ಪ್ರಸ್ತುತ, ಭಾರತದ ತಲಾ ಆದಾಯವು 2,730 ಡಾಲರ್‌ಗಳಿದ್ದು, ಇದು, ಮುಂದಿನ ಐದು ವರ್ಷಗಳಲ್ಲಿ 2,000 (2,700 ಡಾಲರ್‌ಗೆ) ಡಾಲರ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, “ಭಾರತವು ಪ್ರಸ್ತುತ ತಲಾ ಆದಾಯದ ಮಟ್ಟವನ್ನು ತಲುಪಲು 75 ವರ್ಷಗಳನ್ನು ತೆಗೆದುಕೊಂಡಿತು. ದೇಶವು ಇತ್ತೀಚೆಗೆ ಜಾಗತಿಕವಾಗಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ” ಎಂದು ಹೇಳಿದ್ದಾರೆ.
“ಕಳೆದ 5 ವರ್ಷಗಳ ಅವಧಿಯಲ್ಲಿ 10ನೇ ಸ್ಥಾನದಿಂದ ಐದನೇ ಅತಿದೊಡ್ಡ ಆರ್ಥಿಕತೆಗೆ ಭಾರತವು ಜಿಗಿತ ಕಂಡಿದೆ. ಹೆಚ್ಚಿನ ಬೆಳವಣಿಗೆ ದರಗಳನ್ನು ಉಳಿಸಿಕೊಂಡಿದೆ. ಹಣದುಬ್ಬರವನ್ನು ಚೆನ್ನಾಗಿ ನಿರ್ವಹಿಸಿದೆ” ಎಂದು ಅವರು ಹೇಳಿದ್ದಾರೆ.
ವಿತ್ತೀಯ ನೀತಿಗಳ ಕುರಿತು ಮಾತನಾಡಿದ ಸೀತಾರಾಮನ್, “ವಿತ್ತೀಯ ಕೊರತೆಯನ್ನು ತಗ್ಗಿಸಲು ಸರ್ಕಾರವು ತನ್ನ ಬದ್ಧತೆಯನ್ನು ಮುಂದುವರೆಸಿದೆ. ಹಣಕಾಸಿನ ಕೊರತೆಯು 2024ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ 5.6%ನಿಂದ 4.9%ಗೆ ಕುಸಿದಿದೆ ಎಂದು ಅಂದಾಜಿಸಲಾಗಿದೆ” ಎಂದಿದ್ದಾರೆ.
“2047ರ ವೇಳೆಗೆ, ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದೆ. ಆ ವೇಳೆಗೆ, ಹೊಸ ಭಾರತೀಯ ಯುಗವು ಅಭಿವೃದ್ಧಿ ಹೊಂದಿದ ದೇಶಗಳಂತೆಯೇ ಪ್ರಮುಖ ಗುಣಲಕ್ಷಣಗಳನ್ನು ಹೊಂದಿರುತ್ತದೆ” ಎಂದು ಹೇಳಿದ್ದಾರೆ.