- ‘ಯಾವುದೇ ಗುತ್ತಿಗೆದಾರರಿಗೆ ನಾವು ಹೊಸ ಕೆಲಸ ನೀಡಿಲ್ಲ’
- ‘ಬಿಜೆಪಿ ಅವಧಿಯಲ್ಲಿನ ಕಾಮಗಾರಿಗಳ ಬಿಲ್ ಬಾಕಿ ಇವೆʼ
ಗುತ್ತಿಗೆದಾರರ ಬಿಲ್ ಬಾಕಿ ಉಳಿದಿರುವುದು ಯಾರ ಅಧಿಕಾರಾವಧಿಯಲ್ಲಿ? ಈಗ ಬಂದು ಕೇಳಿದರೆ ಏಕಾಏಕಿ ಹಣ ಬಿಡುಗಡೆ ಮಾಡಲು ಆಗುತ್ತದಾ? ಕಾಮಗಾರಿಗಳ ಗುಣಮಟ್ಟ ನೋಡುವುದು ಬೇಡವೇ? ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಮೊದಲು ತನಿಖೆ ನಡೆಸಿ, ಗುಣಮಟ್ಟವಿದ್ದರೆ ಮಾತ್ರ ಹಣ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಆಗುತ್ತದೆ. ಗುಣಮಟ್ಟದ ಕಾಮಗಾರಿ ಮಾಡಿದವರು ಭಯಪಡಬೇಕಿಲ್ಲ” ಎಂದರು.
“ಅಧಿಕಾರಕ್ಕೆ ಬಂದು ನಾವು ಇನ್ನೂ ಮೂರು ತಿಂಗಳು ಕಳೆದಿಲ್ಲ. ಯಾವುದೇ ಗುತ್ತಿಗೆದಾರರಿಗೆ ಕೆಲಸ ನೀಡಿಲ್ಲ. ಬಿಜೆಪಿ ವಿರುದ್ಧ ಶೇ.40 ಕಮಿಷನ್ ದಂಧೆ ಬಗ್ಗೆ ನಾವೇ ಆರೋಪಿಸಿದ್ದೆವು. ಮೂರು ವರ್ಷ ಬಿಲ್ ಕೊಡದಿದ್ದಾಗ ಸುಮ್ಮನಿದ್ದ ಗುತ್ತಿಗೆದಾರರು ಮತ್ತು ಬಿಜೆಪಿಯವರು ಈಗ ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಯಾವ ನೈತಿಕತೆ ಇದೆ” ಎಂದು ಪ್ರಶ್ನಿಸಿದರು.
”ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳ ಕುರಿತು ನಾಲ್ಕು ತಂಡಗಳಿಂದ ತನಿಖೆ ನಡೆಸುತ್ತಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ ಬಿಲ್ ಪಾವತಿಸದ ವಿಚಾರವಾಗಿ ತನಿಖೆಗೆ ನಡೆಯುತ್ತಿದೆ. ಅವರು ನೀಡಿದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪ್ರಾಮಾಣಿಕ ಗುತ್ತಿಗೆದಾರರು ಯಾರು ಆತಂಕಪಡುವ ಅಗತ್ಯವಿಲ್ಲ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸುಡದಿರಲಿ ಬಿಲ್ ಬಾಕಿ ಬೆಂಕಿ ಕಿಡಿ
ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ; ಮರುತನಿಖೆಗೆ ಒತ್ತಾಯ
“ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಕುರಿತು ಮರುತನಿಖೆ ನಡೆಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ” ಎಂದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿನ್ ಲಾಡೆನ್ ಸರ್ಕಾರ’ ಎಂದು ಆರ್.ಅಶೋಕ್ ಆರೋಪಿಸಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ಮಾತನಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನ ಗೆದ್ದಿದ್ದಕ್ಕೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅವರು ಹತಾಶರಾಗಿದ್ದಾರೆ” ಎಂದು ಹೇಳಿದರು.