ಸಾಮಾಜಿಕ ನ್ಯಾಯ | ಪ್ರಧಾನಿ ಮೋದಿ ಭಾಷಣದಲ್ಲೇ ಉಳಿದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್

Date:

Advertisements
ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನೊಳಗೆ ಅಥವಾ ಹೊರಗೆ ಭಾಷಣಗಳಲ್ಲಿ ಉದ್ಘರಿಸುವ ಸಾಮಾಜಿಕ ನ್ಯಾಯದ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎನ್ನುವ ಘೋಷವಾಕ್ಯದ ನಿಜವಾದ ಅರ್ಥವೇನು? ಅಂಕಿ-ಅಂಶಗಳನ್ನು ಮುಂದಿಟ್ಟು ಗಮನಿಸಿದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಈ ಘೋಷವಾಕ್ಯವನ್ನು ಭಾಷಣದಲ್ಲೇ ಸೀಮಿತವಾಗಿರಿಸುವುದು ಸ್ಪಷ್ಟ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಬಡಕಟ್ಟು ವ್ಯವಹಾರಗಳ ಸಚಿವಾಲಯಗಳಿಗೆ ಮಾಡಿರುವ ಹಂಚಿಕೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಆದಿವಾಸಿಗರ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗಿರುವ ಹಂಚಿಕೆಯಲ್ಲಿ ಶೇ 1ರಷ್ಟು ಅಲ್ಪ ಏರಿಕೆಯಾಗಿದೆ.

2023-24ರ ಬಜೆಟ್‌ನಲ್ಲಿ ಆದಿವಾಸಿ ಅಭಿವೃದ್ಧಿ ಯೋಜನೆಗಳಿಗೆ ₹ರೂ 1,19,795.67 ಕೋಟಿಗಳಷ್ಟು ಅನುದಾನ ಮೀಸಲಿಟ್ಟಿದ್ದರೆ, ಈ ಬಾರಿಯ ಬಜೆಟ್‌ನಲ್ಲಿ ಮೊತ್ತವನ್ನು ರೂ 1,21,022.85 ಕೋಟಿಗಳಿಗೆ ಏರಿಸಲಾಗಿದೆ. ಆದರೆ, ಹಿಂದಿನ ಹಣಕಾಸು ವರ್ಷದಲ್ಲಿ ಮೀಸಲಿಟ್ಟಿರುವ ಅನುದಾನದ ಸಂಪೂರ್ಣ ಬಳಕೆಯಾಗಿಲ್ಲ. 2023-24ರ ನವೀಕೃತ ಅಂದಾಜು ಪ್ರಕಾರ ಸಾಮಾಜಿಕ ನ್ಯಾಯ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ವೆಚ್ಚಗಳನ್ನು ಕ್ರಮವಾಗಿ  ಶೇ. 23 ಮತ್ತು ಶೇ. 38ರಷ್ಟು ಇಳಿಸಿವೆ ಎಂದು ‘ದಿ ವೈರ್‌’ ವೆಬ್‌ತಾಣದ ವರದಿ ತಿಳಿಸಿದೆ.

ಫಲಾನುಭವಿಗಳಿಗೆ ತಲುಪದ ಯೋಜನೆಗಳು

Advertisements

ಸಮಾನ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ವಿಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವಿರುವ ಸೀಡ್‌ (ಸೈನ್ಸ್‌ ಫಾರ್ ಈಕ್ವಿಟಿ ಎಂಪವರ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಟ್‌) ಯೋಜನೆಗೆ ಮೀಸಲಿಟ್ಟಿರುವ ಅನುದಾನವನ್ನು ಸಾಮಾಜಿಕ ನ್ಯಾಯ ಸಚಿವಾಲಯ ವಿನಿಯೋಗಿಸಿಲ್ಲ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜನಪ್ರಿಯ ಏಕಲವ್ಯ ಮಾದರಿ ವಸತಿ ಶಾಲೆಗಳು (ಇಎಂಆರ್‌ಎಸ್‌) ಯೋಜನೆಗೂ ಸಂಪೂರ್ಣ ಅನುದಾನ ವೆಚ್ಚ ಮಾಡಲಾಗಿಲ್ಲ. ಸೀಡ್ ಯೋಜನೆಗೆ ರೂ. 40 ಕೋಟಿ ಹಂಚಿಕೆಯಾಗಬೇಕಾಗಿದ್ದರೂ, 2023-24ರಲ್ಲಿ ನವೀಕೃತ ಅಂದಾಜಿನ ಮೀಸಲು ಮೊತ್ತವಾಗಿ ರೂ. 15 ಕೋಟಿಯನ್ನು ಮಾತ್ರ ಮಂಜೂರು ಮಾಡಲಾಗಿದೆ. 

ಬಜೆಟ್‌ಗೆ ಅನುಗುಣವಾಗಿ ಮೀಸಲಿಡುವ ಆರಂಭಿಕ ಅಂದಾಜು ಮೊತ್ತವನ್ನು ಬದಲಿಸುವುದು ಸಾಮಾನ್ಯ ವಿಷಯ. ಆದರೆ ಆರಂಭಿಕ ಅಂದಾಜು ಮತ್ತು ನವೀಕೃತ ಅಂದಾಜಿನ ನಂತರದಲ್ಲಿ ಮೀಸಲಿಡುವ ಮೊತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾದಾಗ ಸಂಬಂಧಿತ ಫಲಾನುಭವಿಗಳಿಗೆ ದೊಡ್ಡ ನಷ್ಟವಾಗಿಬಿಡುತ್ತದೆ.

ಡಿನೋಟಿಫೈ ಮಾಡಿದ (ಡಿಎನ್‌ಟಿ), ನೋಮ್ಯಾಡಿಕ್ (ಅಲೆಮಾರಿ) ಮತ್ತು ಸೆಮಿನೋಮ್ಯಾಡಿಕ್ (ಅರೆ ಅಲೆಮಾರಿ) ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ 2022 ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಸೀಡ್ ಯೋಜನೆಯನ್ನು ತಂದಿತ್ತು. ಈ ಆಯ್ದ ಸಮುದಾಯಗಳ ಜೀವನೋಪಾಯಕ್ಕೆ ಬೆಂಬಲ ನೀಡುವುದು, ಆರೋಗ್ಯ ವಿಮೆ, ವಸತಿಗೆ ಸಹಕಾರ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತು ನೀಡುವ ಉದ್ದೇಶಗಳಿಗೆ ಸೀಡ್ ಅನುದಾನ ಬಳಕೆಯಾಗಬೇಕು.

ಆದರೆ ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಲೋಪವಾಗಿದೆ. ಯೋಜನೆಯಡಿ ಫಲಾನುಭವಿಗಳಿಂದ ಸಚಿವಾಲಯ 5400 ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಿದ್ದರೂ, ಯಾವುದಕ್ಕೂ ಒಪ್ಪಿಗೆ ನೀಡಲಾಗಿಲ್ಲ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ನಡುವಿನ ಬುಡಕಟ್ಟು ವರ್ಕೀಕರಣವಾಗದ ಕಾರಣ ಯೋಜನೆ ಜಾರಿಗೆ ತರಲಾಗಿಲ್ಲ ಎಂದು ಸಚಿವಾಲಯದ ಪೋರ್ಟಲ್‌ನಲ್ಲಿ ವಿವರ ನೀಡಲಾಗಿದೆ. ಅನುದಾನ ಹೆಚ್ಚು ಬಳಕೆಯಾಗದೆ ಇರುವುದನ್ನು ಗಮನಿಸಿದಲ್ಲಿ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿರುವುದು ಸಂಶಯವೇ ಆಗಿದೆ.

ಸಬ್‌ಕಾ ಸಾಥ್ ಎನ್ನುವ ಸುಳ್ಳು ಘೋಷಣೆ

ಅಂಚಿನಲ್ಲಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ ಬ್ಯಾಂಕ್ ರಾಜಕೀಯವಾಗಿ ಹೆಚ್ಚು ಮಹತ್ವವಿಲ್ಲದ ಸಣ್ಣಸಂಖ್ಯೆಯಲ್ಲಿರುವ ಅತಿ ಅಂಚಿನಲ್ಲಿರುವ ಬುಡಕಟ್ಟು ಸಂಘಟನೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರ ಲೋಕಸಭಾ ಭಾಷಣದಲ್ಲಿ ತಿಳಿಸಿದ್ದರು.

ಅಂಚಿನಲ್ಲಿರುವ ಸಮುದಾಯಕ್ಕಾಗಿ ಪ್ರಧಾನಮಂತ್ರಿ ಜನ್‌ಮನ್‌ ಯೋಜನೆ ಪರಿಚಯಿಸಿರುವುದು ಬುಡಕಟ್ಟು ಕಲ್ಯಾಣದತ್ತ ಸರ್ಕಾರದ ಬದ್ಧತೆ ಪ್ರದರ್ಶಿಸಿದೆ ಎಂದು ಅವರು ಹೇಳಿದ್ದರು. ಆದರೆ ಮೇಲೆ ಉಲ್ಲೇಖಿಸಲಾದ ಸಚಿವಾಲಯಗಳಿಗೆ ನೀಡಿರುವ ಅನುದಾನ ಮತ್ತು ಅವುಗಳ ವೆಚ್ಚದ ವಿವರಗಳನ್ನು ಗಮನಿಸಿದಲ್ಲಿ ಪ್ರಧಾನಿ ಮೋದಿ ಮಾತಿನಲ್ಲಿ ಸುಳ್ಳು ಎಷ್ಟಿದೆ ಎನ್ನುವುದು ಅರಿವಾಗಲಿದೆ.

 ‘ದಿ ವೈರ್’ ವೆಬ್‌ತಾಣ ನೀಡಿರುವ ವಿವರಗಳಂತೆ, 2022ರ ಬುಡಕಟ್ಟು ಅಭಿವೃದ್ಧಿ ವರದಿಯ ಪ್ರಕಾರ ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಆದಿವಾಸಿಗಳು ಅತಿ ಕೆಳಹಂತದಲ್ಲಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ಸ್ಪಷ್ಟವಾಗಿ ಸೂಚಿಸಿರುವಂತೆ, ಶೇ. 70ರಷ್ಟು ಪರಿಶಿಷ್ಟ ಬುಡಕಟ್ಟು ಸಮುದಾಯ ಅಭಿವೃದ್ಧಿ ಲೆಕ್ಕಾಚಾರದಲ್ಲಿ ಅತಿಕೆಳಮಟ್ಟದಲ್ಲಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಶೇ. 45ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 25ರಷ್ಟು ಪರಿಶಿಷ್ಟ ಪಂಗಡದ ಸಮುದಾಯ ಬಡತನ ರೇಖೆಗಿಂತ ಕೆಳಗೆ ನೆಲೆಸಿದ್ದಾರೆ.

ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ  (ಎನ್‌ಎಫ್‌ಎಚ್ಎಸ್‌-5) ವಿವರಗಳನ್ನು ಗಮನಿಸಿದಲ್ಲಿ, ಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಪ್ರಮಾಣ ಶೇ. 8.5ರಷ್ಟಿರುವ ಇತರ ಪ್ರಬಲ ಸಮುದಾಯಗಳಿಗೆ ಹೋಲಿಸಿದಲ್ಲಿ ಪರಿಶಿಷ್ಟ ಪಂಗಡ ಶೇ. 5.2ರ ಪ್ರಮಾಣವನ್ನು ದಾಖಲಿಸಿದೆ. ಅದೇ ರೀತಿ, ಪರಿಶಿಷ್ಟ ಪಂಗಡ ಮಾಧ್ಯಮಿಕ, ಪ್ರೌಢ ಶಾಲಾ ವ್ಯಾಸಂಗದಲ್ಲಿ ಶೇ. 65.1ರಷ್ಟು ಶಾಲಾ ಹಾಜರಾತಿ ಅನುಪಾತ ದಾಖಲಿಸಿದೆ. ಈ ವಾಸ್ತವಾಂಶವನ್ನು ಪಕ್ಕದಲ್ಲಿಟ್ಟಿರುವ 2024-25ರ ಕೇಂದ್ರ ಸರ್ಕಾರದ ಬಜೆಟ್‌, ಸ್ಕಾಲರ್‌ಶಿಪ್‌ಗಳು ಮತ್ತು ಫೆಲೋಶಿಪ್‌ಗಳಿಗೆ ಮೀಸಲಿಡುವ ಹಂಚಿಕೆಯಲ್ಲಿ ಗುರುತಿಸಬಹುದಾದ ಕಡಿತ ಮಾಡಿದೆ. 

ಉದಾಹರಣೆಗೆ ಅಟಲ್‌ ಬಿಹಾರಿ ವಾಜಪೇಯಿ ಸ್ಕೂಲ್ ಮ್ಯಾನೇಜ್‌ಮೆಂಟ್‌ ಆ್ಯಂಡ್ ಎಂಟರ್‌ಪ್ರ್ಯೂನರ್‌ಶಿಪ್‌ ಯೋಜನೆಯಡಿ ನೀಡುವ ಪ್ರಧಾನ ಮಂತ್ರಿ ರೀಸರ್ಚ್‌ ಫೆಲೋಶಿಪ್‌ಗೆ ಅನುದಾನ ರೂ. 34 ಕೋಟಿಗಳಿಂದ ರೂ. 30 ಕೋಟಿಗೆ ಇಳಿಸಲಾಗಿದೆ. 

ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾಡಿರುವ ಶಿಫಾರಸುಗಳಿಗೆ ಅನ್ವಯಿಸಿ ಒಟ್ಟು ಶಿಕ್ಷಣದ ಬಜೆಟ್ ಹಂಚಿಕೆ ಜಿಡಿಪಿಯ ಶೇ. 6ರಷ್ಟು ಇರಬೇಕು. ಅಂದರೆ ಈ ಬಾರಿಯ ಬಜೆಟ್‌ ಮೊತ್ತಕ್ಕೆ ಅನುಗುಣವಾಗಿ ಶಿಕ್ಷಣ ಕ್ಷೇತ್ರಕ್ಕೆ ರೂ. 19,66,309 ಕೋಟಿ ಮೀಸಲಿಡಬೇಕಾಗುತ್ತದೆ. ಆದರೆ ರೂ. 1,24,638 ಕೋಟಿಗಳನ್ನಷ್ಟೇ ಮೀಸಲಿಡಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಅತಿದೊಡ್ಡ ಘೋಷಣೆಯೆಂದರೆ ‘ಸಬ್‌ಕಾ ಸಾತ್, ಸಬ್‌ಕಾ ವಿಕಾಸ್‌’ (ಎಲ್ಲರನ್ನೊಳಗೊಂಡ, ಎಲ್ಲರ ಅಭಿವೃದ್ಧಿ) ಬುಡಕಟ್ಟು ಸಮುದಾಯದ ಆರೋಗ್ಯ ಮತ್ತು ಪೌಷ್ಠಿಕಾಂಶದ ಕಡೆಗೆ ಗಮನಿಸದೆ ಎಲ್ಲರನ್ನೊಳಗೊಂಡ ಅಭಿವೃದ್ಧಿ ಸಾಧ್ಯವಿಲ್ಲ. ಎನ್‌ಎಫ್‌ಎಚ್ಎಸ್‌-5 ಪ್ರಕಾರ, ಇತರ ಸಮುದಾಯಗಳಲ್ಲಿ ಶಿಶುಮರಣ ದರ 28 ಇದ್ದರೆ, ಬುಡಕಟ್ಟು ಜನಾಂಗದಲ್ಲಿ 41 ಇದೆ. ಐದು ವರ್ಷಗಳೊಳಗಿನ ಶಿಶುವಿನ ಮರಣದ ದರ ಇತರ ಸಮುದಾಯಗಳಲ್ಲಿ 33 ಇದ್ದರೆ ಬುಡಕಟ್ಟು ಜನಾಂಗದಲ್ಲಿ 50 ಇದೆ.

ಗ್ರಾಮೀಣ ಆರೋಗ್ಯ ಅಂಕಿ-ಅಂಶಗಳು (2021-22) ವಿವರಗಳ ಪ್ರಕಾರ, ಬುಡಕಟ್ಟು ಪ್ರದೇಶಗಳಲ್ಲಿ 9,357  ಆರೋಗ್ಯ ಉಪಕೇಂದ್ರಗಳ ಕೊರತೆಯಿದೆ. 1,559 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 372 ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆಯಿದೆ.

ಮಕ್ಕಳ ಪೌಷ್ಠಿಕ ಆರೋಗ್ಯದ ವಿಚಾರಕ್ಕೆ ಬಂದಾಗ ಇತರ ಸಮುದಾಯಗಳಲ್ಲಿ ಸಮಗ್ರವಾಗಿ ಶೇ. 30ರಷ್ಟು ಕುಂಠಿತ ಬೆಳವಣಿಗೆ, ಶೇ. 17.5ರಷ್ಟು ಶಕ್ತಿಹೀನರು, ಶೇ. 27ರಷ್ಟು ಕಡಿಮೆ ತೂಕ ಉಳ್ಳವರು ಇದ್ದರೆ, ಬುಡಕಟ್ಟು ಜನಾಂಗದಲ್ಲಿ ಶೇ. 40ರಷ್ಟು ಕುಂಠಿತ ಬೆಳವಣಿಗೆ,  ಶೇ. 23ರಷ್ಟು ಶಕ್ತಿಹೀನರು, ಶೇ. 39ರಷ್ಟು ಕಡಿಮೆ ತೂಕ ಉಳ್ಳವರು ಇದ್ದಾರೆ. 

ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಮತ್ತು ವರದಿಗಳನ್ವಯ ಬುಡಕಟ್ಟು ಜನಾಂಗದಲ್ಲಿ ಆರೋಗ್ಯ ಮತ್ತು ಶಿಕ್ಷಣದ ವಂಚಿತರು ಅತ್ಯಧಿಕ ಪ್ರಮಾಣದಲ್ಲಿದ್ದರೂ 2024-25ರ ಬಜೆಟ್‌ನಲ್ಲಿ ಅದಕ್ಕೆ ಪರಿಹಾರವಾಗಿ ಯೋಜನೆಗಳು ಅಥವಾ ಅಗತ್ಯ ಅನುದಾನ ಬಿಡುಗಡೆಯಾಗದಿರುವುದು ಸ್ಪಷ್ಟ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಕೇಂದ್ರ ಸರ್ಕಾರ ಮುಂದಿಟ್ಟಿರುವ ಬಜೆಟ್‌ನಲ್ಲಿ ಯಾರಿಗೆ ಮತ್ತು ಯಾವ ವಿಚಾರಗಳಿಗೆ ಆದ್ಯತೆ ನೀಡಲಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಎಲ್ಲರನ್ನೊಳಗೊಂಡ ಅಭಿವೃದ್ಧಿ ಎನ್ನುವುದು ಭಾಷಣದಲ್ಲಿ ಮಾತ್ರ ಉಳಿದಿದೆಯೇ ವಿನಾ ಕಾರ್ಯದಲ್ಲಿ ವ್ಯಕ್ತವಾಗಿಲ್ಲ ಎನ್ನುವುದು ಆದಿವಾಸಿಗಳು ಮತ್ತು ದಲಿತರ ಅಭಿವೃದ್ಧಿ ಮತ್ತು ಸಬಲೀಕರಣ ಯೋಜನೆಗಳಿಗೆ ಬಜೆಟ್ ಹಂಚಿಕೆಯ ವಿವರಗಳಿಂದಲೇ ವ್ಯಕ್ತವಾಗುತ್ತದೆ. ಈ ಸಮುದಾಯಗಳಿಗೆ ಭಾರತದಲ್ಲಿ ಐತಿಹಾಸಿಕವಾಗಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಬರೀ ಮಾತಿನಲ್ಲೇ ಉಳಿದಿದೆ ಎನ್ನುವುದೂ ಸಾಬೀತಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X