ಜಾತಿ ಗಣತಿ ಹಾಗೂ ಒಳ ಮೀಸಲಾತಿ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟವಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಶಿಫಾರಸ್ಸು ಮಾಡಿದ್ದೇವೆ. ಕಾಂಗ್ರೆಸ್ ನವರು ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, “ಮೊದಲು ಸಂವಿಧಾನ ತಿದ್ದುಪಡಿ ಆದ ಮೇಲೆ ಮಾಡುತ್ತೇವೆ ಅಂತ ಕಣ್ಣೊರೆಸುವ ತಂತ್ರ ಮಾಡಿದರು. ಈಗ ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಚರ್ಚೆ ಮಾಡುತ್ತೇವೆ ಅಂತ ಹೇಳುತ್ತಾರೆ. ಅವರಿಗೆ ದಲಿತರಾಗಲಿ ಹಿಂದುಳಿದವರಾಗಲಿ ಅಭಿವೃದ್ಧಿ ಆಗುವುದು ಬೇಡ” ಎಂದರು.
“ಜಾತಿ ಗಣತಿ ವಿಚಾರದಲ್ಲಿಯೂ ಅಷ್ಟೆ, ಜಾತಿ ಗಣತಿ ವರದಿಯನ್ನು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸ್ವೀಕಾರ ಮಾಡಲಿಲ್ಲ ಅಂತ ಹೇಳಿದ್ದಾರೆ. ಕಾಂತರಾಜು ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ 2017 ರಲ್ಲಿಯೇ ವರದಿ ನೀಡಿದ್ದಾರೆ. ಹಿಂದುಳಿಸ ವರ್ಗದ ಚಾಂಪಿಯನ್ ಅಂತ ಹೇಳಿಕೊಳ್ಳುವವರು ಆಗ ಯಾಕೆ ಒಪ್ಪಿಕೊಳ್ಳಲಿಲ್ಲ” ಎಂದು ಪ್ರಶ್ನಿಸಿದರು.
“ಕಾಂತರಾಜ್ ಅವರು ಅಧ್ಯಯನ ಮಾಡಿ ವರದಿ ಸಿದ್ದಪಡಿಸಿದ್ದರು. ಜಯಪ್ರಕಾಶ್ ಹೆಗಡೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ವರದಿ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಹಿಂದುಳಿದ ವರ್ಗದವರ ಅಭಿವೃದ್ಧಿ ಆಗಬೇಕು. ಇದು ಗೊಂದಲದ ಗೂಡಾಗಬಾರದು, ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು. ಸಿಎಂ ತಮ್ಮ ಮೇಲೆ ಮುಡಾ ಹಗರಣದ ಆರೋಪ ಬಂದ ಕೂಡಲೆ ಅದರಿಂದ ದಾರಿ ತಪ್ಪಿಸಲು ಜಾತಿ ಗಣತಿ ವರದಿ ಪ್ರಸ್ತಾಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ” ಎಂದು ಕೇಳಿದರು.
ಬೊಮ್ಮಾಯಿ ಶಿಫಾರಸ್ಸು ಜಾರಿಗೆ ವಿಜಯೇಂದ್ರ ಒತ್ತಾಯ
ರಾಜ್ಯದ ಎಲ್ಲ ಪ್ರಮುಖರ ಜೊತೆ ಇಂದು ಸಮಾಲೋಚನಾ ಸಭೆ ಕರೆದಿದ್ದೆವು. ಹಿಂದೆ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಂಡಿದ್ದರು. ವರ್ಗೀಕರಣ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದರು. ಇವುಗಳ ಕುರಿತು ಚರ್ಚಿಸಿ ಒಳ ಮೀಸಲಾತಿ ವಿಚಾರವಾಗಿ ಸರ್ವರೊಂದಿಗೆ ಚರ್ಚೆ ಮಾಡಿದ್ದು, ಹಿಂದಿನ ಬೊಮ್ಮಾಯಿ ಸರಕಾರ ಕೇಂದ್ರಕ್ಕೆ ಮಾಡಿದ ಶಿಫಾರಸನ್ನು ರಾಜ್ಯದ ಕಾಂಗ್ರೆಸ್ ಸರಕಾರ ಯಥಾವತ್ತಾಗಿ ಜಾರಿಗೊಳಿಸಬೇಕು” ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.