ಮೋದಿಯವರ ‘ಚಾರ್‌ ಸವ್ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!

Date:

Advertisements

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. ಮೀಸಲಾತಿಯನ್ನು ರದ್ದುಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಹೇಳಿದ್ದಾರೆ. ಪ್ರಧಾನಿ ಮೋದಿ ಸಂಪುಟದ ಹಿರಿಯ ಸಚಿವರಾಗಿರುವ ಸಿಂಗ್, ”ಮೀಸಲಾತಿಯನ್ನು ಕೊನೆಗೊಳಿಸುವ ಪ್ರಶ್ನೆಯೇ ಇಲ್ಲ. ನಮಗೆ ಮೀಸಲಾತಿ ಬೇಕೆಂದು ನಾನು ದೃಢವಾಗಿ ನಂಬುತ್ತೇನೆ. ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಅಗತ್ಯದ ಬಗ್ಗೆ ನಾವು ಎಂದಿಗೂ ಯೋಚಿಸಿಲ್ಲ” ಎಂದಿದ್ದಾರೆ.

ಅಂತೆಯೇ, ಅಮಿತ್‌ ಶಾ ಕೂಡ ಏಪ್ರಿಲ್ 23ರಂದು ಮಹಾರಾಷ್ಟ್ರದ ಅಕೋಲದಲ್ಲಿ ನಡೆದ ಪ್ರಚಾರದ ವೇಳೆ, ”ಎಸ್‌ಸಿ/ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ರದ್ದುಗೊಳಿಸುವುದಿಲ್ಲ” ಎಂದು ಹೇಳಿದ್ದಾರೆ.

ಮೀಸಲಾತಿ ರದ್ದು ಮಾಡುವುದಿಲ್ಲ ಎಂದು ಬಿಜೆಪಿ ಯಾಕೆ ಹೇಳಿಕೊಳ್ಳುತ್ತಿದೆ?

Advertisements

ಬಿಜೆಪಿಯ ನಾಯಕರು, ಸಂಸದರೇ ‘ನಾವು ಸಂವಿಧಾನವನ್ನು ಬದಲಿಸುತ್ತೇವೆ. ಮೀಸಲಾತಿ ತೆಗೆಯುತ್ತೇವೆ’ ಎಂದು ಆಗ್ಗಾಗ್ಗೆ ಹೇಳುತ್ತಲೇ ಇದ್ದಾರೆ. ಆದರೆ, ಚುನಾವಣಾ ಸಮಯದಲ್ಲಿ ಮಾತ್ರ ಅಂತಹ ಹೇಳಿಕೆಗಳನ್ನು ಮರೆ ಮಾಚುವ ಬಿಜೆಪಿಗರು, ‘ಸಂವಿಧಾನ ಮುಟ್ಟಲ್ಲ – ಮೀಸಲಾತಿ ತೆಗೆಯಲ್ಲ’ ಎಂಬಂತ ಹೇಳಿಕೆ ನೀಡಿ, ತೇಪೆ ಹಾಕಿಕೊಳ್ಳುವ ಕೆಲಸ ಮಾಡುತ್ತಾರೆ. ಕೇವಲ, ಪ್ರಬಲ ಜಾತಿಗಳ ಮತದಿಂದ ತಾವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ತಿಪ್ಪೆ ಸಾರಿಸುವ ಹೇಳಿಕೆಗಳು ಬರುತ್ತವೆ.

ಅಂದಹಾಗೆ, 2009ರಿಂದ ಬಿಜೆಪಿಯ ಯಶಸ್ಸು ಒಬಿಸಿ ಮತಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಸಿಎಸ್‌ಡಿಎಸ್‌ ಅಂಕಿಅಂಶಗಳು ಹೇಳುವಂತೆ, 2009ರಲ್ಲಿ 17% ಒಬಿಸಿ ಮತಗಳನ್ನು ಪಡೆದಿದ್ದ ಬಿಜೆಪಿ, 2019ರಲ್ಲಿ 47%ಗೆ ಹೆಚ್ಚಿಕೊಂಡಿದೆ. ಒಬಿಸಿಗಳನ್ನು ತನ್ನ ಮತಬ್ಯಾಂಕ್‌ಆಗಿ ಮಾಡಿಕೊಳ್ಳುವಲ್ಲಿ ಕೇಸರಿ ಪಡೆ ಯಶಸ್ವಿಯಾಗಿದೆ.

ಆದರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೀಸಲಾತಿಯನ್ನು ರದ್ದು ಮಾಡುತ್ತದೆ ಎಂದಾದರೆ, ಈ ಮತಗಳು ತೀವ್ರವಾಗಿ ಕುಸಿಯುತ್ತವೆ. ಒಬಿಸಿಗಳು ಬಿಜೆಪಿ ವಿರುದ್ಧ ಮತಚಲಾಯಿಸುತ್ತಾರೆ. ಹೀಗಾಗಿಯೇ, ಚುನಾವಣಾ ಸಮಯದಲ್ಲಿ ಸಂವಿಧಾನ ಮತ್ತು ಮೀಸಲಾತಿಗೆ ಕೈ ಹಾಕುವುದಿಲ್ಲವೆಂದು ಹೇಳಿಕೊಳ್ಳುತ್ತದೆ.

ಸಂವಿಧಾನ ಬದಲಿಸಲು 400 ಸ್ಥಾನ ಬೇಕು ಎನ್ನುವ ಬಿಜೆಪಿಗರು

ಬಿಜೆಪಿಯ ನಾಯಕರು ದೇಶದ ಉದ್ದಗಲಕ್ಕೂ ‘ಸಂವಿಧಾನ ಬದಲಿಸಲು ನಮಗೆ 400 ಸ್ಥಾನಗಳು ಬೇಕು. ಅಷ್ಟು ಸ್ಥಾನಗಳನ್ನು ಕೊಟ್ಟರೆ, ಸಂವಿಧಾನ ಬದಲಿಸುತ್ತೇವೆ’ ಎಂದು ಹೇಳುತ್ತಲೇ ಇದ್ದಾರೆ. ಸಂವಿಧಾನ ಬದಲಿಸಲಿಕ್ಕಾಗಿಯೇ ಮತ ಕೇಳಿದ್ದಾರೆ.

ಸಂವಿಧಾನ ಬದಲಿಸುವ ವಿಚಾರದಲ್ಲಿ ಸ್ವತಃ ಪ್ರಧಾನಿ ಮೋದಿಯವರು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ಡೆಬ್ರಾಯ್ ಕೂಡ ಮಾತನಾಡಿದ್ದಾರೆ. ಅವರು 2023ರ ಆಗಸ್ಟ್‌ 14ರಂದು ‘ನಾವು ಹೊಸ ಸಂವಿಧಾನವನ್ನು ಸ್ವೀಕರಿಸುವ ಸಂದರ್ಭ ಬಂದಿದೆ. ಅದರಲ್ಲಿ, ಅಸ್ಪಷ್ಟತೆಗೆ ಅವಕಾಶವಿಲ್ಲ’ ಎಂದಿದ್ದರು.

ಅವರ ಹೇಳಿಕೆಯನ್ನು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯು ‘ಅವರ ವೈಯಕ್ತಿಕ ಅಭಿಪ್ರಾಯ’ವೆಂದು ಹೇಳಿ, ಜಾರಿಕೊಳ್ಳಲು ಯತ್ನಿಸಿತು. ಆದರೆ, ಅವರ ಹೇಳಿಕೆ ಜನರ ನಡುವಿನ ಚರ್ಚೆಯಲ್ಲಿ ಉಳಿಯಿತು.

ಇನ್ನು, 2024ರ ಮಾರ್ಚ್‌ 11ರಂದು ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ, “ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್‌ನ ಉಭಯ ಸದನಗಳಲ್ಲಿ 2/3 ಬಹುಮತ ಬೇಕು. ಅದಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು” ಎಂದು ಘೋಷಿಸಿದರು. ಹೆಗಡೆಯವರು ಆರ್‌ಎಸ್‌ಎಸ್‌ನ ನಿಕಟವರ್ತಿಯಾಗಿದ್ದಾರೆ. ಸಂಘದ ಹಲವಾರು ಮಾತುಗಳು ಹೆಗಡೆ ಬಾಯಿಯಿಂದ ಹೊರಬರುತ್ತವೆ. ದುರದೃಷ್ಟ, ಬಿಜೆಪಿ ಹೆಗಡೆಗೆ ಟಿಕೆಟ್ ನೀಡಿಲ್ಲ.

ಹೆಗಡೆ ಹೇಳಿಕೆಯ ವಾರಗಳ ನಂತರ, 2024ರ ಏಪ್ರಿಲ್‌ 2ರಂದು, ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಜ್ಯೋತಿ ಮಿರ್ಧಾ, ”ಸಂವಿಧಾನದಲ್ಲಿ ಬದಲಾವಣೆ ಮಾಡಲು ಬಿಜೆಪಿಗೆ ಹೆಚ್ಚಿನ ಬಹುಮತದ ಅಗತ್ಯವಿದೆ” ಎಂದು ಹೇಳಿದರು.

ಇನ್ನು, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ದೀರ್ಘಕಾಲ ಅಯೋಧ್ಯೆಯನ್ನು ಪ್ರತಿನಿಧಿಸಿದ್ದ, ಈಗ ಲೋಕಸಭೆಯಲ್ಲಿ ಫೈಜಾಬಾದ್‌ಅನ್ನು ಪ್ರತಿನಿಧಿಸುತ್ತಿರುವ ಲಲ್ಲು ಸಿಂಗ್, ”ಹೊಸ ಸಂವಿಧಾನವನ್ನು ರಚಿಸಲು ಆಥವಾ ಬದಲಾಯಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದು ಹೇಳಿಕೆ ನೀಡಿದ್ದಾರೆ.

ಹೆಗಡೆ, ಮಿರ್ಧಾ, ಸಿಂಗ್‌ – ಈ ಮೂವರ ಹೇಳಿಕೆಗಳು ಕಳೆದ ಎರಡು ತಿಂಗಳಲ್ಲೇ ವ್ಯಕ್ತವಾಗಿವೆ. ಇದು ಏನನ್ನು ಸೂಚಿಸುತ್ತದೆ? ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಅಂತ ಉದ್ದೇಶವನ್ನು ಅಲ್ಲಲ್ಲಿ ವ್ಯಕ್ತಪಡಿಸುತ್ತಾ, ತನ್ನ ನಡೆಯನ್ನು ಗಾಳಿಯಲ್ಲಿ ತೇಲಿಬಿಡುತ್ತಿದೆ. ಸಂವಿಧಾನ ಬದಲಿಸುವ ವಿಚಾರವನ್ನು ಸಾಮಾನ್ಯ ಸಂಗತಿ ಎಂಬಂತೆ ಬಿಂಬಿಸಲು ಯತ್ನಿಸುತ್ತಿದೆ.

ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ‘ಅಬ್‌ ಕಿ ಬಾರ್ – ಚಾರ್‌ ಸವ್ ಪಾರ್’ (ಈ ಬಾರಿ 400 ಸ್ಥಾನ ಗೆಲ್ಲುತ್ತೇವೆ) ಎಂದು ತಮ್ಮ ಪ್ರಚಾರದಲ್ಲಿ ಪದೇ-ಪದೇ ಹೇಳುತ್ತಿದ್ದರು. ಆದರೆ, ದಲಿತ, ಬುಡಕಟ್ಟು ಹಾಗೂ ಒಬಿಸಿಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವವರು ಬಿಜೆಪಿ 400 ಸ್ಥಾನ ಗೆಲ್ಲಬೇಕು ಎಂದು ಹೇಳುತ್ತಿಲ್ಲ. ಈ ಸಮುದಾಯಗಳ ಮಾತುಗಳಲ್ಲಿ ಬಿಜೆಪಿ ಗರಿಷ್ಠ ಗೆಲುವಿನ ಮಾತುಗಳು ಕಾಣೆಯಾಗಿವೆ. ಯಾಕೆಂದರೆ, ಬಿಜೆಪಿಗೆ ಹೆಚ್ಚಿನ ಬಹುಮತ ಬಂದರೆ, ತಮ್ಮ ಮೀಸಲಾತಿ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಳವಳ ಸಮುದಾಯಗಳಲ್ಲಿದೆ.

ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿ-ಆರ್‌ಎಸ್‌ಎಸ್‌

ಭಾರತ ಸ್ವಾತಂತ್ರ್ಯಗೊಂಡು, ಸಂವಿಧಾನ ಜಾರಿಯಾದಾಗಿನಿಂದಲೂ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಪಿತೃಪಕ್ಷ ಜನಸಂಘವು ಸಂವಿಧಾನವನ್ನ ವಿರೋಧಿಸುತ್ತಲೇ ಬಂದಿವೆ.

1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದಾಗ, ಅದೇ ವರ್ಷದ ನವೆಂಬರ್ 30ರಂದು ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ನಲ್ಲಿ ಅಂಕಣವನ್ನು ಪ್ರಕಟಿಸಿತ್ತು. ಅದಲ್ಲಿ ”ಭಾರತದ ಹೊಸ ಸಂವಿಧಾನದ ಬಗೆಗಿನ ಕೆಟ್ಟ ವಿಷಯವೆಂದರೆ, ಅದರಲ್ಲಿ ‘ಭಾರತೀಯ’ ಅಂಶಗಳೇ ಇಲ್ಲ. ಸಂವಿಧಾನದ ಕರಡು ರಚಿಸಿದವರು ಅದರಲ್ಲಿ ಬ್ರಿಟಿಷ್, ಅಮೇರಿಕನ್, ಕೆನಡಿಯನ್, ಸ್ವಿಸ್ ಮತ್ತು ಇತರ ಸಂವಿಧಾನಗಳ ಅಂಶಗಳನ್ನು ಸೇರಿಸಿದ್ದಾರೆ. ಆದರೆ, ಅದರಲ್ಲಿ ಪ್ರಾಚೀನ ಭಾರತೀಯ ಸಾಂವಿಧಾನಿಕ ಕಾನೂನುಗಳು, ಸಂಸ್ಥೆಗಳು ಹಾಗೂ ನುಡಿಗಟ್ಟುಗಳ ಯಾವುದೇ ಕುರುಹು ಇಲ್ಲ” ಎಂದು ಹೇಳಿತ್ತು.

”ಮನುವಿನ ‘ಮನುಸ್ಮೃತಿ’ ಕಾನೂನುಗಳನ್ನು ಸ್ಪಾರ್ಟಾದ ಲೈಕರ್ಗಸ್, ಪರ್ಷಿಯಾದ ಸೊಲೊನ್‌ಗಿಂತ ಮುಂಚೆಯೇ ಬರೆಯಲಾಗಿತ್ತು. ಇಂದಿಗೂ, ಮನುಸ್ಮೃತಿಯಲ್ಲಿ ಹೇಳಿರುವ ಕಾನೂನುಗಳು ಪ್ರಪಂಚದ ಮೆಚ್ಚುಗೆಯನ್ನು ಪಡೆದಿವೆ. ಅವು ಸ್ವಯಂಪ್ರೇರಿತ ವಿಧೇಯತೆ ಮತ್ತು ಅನುಸರಣೆಗೆ ಪಾತ್ರವಾಗಿವೆ. ಆದರೆ ನಮ್ಮ, ಸಂವಿಧಾನ ಬರೆದವರಿಗೆ ಅದು ಏನೇನೂ ಅಲ್ಲ” ಎಂದು ಮನುಸ್ಮೃತಿಯನ್ನು ಆರ್‌ಎಸ್‌ಎಸ್‌ ಸಮರ್ಥಿಸಿಕೊಂಡು, ಸಂವಿಧಾನವನ್ನು ವಿರೋಧಿಸಿತ್ತು.

”ಮನುಸ್ಮೃತಿಯು ಹೆಚ್ಚಿನ ಸಂಖ್ಯೆಯ ಹಿಂದುತ್ವವಾದಿಗಳಿಗೆ ತಲುಪಬೇಕಾದ ಗ್ರಂಥ” ಎಂದು ಪತ್ರಕರ್ತ ಮತ್ತು ಲೇಖಕ ನಿಲಂಜನ್ ಮುಖೋಪಾಧ್ಯಾಯ ಪ್ರತಿಪಾದಿಸಿದ್ದರು.

ವಿ.ಡಿ. ಸಾವರ್ಕರ್, ”ನಮ್ಮ ಹಿಂದು ರಾಷ್ಟ್ರಕ್ಕೆ ವೇದಗಳ ನಂತರ, ಮನುಸ್ಮೃತಿಯು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ-ಆಚಾರ, ಚಿಂತನೆ ಮತ್ತು ಆಚರಣೆಯ ಆಧಾರವಾಗಿದೆ. ಶತಮಾನಗಳಿಂದ ಈ ಪುಸ್ತಕವು ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕತೆಯ ಕ್ರೋಡೀಕರಣವಾಗಿದೆ” ಎಂದಿದ್ದರು.

ಭಾರತೀಯ ಸಂವಿಧಾನಕ್ಕಿಂತ ಮನುಸ್ಮೃತಿಗೆ ಪ್ರಾಮುಖ್ಯತೆ ನೀಡುವುದು ಆರ್‌ಎಸ್‌ಎಸ್‌ನ ಬಹುಕಾಲದ ಉದ್ದೇಶವಾಗಿದೆ. ಅಲ್ಲದೆ, ಈ ಉದ್ದೇಶದ ಬಗ್ಗೆ ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗಗಳು ಯೋಚಿಸುವಂತೆ, ಚರ್ಚಿಸುವಂತೆ ಹಾಗೂ ಸಮ್ಮತಿಸುವಂತೆ ಮಾಡಲು ಬಿಜೆಪಿ ಹವಣಿಸುತ್ತಿದೆ. ಅದರ ಭಾಗವಾಗಿಯೇ, ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಮಾತುಗಳನ್ನು ಆಗಾಗ್ಗೆ ತೇಲಿ ಬಿಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ’ ಎಂದ ಬಿಜೆಪಿ ನಾಯಕ ಅನುರಾಗ್ ಠಾಕೂರ್; ಟ್ರೋಲ್‌ಗೆ ಗುರಿ

"ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ" ಎಂದು ಹೇಳುವ ಮೂಲಕ ಬಿಜೆಪಿ...

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

Download Eedina App Android / iOS

X