ಈ ದಿನ ವಿಶೇಷ | ಭಾರತೀಯ ಚಿತ್ರರಂಗ ತನ್ನ ‘ಜಾತ್ಯತೀತ’ ಐಡೆಂಟಿಟಿಯನ್ನೇ ಮರೆಯುತ್ತಿದೆಯೇ?

Date:

Advertisements

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೋಮು ವಿಭಜನೆಯ ಆತಂಕಕಾರಿ ಬೆಳವಣಿಗೆಗಳು ಹೆಚ್ಚಾಗುತ್ತಿವೆ. ಕೋಮು ದ್ವೇಷವು ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿದೆ. ಜಾತ್ಯತೀತತೆ ಕಾಣೆಯಾಗುತ್ತಿದೆ. ಇತ್ತೀಚೆಗೆ ನಡೆದ ತನ್ನ ಒಂಬತ್ತು ವರ್ಷದ ಮಗು ಗಡ್ಡಧಾರಿ ವ್ಯಕ್ತಿಯೊಂದಿಗೆ ಮಾತನಾಡಲು ನಿರಾಕರಿಸಿದ ಘಟನೆಯು ಹಿಂದು-ಮುಸ್ಲಿಂ ಕೋಮು ವಿಭಜನೆ ಎಳೆ ಮಕ್ಕಳ ಮನಸ್ಸನ್ನೂ ಮುಟ್ಟಿದೆ ಎಂಬುದಕ್ಕೆ ಕನ್ನಡಿ ಹಿಡಿದೆ.

ಆ ಮಗುವಿನ ನಿರಾಕರಣೆಯು ಚಿಕ್ಕ ಸಂಗತಿಯಂತೆ ಕಾಣುತ್ತದೆ. ಆದರೆ, ಅಲ್ಲಿ ದ್ವೇಷವು ಮೌನವಾಗಿ ಕೆಲಸ ಮಾಡುತ್ತಿದೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂಬ ಪೂರ್ವಗ್ರಹಗಳು ಹೆಚ್ಚುತ್ತಿವೆ. ತರಕಾರಿಗಳು ಮತ್ತು ಹಣ್ಣುಗಳ ಮೇಲೆ ಅವರು ಉಗುಳುತ್ತಾರೆ ಎಂಬ ಅಸಂಬದ್ಧ ವದಂತಿಗಳು ಕೋಮು ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಕೆಲವು ಸುದ್ದಿ ವಾಹಿನಿಗಳು ಇಂತಹ ಕೋಮು ದ್ವೇಷದ ವಿಷಯಗಳನ್ನೂ ಉದ್ದೇಶಪೂರ್ವಕವಾಗಿ, ಬಿಜೆಪಿ/ಆರ್‌ಎಸ್‌ಎಸ್‌ನ ಅಜೆಂಡಾದ ಭಾಗವಾಗಿ ಪ್ರಸಾರ ಮಾಡುತ್ತಿವೆ.  ಈಗ, ಈ ಕೋಮು ದ್ವೇಷವು ಎಲ್ಲ ವಯೋಮಾನದವರು ವೀಕ್ಷಿಸುತ್ತಿರುವ ಚಲನಚಿತ್ರಗಳಿಗೂ ಪಸರಿಸಿದೆ.

ಉದಾಹರಣೆಗೆ, 1990ರ ದಶಕದಲ್ಲಿ ಕಾಶ್ಮೀರವನ್ನು ತೊರೆದ ಕಾಶ್ಮೀರಿ ಪಂಡಿತರ ಬಗ್ಗೆ ಚಿತ್ರಿಸಿದ ‘ಕಾಶ್ಮೀರ್ ಫೈಲ್ಸ್’ ಸಿನಿಮಾ, ಚಿತ್ರಮಂದಿರಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು ಮತ್ತು ಘೋಷಣೆಗಳಂತಹ ಹಲವಾರು ನಿದರ್ಶನಗಳಿಗೆ ಸಾಕ್ಷಿಯಾಯಿತು.

Advertisements

ಅಸ್ತಿತ್ವದಲ್ಲಿರುವ ಎಲ್ಲ ರೀತಿಯ ಮನರಂಜನಾ ಪ್ರಕಾರಗಳಲ್ಲಿ ಸಿನಿಮಾ ಹೆಚ್ಚು ಪ್ರಭಾವಿ ಮಾಧ್ಯಮವಾಗಿದೆ. ಗ್ರಹಿಕೆಗಳನ್ನು ರೂಪಿಸುವಲ್ಲಿ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಹಾಗೂ ವೈಯಕ್ತಿಕ ನಡವಳಿಕೆಯನ್ನು ನಿಯಂತ್ರಿಸುವಲ್ಲಿ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತದೆ.

ಈ ಚಲನಚಿತ್ರಗಳು ಸ್ವಾತಂತ್ರ್ಯಕ್ಕಾಗಿ ದೇಶದ ಹೋರಾಟವನ್ನು ತೋರಿಸುವುದರಿಂದ ಹಿಡಿದು ಒಲಿಂಪಿಕ್ ಪದಕವನ್ನು ಗೆಲ್ಲಲು ವ್ಯಕ್ತಿಯ ಹೋರಾಟದ ಕಥೆಯವರೆಗೆ ಎಲ್ಲವನ್ನು ಒಳಗೊಳ್ಳುತ್ತವೆ. ಸಿನಿಮಾಗಳು ರಾಷ್ಟ್ರದ ಗೆಲುವು ಮತ್ತು ಸೋಲುಗಳನ್ನು ಎತ್ತಿ ತೋರಿಸುತ್ತವೆ. ಐತಿಹಾಸಿಕ ವ್ಯಕ್ತಿಗಳ ಜೀವನವನ್ನು ಪ್ರಸ್ತುತಪಡಿಸುತ್ತವೆ. ಅದಕ್ಕಿಂತ ಹೆಚ್ಚಾಗಿ, ಚಲನಚಿತ್ರದಲ್ಲಿ ಯಾವುದೇ ವಿಷಯವನ್ನು ಪ್ರಸ್ತುತಪಡಿಸುವ ವಿಧಾನದಲ್ಲಿ ಸಿನಿಮಾ ಕತೆಯು ಕಾಲ್ಪನಿಕ ಕೃತಿ ಅಥವಾ ಸತ್ಯ ಘಟನೆಗಳಿಂದ ‘ಪ್ರೇರಿತ’ ಎಂಬ ಹೇಳಿಕೆಯ ಅಡಿಯಲ್ಲಿ ಪ್ರಸ್ತುತಪಡಿಸಿದರೂ ಸಹ ಪ್ರೇಕ್ಷಕರ ಮನಸ್ಸಿನಲ್ಲಿ ನೈಜ ಘಟನೆಗಳಾಗಿಯೇ ನೆನಪಿನಲ್ಲುಳಿಯುತ್ತವೆ.

ಸಿನಿಮಾಗಳ ಪ್ರಭಾವವನ್ನು ಹಲವಾರು ಪ್ರತಿಭಟನೆಗಳ ನಿದರ್ಶನಗಳಿಂದ ಅಳೆಯಬಹುದು. ಉದಾಹರಣೆಗೆ, ಪದ್ಮಾವತ್ ಅಥವಾ ಓಹ್ ಮೈ ಗಾಡ್‌-2 ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ ಹಲವರು ರಸ್ತೆ ಮತ್ತು ವಾಹನಗಳನ್ನು ಹಾನಿಗೊಳಿಸಿದ್ದರು. ಆ ಸಿನಿಮಾಗಳ ಬಿಡುಗಡೆಗೆ ಮುನ್ನವೇ ಭಾರೀ ಪ್ರತಿಭಟನೆ, ಗಲಾಟೆಗಳು ನಡೆದವು. ಕೆಲವು ಚಲನಚಿತ್ರಗಳು ಧಾರ್ಮಿಕ ಅಥವಾ ಇತರ ಭಾವನೆಗಳಿಗೆ ನೋವುಂಟು ಮಾಡಬಹುದೆಂಬ ಜನರ ಮನಸ್ಸಿನಲ್ಲಿರುವ ಆತಂಕವನ್ನು ಆಧರಿಸಿವೆ. ಪ್ರತಿಭಟನೆಯ ಇನ್ನೊಂದು ರೂಪವಾಗಿ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ‘ಬಹಿಷ್ಕಾರ’ ಪ್ರವೃತ್ತಿ ಮುನ್ನೆಲೆಯಲ್ಲಿದೆ. ಪಠಾಣ್ ಮತ್ತು ಲಾಲ್ ಸಿಂಗ್ ಚಡ್ಡಾದಂತಹ ಅನೇಕ ಚಲನಚಿತ್ರಗಳು ಬಿಡುಗಡೆಗೆ ಮುಂಚೆಯೇ ಬಾಯ್‌ಕಾಟ್‌(ಬಹಿಷ್ಕಾರ)ವನ್ನು ಅನುಭವಿಸಿವೆ. ಸಿನಿಮಾಗಳ ಬಿಡುಗಡೆಗೆ ತಡೆ ಕೋರಿ ಹಲವು ಬಾರಿ ನ್ಯಾಯಾಲಯಗಳಲ್ಲಿ ಅರ್ಜಿಗಳೂ ದಾಖಲಾಗಿವೆ.

ಚಲನಚಿತ್ರಗಳಿಗೆ ದೊಡ್ಡ ಶಕ್ತಿ ಇದೆ. ಆದರೆ, ಇಂದಿನ ದಿನಗಳಲ್ಲಿ ಈ ಶಕ್ತಿಯನ್ನು ಎಷ್ಟು ಜವಾಬ್ದಾರಿಯುತವಾಗಿ ಬಳಸಲಾಗುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ!

ಒಂದು ಕಾಲದಲ್ಲಿ ‘ಅಮರ್, ಅಕ್ಬರ್, ಆಂಥೋನಿ’ಯಂತಹ ಸಿನಿಮಾಗಳನ್ನು ಹೆಚ್ಚು ಹೆಚ್ಚು ಜನರು ವೀಕ್ಷಿಸುವಂತೆ ಪ್ರೋತ್ಸಾಹಿಸಲು ತೆರಿಗೆ ವಿನಾಯತಿ ನೀಡಲಾಗಿತ್ತು. ಯಾಕೆಂದರೆ, ಆ ಸಿನಿಮಾ ಧಾರ್ಮಿಕ ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ಹೊಂದಿದೆ. ಸಮಾನತೆ, ಸಮಾಜವಾದ, ಪ್ರಜಾಪ್ರಭುತ್ವ, ಭ್ರಾತೃತ್ವ ಹಾಗೂ ಜಾತ್ಯತೀತತೆಯಂತಹ ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸ್ಪಷ್ಟ ವಿಷಯಗಳನ್ನು ಆವರಾ, ಶ್ರೀ 420, ಅಸಲಿ ನಕ್ಲಿ, ನಯಾ ದೌರ್, ಪೈಗಮ್, ಗೈಡ್, ಪಿಕೆ ಹಾಗೂ ಸ್ವದೇಸ್ ಸೇರಿದಂತೆ ಮುಂತಾದ ಚಲನಚಿತ್ರಗಳಲ್ಲಿ ಗಮನಿಸಬಹುದು.

ಸಾಮಾನ್ಯ ಕಥಾವಸ್ತುವು ನಾಯಕನನ್ನು ಅತ್ಯುತ್ತಮನೆಂದು ಚಿತ್ರಿಸುತ್ತವೆ. ಚಿತ್ರದ ನಾಯಕನು ಶ್ರೀಮಂತನಾಗಿ ಹುಟ್ಟುತ್ತಾನೆ ಅಥವಾ ಶ್ರೀಮಂತಿಕೆಯನ್ನು ಹೊಂದಿರುತ್ತಾನೆ. ಆದರೆ, ಆತ ಉದಾತ್ತ ಕಾರಣಕ್ಕಾಗಿ ತನ್ನ ಶ್ರೀಮಂತಿಕೆ ಮತ್ತು ಬಡವರ ಮೇಲಿನ ಶೋಷಣೆಯಲ್ಲಿ ಖಂಡಿಸುತ್ತಾನೆ. ಇಂತಹ ಸಿನಿಮಾಗಳನ್ನು ಚಿತ್ರರಂಗ ನೀಡಿದೆ.

ಆದರೆ, ಇಂದಿನ ಸನ್ನಿವೇಶದಲ್ಲಿ ಸಿನಿಮಾಗಳು ಸಮಾಜವನ್ನು ಭಯಾನಕವಾಗಿಸುತ್ತಿವೆ. ‘ಕಾಶ್ಮೀರ ಫೈಲ್ಸ್’, ‘ಕೇರಳ ಸ್ಟೋರಿ’ ಮತ್ತು ‘ಹಮಾರೆ ಭಾರತ್’ದಂತಹ ಚಲನಚಿತ್ರಗಳು ಕೋಮು ದ್ವೇಷವನ್ನು ಬಳಸಿಕೊಂಡು ಲಾಭ ಗಳಿಸುವ ಏಕೈಕ ಉದ್ದೇಶದಿಂದ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಮಾತ್ರವಲ್ಲದೆ, ಆ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸಿವೆ. ಸಿನಿಮಾದಲ್ಲಿನ ಕೋಮು ದ್ವೇಷವನ್ನು ಸಮಾಜವು ಒಪ್ಪಿಕೊಳ್ಳುತ್ತಿದೆ.

ಸಹಜವಾಗಿ, ಇನ್ನೊಂದು ಕಾರಣವಿದೆ– ಅದು ಪೂರ್ವಗ್ರಹಗಳ ಗಟ್ಟಿಗೊಳಿಸುವಿಕೆ. ಇದು ವಿಭಜಕ ರಾಜಕೀಯ ಸಂಸ್ಕೃತಿಗೆ ಸಹಾಯ ಮಾಡುತ್ತಿದೆ. ಇದರಿಂದ, ಈಗಾಗಲೇ ಗುರಿಯಾಗಿರುವ ಮತ್ತು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು ಮತ್ತಷ್ಟು ಬಹಿಷ್ಕಾರಕ್ಕೊಳಗಾಗುತ್ತಾರೆ ಮತ್ತು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ದುರ್ಬಲರಾಗುತ್ತಾರೆ.

ಕೇರಳ ಸ್ಟೋರಿ ಚಲನಚಿತ್ರವು ಭಾರತದಲ್ಲಿನ ಮುಸ್ಲಿಮರು ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಮತಾಂತರಗೊಳಿಸಲು ಉದ್ದೇಶಿತ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ತೊಡಗಿದ್ದಾರೆ ಎಂಬ ಕಂತೆ ಪುರಾಣವನ್ನು ಪ್ರಬಲವಾಗಿ ಪ್ರತಿಪಾದಿಸಿದೆ. ಅಂತಹ ‘ಸಾವಿರಾರು’ ಹುಡುಗಿಯರನ್ನು ಮತಾಂತರಿಸಲಾಗಿದೆ. ಅವರನ್ನು ಐಎಸ್‌ಐಎಸ್‌ನ ಭಾಗವಾಗಲು ಕಳುಹಿಸಲಾಗಿದೆ ಎಂದು ಯಾವುದೇ ಪುರಾವೆಗಳಿಲ್ಲದೆ ಸಿನಿಮಾದಲ್ಲಿ ಹೇಳಲಾಗಿದೆ. ಮಾತ್ರವಲ್ಲದೆ, ಭಾರತದಲ್ಲಿನ ಮುಸ್ಲಿಮರು ರಾಷ್ಟ್ರಕ್ಕಿಂತ ಹೆಚ್ಚಾಗಿ ಇಸ್ಲಾಮಿಗೆ ಹೆಚ್ಚಿನ ನಿಷ್ಠೆಯನ್ನು ಹೊಂದಿರುತ್ತಾರೆ ಎಂದು ಚಲನಚಿತ್ರವು ಬಿಂಬಿಸಿದೆ. ಇದು, ವಾಸ್ತವವನ್ನು ತಿರುಚಿದ ಸಿನಿಮಾವೆಂಬುದು ಸುಪ್ರೀಂ ಕೋರ್ಟ್‌ನಿಂದ ಸಾಬೀತಾಯಿತು. ಯಾವುದೇ ದೃಢೀಕೃತ ಅಂಕಿಅಂಶ ಇಲ್ಲದೆ, ಇಂತಹ ಪ್ರತಿಪಾದನೆಗಳನ್ನು ಮಾಡಬಾರದೆಂದು ಸಿನಿಮಾ ತಯಾರಕರಿಗೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿತು. ಇಲ್ಲದಿದ್ದರೆ, ಕೇರಳ ಸ್ಟೋರಿ ಒಂದು ಸಮುದಾಯವನ್ನು ಸಂಪೂರ್ಣವಾಗಿ ದ್ರೋಹಿಗಳನ್ನಾಗಿ ಮಾಡುತ್ತಿತ್ತು.

ಇತ್ತೀಚೆಗೆ ಬಿಡುಗಡೆಯಾದ ‘ಹಮಾರೆ ಬರಾಹ್’ ಸಿನಿಮಾ ಕೂಡ ಮುಸ್ಲಿಂ ಸಮುದಾಯವನ್ನು ಪ್ರಚೋದನಕಾರಿ ಮತ್ತು ಅವಮಾನಕರ ರೀತಿಯಲ್ಲಿ ಚಿತ್ರಿಸಿದೆ. ಈ ಚಿತ್ರದ ಬಿಡುಗಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಚಿತ್ರದ ಟೀಸರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿರುವುದನ್ನು ಗಮನಿಸಿದ ಕೋರ್ಟ್‌ ಆರಂಭದಲ್ಲಿ ಬಿಡುಗಡೆಗೆ ತಡೆಯೊಡ್ಡಿತ್ತು.

ಚಿತ್ರರಂಗವು ಯಾವ ವಿಷಯವನ್ನು ಮುಂದಿಡಲು ಆಯ್ಕೆಮಾಡುತ್ತದೆ ಎಂಬುದರಲ್ಲಿ, ಯಾವುದೇ ಜವಾಬ್ದಾರಿ ಇರುವುದಿಲ್ಲವೇ ಎಂಬ ಪ್ರಶ್ನೆಯೂ ಇದೆ. ದೇಶದ ಶತಕೋಟಿ ಜನರ ಪ್ರೀತಿ ಮತ್ತು ವಾತ್ಸಲ್ಯವನ್ನು ಗೌರವಿಸಿ, ಅವುಗಳನ್ನು ಕೊಂಡೊಯ್ಯಬೇಕಾದ ಜವಾಬ್ದಾರಿ ಸಿನಿಮಾಗಳಿಗಿದೆ. ಅಲ್ಲದೆ, ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್’ (ಸಿಬಿಎಫ್‌ಸಿ) ಅಥವಾ ನ್ಯಾಯಾಲಯಗಳ ಮೂಲಕ ತಾಂತ್ರಿಕ ತಡೆಯೊಡ್ಡಬಹುದು. ಹೆಚ್ಚುವರಿಯಾಗಿ, ಸಿನಿಮಾಟೋಗ್ರಾಫ್ ಆಕ್ಟ್-1952ರ ಸೆಕ್ಷನ್ 5Bಯ ಉಪ-ವಿಭಾಗ (2)ರ ಅಡಿಯಲ್ಲಿ ಚಲನಚಿತ್ರದ ವಿಷಯವನ್ನು ಪರಿಶೀಲಿಸಲು CBFCಗೆ ಅಧಿಕಾರವಿದೆ.

  1. ಸಿನಿಮಾದ ವಿಷಯವು ಸಮಾಜದ ಮೌಲ್ಯಗಳು ಮತ್ತು ಮಾನದಂಡಗಳಿಗೆ ಜವಾಬ್ದಾರಿಯುತ ಮತ್ತು ಸಂವೇದನಾಶೀಲವಾಗಿದೆಯೇ;
  2. ಜನಾಂಗೀಯ, ಧಾರ್ಮಿಕ ಅಥವಾ ಇತರ ಗುಂಪುಗಳ ಅವಹೇಳನಕಾರಿ ದೃಶ್ಯಗಳು ಅಥವಾ ಪದಗಳನ್ನು ಪ್ರಿತಿಪಾದಿಸುತ್ತದೆಯೇ; ಮತ್ತು
  3. ಕೋಮುವಾದ, ಅಸ್ಪಷ್ಟತೆ, ವೈಜ್ಞಾನಿಕ ಮತ್ತು ರಾಷ್ಟ್ರ ವಿರೋಧಿ ಧೋರಣೆಗಳನ್ನು ಉತ್ತೇಜಿಸುವ ದೃಶ್ಯಗಳು ಅಥವಾ ಪದಗಳನ್ನು ಒಳಗೊಂಡಿದೆಯೇ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯಕಾರಿಯಾಗಿದೆಯೇ ಎಂಬುದನ್ನು ಸಿಬಿಎಫ್‌ಸಿ ಪರಿಶೀಲಿಸುತ್ತದೆ.

ಚಲನಚಿತ್ರಗಳು ಕೋಮು ಸೌಹಾರ್ದತೆಗೆ ಹಾನಿ ಮಾಡಬಾರದು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮೇಲಿನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಇವು ಚಲನಚಿತ್ರಗಳನ್ನು ನಿರ್ಮಿಸಲು ಚಲನಚಿತ್ರೋದ್ಯಮದ ಮೇಲೆ ವಿಧಿಸಲಾದ ಕಡ್ಡಾಯ ಬಾಧ್ಯತೆಯಾಗಿವೆ. ಅಲ್ಲದೆ, ಸಿನಿಮಾಗಳು ನಮ್ಮ ರಾಷ್ಟ್ರದ ಆದರ್ಶಗಳಿಗೆ ಅನುಗುಣವಾಗಿರಬೇಕು ಎಂದು ಸೂಚಿಸುತ್ತವೆ.

ಹಿಂದಿ ಹಾಡು:
ತೂ ಹಿಂದು ಬನೇಗಾ ನಾ ಮುಸಲ್ಮಾನ್ ಬನೇಗಾ
ಇನ್ಸಾನ್ ಕಿ ಔಲಾದ್ ಹೈ ಇನ್ಸಾನ್ ಬನೇಗಾ
ಮಲಿಕ್ ನೆ ಇನ್ಸಾನ್ ಕೋ ಇನ್ಸಾನ್ ಬನಾಯಾ
ಹುಮ್ನೆ ಉಸ್ಸೆ ಹಿಂದು ಯಾ ಮುಸಲ್ಮಾನ್ ಬನಾಯಾ
ಕುದ್ರತ್ ನೆ ತೋ ಬಕ್ಷೀ ಥಿ ಹುಮೇ ಏಕ್ ಹೈ ಧರ್ತಿ
ಹುಮನೇ ಕಹೀಂ ಭಾರತ ಕಹಿಂ ಇರನ ಬನಾಯಾ

(ನೀವು ಹಿಂದೂ ಆಗುವುದಿಲ್ಲ, ಮುಸಲ್ಮಾನರೂ ಆಗುವುದಿಲ್ಲ
ಮಾನವ ಸಂತತಿ, ನೀವು ಮನುಷ್ಯರಾಗುತ್ತೀರಿ
ಸೃಷ್ಟಿಕರ್ತನು ಮನುಷ್ಯರನ್ನು ಮನುಷ್ಯರನ್ನಾಗಿ ಸೃಷ್ಟಿಸಿದನು
ನಾವು ಅವರಲ್ಲಿ ಹಿಂದು ಮತ್ತು ಮುಸ್ಲಿಮರನ್ನು ಸೃಷ್ಟಿಸಿದ್ದೇವೆ
ಪ್ರಕೃತಿ ನಮಗೆ ಕೊಟ್ಟಿದ್ದು ಒಂದೇ ಭೂಮಿ
ಆದರೆ, ನಾವು ಇಲ್ಲಿ ಭಾರತವನ್ನು ಮತ್ತು ಅಲ್ಲಿ ಇರಾನ್ಅನ್ನು ರಚಿಸಿದ್ದೇವೆ)

ಈ ಅರ್ಥಗರ್ಭಿತ ಹಾಡು – ಧಾರ್ಮಿಕ ಸಮುದಾಯಗಳ ನಡುವಿನ ಏಕತೆ ಮತ್ತು ಸಮಾಜದ ಜಾತ್ಯತೀತ ರಚನೆಯ ಸಂರಕ್ಷಣೆಯನ್ನು ಅತ್ಯುನ್ನತ ಆದರ್ಶವೆಂದು ಭಾರತವು ಪರಿಗಣಿಸಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಈ ವರದಿ ಓದಿದ್ದೀರಾ?: ಮಹಾರಾಜ್ | ಸಾಮಾಜಿಕ ಕ್ರಾಂತಿಯ ಕಥನವೂ, ಚಿತ್ರರಂಗದ ಕರ್ಮ ಸಿದ್ಧಾಂತದ ಗುರಾಣಿಯೂ

ನಮ್ಮ ದೇಶದ ಇತಿಹಾಸವು ಧಾರ್ಮಿಕ ಸಮುದಾಯಗಳು ಸಾಮರಸ್ಯದಿಂದ ಸಹಬಾಳ್ವೆಯ ನಿದರ್ಶನಗಳಿಂದ ತುಂಬಿದೆ. ಪರಸ್ಪರ ಸಹಿಷ್ಣುತೆಯನ್ನು ಹೊಂದಿದೆ. ಇದು ಸಹ ಭಾವನೆಯ ಮನೋಭಾವದಿಂದ ನಿರ್ಮಾಣಗೊಂಡಿದೆ. ಭಾರತವು ನಾಗರಿಕರ ಭ್ರಾತೃತ್ವ ಮತ್ತು ಸಮಾನತೆಯನ್ನು ಸಂವಿಧಾನದ ಪೀಠಿಕೆಯು ಒತ್ತಿ ಹೇಳುತ್ತದೆ. ಅದನ್ನು ಚಿತ್ರರಂಗವು ಪಾಲಿಸಬೇಕಿದೆ. ಆದರೆ, ಚಿತ್ರರಂಗವು ಕೋಮುವಾದೀಕರಣಗೊಳ್ಳುತ್ತಿದೆ. ಬಿಜೆಪಿ/ಆರ್‌ಎಸ್‌ಎಸ್‌ ಸಿದ್ಧಾಂತಗಳು ಸಿನಿಮಾ ರಂಗವನ್ನು ಆವರಿಸಿಕೊಂಡಿವೆ. ಚಿತ್ರರಂಗವನ್ನು ಕೋಮುವಾದ, ದ್ವೇಷ, ವಿಭಜನಾಕಾರಿಗಳಿಂದ ಹೊರತರಬೇಕಾದ ತುರ್ತು ಈ ದೇಶಕ್ಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

ಕಳೆದ ಕೆಲವು ತಿಂಗಳುಗಳಿಂದ ಅಂಬಾನಿ ಅವರ ರಿಲಯನ್ಸ್‌ ಸಂಸ್ಥೆಗೆ ಸೇರಿದ, ಮುಕೇಶ್...

ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡಿಕ್ಕಿ ಕೊಲೆ: ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ...

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

Download Eedina App Android / iOS

X