾಷ್ಟ್ರವಾಗಿದೆ,” ಎಂದು ಬರೆದುಕೊಂಡಿದ್ದಾರೆ.
“ನಮ್ಮ ಸಂವಿಧಾನವು ಜಾತ್ಯತೀತ ರಾಜ್ಯದ ಕಲ್ಪನೆಯನ್ನು ಆಧರಿಸಿದೆ. ಭಾರತದಲ್ಲಿರುವ ಎಲ್ಲ ಜನರು ಭಾರತೀಯರು. ನಮ್ಮ ಭಾರತೀಯ ಸಂವಿಧಾನವು ಎಲ್ಲ ಧರ್ಮಗಳು, ನಂಬಿಕೆಗಳು, ಪಂಗಡಗಳು ಮತ್ತು ಸಂಸ್ಕೃತಿಗಳ ಪ್ರಾತಿನಿಧ್ಯವನ್ನು ಪ್ರತಿನಿಧಿಸುತ್ತದೆ,” ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
ನಾಗ್ಪುರದಲ್ಲಿ ‘ಮಧುಕರ್ ಭವನ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್, “ಭಾರತವು ‘ಹಿಂದೂ ರಾಷ್ಟ್ರ’ ಮತ್ತು ಎಲ್ಲ ಭಾರತೀಯರು ಹಿಂದುಗಳು. ಹಿಂದೂಗಳು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತಾರೆ,” ಎಂದು ಹೇಳಿದ್ದರು.
“ಹಿಂದೂಸ್ತಾನ್ (ಭಾರತ) ಒಂದು ‘ಹಿಂದೂ ರಾಷ್ಟ್ರ’. ಸೈದ್ಧಾಂತಿಕವಾಗಿ, ಎಲ್ಲ ಭಾರತೀಯರು (ಭಾರತೀಯರು) ಹಿಂದೂಗಳು ಮತ್ತು ಹಿಂದೂಗಳು ಎಂದರೆ ಎಲ್ಲ ಭಾರತೀಯರು. ಇಂದು ಭಾರತದಲ್ಲಿರುವವರೆಲ್ಲರೂ ಹಿಂದೂ ಸಂಸ್ಕೃತಿ, ಹಿಂದೂ ಪೂರ್ವಜರು ಮತ್ತು ಹಿಂದೂ ಭೂಮಿಗೆ ಸಂಬಂಧಿಸಿರುತ್ತಾರೆ. ಇವುಗಳನ್ನು ಹೊರತುಪಡಿಸಿ ಬೇರೇನೂ ಇಲ್ಲ” ಎಂದು ಹೇಳಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಮಾಜಿ ಸಚಿವ ಹಾಲಪ್ಪ ಆಚಾರ್ ಗನ್‌ಮ್ಯಾನ್ ವಿರುದ್ಧ ವಂಚನೆ ಆರೋಪ; ದೂರು ದಾಖಲು
“ಕೆಲವರು ಇದನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ, ಕೆಲವರು ತಮ್ಮ ಅಭ್ಯಾಸಗಳು ಮತ್ತು ಸ್ವಾರ್ಥದಿಂದಾಗಿ ಅರ್ಥಮಾಡಿಕೊಂಡ ನಂತರವೂ ಅದನ್ನು ಕಾರ್ಯಗತಗೊಳಿಸುತ್ತಿಲ್ಲ. ಅಲ್ಲದೆ, ಕೆಲವರು ಇದನ್ನು ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ ಅಥವಾ ಮರೆತಿದ್ದಾರೆ” ಎಂದು ಆರ್‌ಎಸ್ಎಸ್ ಮುಖ್ಯಸ್ಥರು ಹೇಳಿದ್ದರು.