ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 107ನೇ ಜನ್ಮದಿನದಂದು ಹಲವು ಗಣ್ಯರು ಇಂದಿರಾ ಗಾಂಧಿ ಅವರನ್ನು ಸ್ಮರಿಸಿದ್ದಾರೆ. ಪರಿಸರದ ಬಗ್ಗೆ ಇಂದಿರಾ ಅವರಿಗಿದ್ದ ಕಾಳಜಿಯನ್ನು ಶ್ಲಾಘಿಸಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಪರಿಸರ ಈಗ ‘ವ್ಯವಸ್ಥಿತ ಆಕ್ರಮಣ’ಕ್ಕೆ ಒಳಗಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ, “ಇಂದು ಇತಿಹಾಸವನ್ನು ಸೃಷ್ಟಿಸಿದ ಅಸಾಧಾರಣ ಮಹಿಳೆಯ 107ನೇ ಜನ್ಮದಿನ. ತನ್ನ ತಾತ ತನಗೆ ನೀಡಿದ ಸಲಹೆಯನ್ನು ಅವರು ಆಗಾಗ ಮೆಲುಕು ಹಾಕುತ್ತಿದ್ದರು. ಒಂದು ದುಡಿಯುವವರ ಗುಂಪು, ಮತ್ತೊಂದು ದುಡಿಮೆಯ ಶ್ರೇಯಸ್ಸು ತಾವೇ ಪಡೆದುಕೊಳ್ಳುವ ಗುಂಪು ಇರುತ್ತದೆ. ಆದರೆ ನೀನು ಎಂದಿಗೂ ಮೊದಲ ಗುಂಪಿನ (ದುಡಿಯುವವರು) ಸದಸ್ಯೆಯಾಗಿರು. ಯಾಕೆಂದರೆ ಅಲ್ಲಿ ಹೆಚ್ಚು ಸ್ಪರ್ಧೆ ಇರುವುದಿಲ್ಲ ಎಂದು ಇಂದಿರಾ ಅವರಿಗೆ ತಾತ ಹೇಳುತ್ತಿದ್ದರು. ಇಂದಿರಾ ಅವರು ದಣಿವಿಲ್ಲದೆ ದುಡಿದರು. ಆದರೆ ಎಂದಿಗೂ ತನ್ನ ಕಾರ್ಯವನ್ನು ಆಡಂಬರಿಸಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ತಪ್ಪನ್ನು ಒಪ್ಪಿಕೊಂಡಿದ್ದರು: ಬಿಜೆಪಿ ವಿರುದ್ಧ ಚಿದಂಬರಂ ವಾಗ್ದಾಳಿ
“ಇಂದಿರಾ ಗಾಂಧಿಯವರು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಿದವರು, ಹೊಸ ಬದಲಾವಣೆ ತಂದವರು. ಅದರಲ್ಲೂ ವಿಶೇಷವಾಗಿ ಕೃಷಿ, ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ರಕ್ಷಣೆ ಕ್ಷೇತ್ರಕ್ಕೆ ಅಗಾಧ ಮಾನ್ಯತೆ ನೀಡಿದ್ದಾರೆ. ದೇಶಕ್ಕೆ ಹೆಮ್ಮೆ ತಂದ ದಿಗ್ಗಜರು ಆಕೆಯ ನಾಯಕತ್ವಕ್ಕೆ ಋಣಿಯಾಗಿದ್ದಾರೆ” ಎಂದು ಜೈರಾಮ್ ರಮೇಶ್ ಅಭಿಪ್ರಾಯಿಸಿದ್ದಾರೆ.
“ಇಂದು ರಾಷ್ಟ್ರ ರಾಜಧಾನಿ (ದೆಹಲಿ) ಉಸಿರುಗಟ್ಟುವ ಸ್ಥಿತಿಯಲ್ಲಿದೆ. ಹೀಗಿರುವಾಗ ನಾವು ಪರಿಸರ ಮತ್ತು ನಮ್ಮ ನೈಸರ್ಗಿಕ ಪರಂಪರೆಯನ್ನು ರಕ್ಷಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ರೂಪಿಸಿದ, ಬದ್ಧ ನೈಸರ್ಗಿಕವಾದಿ ಇಂದಿರಾ ಗಾಂಧಿಯನ್ನು ನೆನಪಿಸಿಕೊಳ್ಳುತ್ತೇವೆ. ಕಳೆದ ಕೆಲವು ವರ್ಷಗಳಿಂದ ಪರಿಸರ ವ್ಯವಸ್ಥಿತ ಆಕ್ರಮಣಕ್ಕೆ ಒಳಗಾಗಿದೆ ಎಂಬುದು ದುಃಖಕರ ಸಂಗತಿ. ಆರ್ಥಿಕ ಬೆಳವಣಿಗೆಯ ಬಗ್ಗೆ ಚರ್ಚೆ ವೇಳೆ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದರ ಬಗ್ಗೆಯೂ ಅವರು ಮಾತನಾಡುತ್ತಿದ್ದರು” ಎಂದು ತಿಳಿಸಿದ್ದಾರೆ.
ಸದ್ಯ ದೆಹಲಿಯಲ್ಲಿ ವಾಯುಮಾಲಿನ್ಯ ಅಧಿಕವಾಗಿದ್ದು, ವಾಯು ಗುಣಮಟ್ಟ ಅತೀ ಕಳಪೆಯಾಗಿದೆ. ಈ ಹಿನ್ನೆಲೆ ಜೈರಾಮ್ ರಮೇಶ್ ಅವರು ಇಂದಿರಾ ಗಾಂಧಿಯವರ ಪರಿಸರ ಪ್ರೇಮ ನೆನೆದಿದ್ದಾರೆ.
