ದಾವಣಗೆರೆ ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕೀಯ ನಾಯಕರಾದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದ ಸಿದ್ದೇಶರ ಮತ್ತು ಬಿ.ಪಿ.ಹರೀಶ್, ಯಡಿಯೂರಪ್ಪ ಕುಟುಂಬದ ಕಡು ವಿರೋಧಿಗಳಾಗಿ ಗುರುತಿಸಿಕೊಂಡವರು. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸೋಲಲು, ಯಡಿಯೂರಪ್ಪನವರ ಹೊಂದಾಣಿಕೆ ರಾಜಕೀಯವೇ ಕಾರಣ ಎಂದು ಇಬ್ಬರು ನಾಯಕರು ನೇರವಾಗಿ ಆರೋಪಿಸಿದ್ದವರು.
ಈಗ ಇಬ್ಬರು ನಾಯಕರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ಕಡೆ, ಜಾತಿಗಣತಿ ವರದಿಯ ಸುತ್ತ ಸಿಕ್ಕಾಪಟ್ಟೆ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಈ ಇಬ್ಬರು ನಾಯಕರು ಡಿಸಿಎಂ ಭೇಟಿಯಾಗಿರುವುದಕ್ಕೂ ಒಂದಕ್ಕೊಂದು ಸಂಬಂಧ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ.
ಸಾಮಾನ್ಯವಾಗಿ, ಏನೇ ರಾಜಕೀಯ ಚಟುವಟಿಕೆ ನಡೆದರೂ, ಇದೊಂದು ಸೌಜನ್ಯದ ಭೇಟಿ ಎಂದು ಹೇಳುವುದು ರಾಜಕೀಯದಲ್ಲಿ ಸಾಮಾನ್ಯ. ಆದರೆ, ಫೋಟೋ ಶೇರ್ ಮಾಡಿಕೊಂಡ ಡಿ.ಕೆ.ಶಿವಕುಮಾರ್ ಅವರು ಇದೊಂದು ಸೌಜನ್ಯದ ಭೇಟಿ ಎಂದು ಹೇಳದೇ ಇರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ದಾವಣಗೆರೆಯಲ್ಲಿ ಸಿದ್ದೇಶ್ವರ ಅವರ ಆಪ್ತ ಗುತ್ತಿಗೆದಾರರೊಬ್ಬರ ಪೂರ್ಣಗೊಳಿಸಿರುವ ಕಾಮಗಾರಿಯ ಬಿಲ್ ತುಂಬಾ ದಿನಗಳಿಂದ ಬಾಕಿ ಉಳಿದಿರುವ ಹಿನ್ನಲೆಯಲ್ಲಿ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು ಎಂದು ಸಹ ತಿಳಿದುಬಂದಿದೆ.

ಬಿ ವೈ ರಾಘವೇಂದ್ರ ಭೇಟಿ
ಬಿಜೆಪಿ ಮುಖಂಡ, ಸಂಸದ ಬಿ ವೈ ರಾಘವೇಂದ್ರ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಖಾಸಗಿ ಕಾರ್ಯಕ್ರಮಕ್ಕೆ ಡಿಸಿಎಂ ಅವರನ್ನು ಆಹ್ವಾನಿಸಲು ಬಂದಿದ್ದರು ಎನ್ನಲಾಗಿದೆ.