ಇಡೀ ಭಾರತವು ಮಣಿಪುರ ಮತ್ತು ಹರಿಯಾಣದಂತಾಗುವುದನ್ನು ತಡೆಯಲು ‘ಇಂಡಿಯಾ’ ಮೈತ್ರಿಕೂಟ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದರು.
ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ ತಮ್ಮ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಮಾತನಾಡಿರುವ ಎಂ ಕೆ ಸ್ಟಾಲಿನ್, ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತಾನು ಚುನಾವಣೆಗೂ ಮುಂಚೆ ನೀಡಿದ್ದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕುರಿತ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
2002ರಲ್ಲಿನ ಗುಜರಾತ್ ಗಲಭೆಗಳನ್ನೂ ಉಲ್ಲೇಖಿಸಿರುವ ಡಿಎಂಕೆ ಮುಖ್ಯಸ್ಥರೂ ಆದ ಎಂ ಕೆ ಸ್ಟಾಲಿನ್, 2002ರಲ್ಲಿ ಗುಜರಾತ್‌ನಲ್ಲಿ ಬಿತ್ತಿದ ದ್ವೇಷವು, 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹಾಗೂ ಹರಿಯಾಣದಲ್ಲಿನ ಕೋಮು ಸಂಘರ್ಷವಾಗಿ ಫಲ ನೀಡಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದಂತೆ ಎಲ್ಲ ನಾಗರಿಕರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಜಮಾ ಮಾಡಿಲ್ಲ. ರೈತರ ಆದಾಯ ದ್ವಿಗುಣಗೊಂಡಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರೂ ಅದೂ ಆಗಲಿಲ್ಲ” ಎಂದು ಕೇಂದ್ರ ಸರ್ಕಾರದ ವಿರುದ್ಧ ಎಂ ಕೆ ಸ್ಟಾಲಿನ್ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಸೆ.5ರಂದು ‘ಇಂಡಿಯಾ’ ಸಂಸದರ ಸಭೆ ಕರೆದ ಖರ್ಗೆ; ಒಂದು ಚುನಾವಣೆಯ ಬಗ್ಗೆ ವಾಗ್ದಾಳಿ
ಬಹುಸಂಸ್ಕೃತಿ ಹಾಗೂ ವೈವಿಧ್ಯಮಯ ಭಾರತವನ್ನು ನಿರ್ಮಿಸುವಂತೆ ಜನತೆಗೆ ಕರೆ ನೀಡಿರುವ ಸ್ಟಾಲಿನ್, ಸಾರ್ವಜನಿಕ ವಲಯದ ಉದ್ಯಮಗಳನ್ನು ಹಾಳುಗೆಡವಿ, ಅವುಗಳನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಹಸ್ತಾಂತರಿಸುತ್ತಿರುವ ವಿಷಯವನ್ನು ಮರೆಮಾಚಲು ಬಿಜೆಪಿಯು ಕೋಮುವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ, ಸಾಮಾಜಿಕ ಸಾಮರಸ್ಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ ರಾಜಕೀಯ ಮತ್ತು ಸಮಾಜವಾದವನ್ನು ಪುನಃಸ್ಥಾಪಿಸಲು ‘ಇಂಡಿಯಾ’ ಒಕ್ಕೂಟವನ್ನು ರಚಿಸಲಾಗಿದೆ. ದೇಶದಲ್ಲಿನ ದ್ವೇಷ ವಾತಾವರಣವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಯಾರೂ ಭಾರತವನ್ನು ಉಳಿಸಲು ಸಾಧ್ಯವಿಲ್ಲ” ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದರು.
“ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದಾಗಲೆಲ್ಲಾ ಡಿಎಂಕೆ ಯಾವಾಗಲೂ ಮುಂಚೂಣಿಯಲ್ಲಿದೆ” ಎಂದು ಸ್ಟಾಲಿನ್ ಹೇಳಿದರು.