- ಜು.22ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ
- ಪತ್ರಕರ್ತೆ ದಿ.ಗೌರಿ ಲಂಕೇಶ್ ಬಗ್ಗೆ ವಿವಾದಾತ್ಮಕ ಲೇಖನ ಬರೆದಿದ್ದ ವಿಶ್ವೇಶ್ವರ ಭಟ್
‘ವಿಶ್ವವಾಣಿ’ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುವುದಕ್ಕೆ ಸೋಷಿಯಲ್ ಮೀಡಿಯಾ ಸೇರಿದಂತೆ ಹಲವರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಿನ ಕೆ ಪಿ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಜು.22ರಂದು ವಿಶ್ವೇಶ್ವರ ಭಟ್ ಅವರ ‘ಸಂಪಾದಕರ ಸದ್ಯಶೋಧನೆ’ ಎಂಬ ಹೆಸರಿನ ಪುಸ್ತಕ ಸೇರಿದಂತೆ ವಿಶ್ವವಾಣಿಯ ಅಂಕಣಕಾರರಾದ ಕಿರಣ್ ಉಪಾಧ್ಯಾಯ, ರೂಪಾ ಗುರುರಾಜ್ ಹಾಗೂ ಶಿಶಿರ್ ಹೆಗಡೆ ಎಂಬುವವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಲಿರುವುದಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಶ್ವೇಶ್ವರ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ಸಿಎಂ ಹೆಸರನ್ನು ಕಂಡ ಬಳಿಕ ವಿರೋಧ ವ್ಯಕ್ತಪಡಿಸಿರುವ ಪ್ರಗತಿಪರ ಚಿಂತಕರು ಹಾಗೂ ನಾಡಿನ ಹಲವರು, ‘ಇಸ್ಲಾಮೋಫೋಬಿಕ್, ಜಾತಿವಾದಿ ಮತ್ತು ಲೇಖನಿಯ ಮೂಲಕ ಸ್ತ್ರೀದ್ವೇಷವನ್ನು ಹರಡಿದ, ಸಮಾಜದಲ್ಲಿ ದ್ವೇಷ ಹರಡುವ ಪತ್ರಕರ್ತರೊಬ್ಬರ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಬಾರದು. ಇದು ಜಾತ್ಯತೀತವಾದಿಯಾಗಿ ಗುರುತಿಸಿಕೊಂಡಿರುವ ತಮಗೆ ಶೋಭೆ ತರುವಂಥದ್ದಲ್ಲ’ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಜೊತೆಗೆ ವಿಶ್ವೇಶ್ವರ್ ಭಟ್ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಿಂದೆ ಹಂಚಿಕೊಂಡಿದ್ದ ಹಲವು ವಿವಾದಾತ್ಮಕ ಪೋಸ್ಟ್‌ಗಳನ್ನು ಕೂಡ ಶೇರ್ ಮಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ಅವರು, ‘ಆಕೆ ಗುಂಡಿಗೆ ಬಲಿಯಾಗದೇ ಗುಂಡು ಹಾಕಿ ಬಲಿಯಾಗಿದ್ದರೆ ಸಿಂಗಲ್ ಕಾಲಮ್ಮು ಸುದ್ದಿಯಾಗುತ್ತಿದ್ದಳು’ ಎಂದು ಲೇಖನ ಪ್ರಕಟಿಸಿದ್ದರು. ಇದನ್ನು ಸಿಎಂ ಸಿದ್ದರಾಮಯ್ಯನವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿರುವ ಹಲವರು, ‘ಮಾನ್ಯ ಮುಖ್ಯಮಂತ್ರಿಗಳೇ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಯೋಚನೆ ಮಾಡಿ’ ಎಂದು ವಿನಂತಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ
“ನೆಹರೂ ಅವರು ಸಿಝರ್‍ಲ್ಯಾಂಡಿನಿಂದ ಭಾರತಕ್ಕೆ ಬರುವಾಗ ರೋಮ್ ಏರ್‍ಪೋರ್ಟಲ್ಲಿ ಇಳಿದು ಪ್ರಯಾಣ ಮುಂದುವರಿಸಬೇಕಿತ್ತು. ಆ ಸಂದರ್ಭದಲ್ಲಿ ಇಟಲಿಯ ಫ್ಯಾಸಿಸ್ಟ್ ಮುಸೋಲಿನಿ ಭೇಟಿಯಾಗ ಬಯಸಿದ. ನೆಹರೂ ಅವರು ಒಪ್ಪಲಿಲ್ಲ. ಬರೀ ಕೈ ಕುಲುಕಲು ಬರುವುದಾಗಿ ಮತ್ತೆ ಹೇಳಿ ಕಳಿಸಿದ. ನೆಹರೂ ಅದಕ್ಕೂ ಒಪ್ಪಲಿಲ್ಲ.ಒಬ್ಬ ಫ್ಯಾಸಿಸ್ಟನ ಕೈಕುಲುಕಿದರೆ ಅದು ಜಗತ್ತಿನ ಮೇಲೆ ಯಾವ ದುಷ್ಪರಿಣಾಮ ಬೀರಬಹುದು ಎಂಬ ಪರಿಜ್ಞಾನ ನೆಹರೂ ಅವರಿಗೆ ಇತ್ತು” ಎಂದು ಹಿರಿಯ ಸಾಹಿತಿ ರಮಜಾನ್ ದರ್ಗಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಜಾತ್ಯತೀತತೆಗೆ ಬದ್ದರಾಗಿರುವುದು, ಸಮಾಜವಾದದ ಹಳೆಯ ದಿನಗಳ ನೆನಪುಗಳನ್ನು ಉಳಿಸಿಕೊಂಡು ಕೆಲಸ ಮಾಡುವುದು ಅಂದರೆ ಕೋಮುಶಕ್ತಿಗಳನ್ನು ಹುಡುಕಿ ಹುಡುಕಿ ದೂರ ಇಡುವುದು. ಇದು ಪ್ರಥಮ ಕೆಲಸ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಷ್ಟೂ ತಿಳುವಳಿಕೆ ಇಲ್ಲ ಅಂತ ನಾನಂತೂ ಭಾವಿಸುವುದಿಲ್ಲ. ಸಿದ್ದರಾಮಯ್ಯ ಮರೆತಿದ್ದರೆ ಅದನ್ನು ನೆನಪಿಸುವುದು ಅವರನ್ನು ಭೇಟಿಯಾಗಿಯೋ, ಕರೆಸಿಯೋ ಅಭಿನಂದನೆಗಳನ್ನು ಸಲ್ಲಿಸಿದ, ಸಂವಾದ ನಡೆಸಿದ ಬರಹಗಾರರು, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಿಂತಕರ ಜವಾಬ್ದಾರಿ. ಅಷ್ಟು ಮಾಡಲಾಗದಿದ್ದರೆ ವರ್ತಮಾನ ನಿಮ್ಮನ್ನು ನೋಡುವ ಬಗೆಯೇ ಬೇರೆ ಇರುತ್ತದೆ” ಎಂದು ತಮ್ಮ ಫೇಸ್‌ಬಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.
ಕೋಮುವಾದಿಗೆ ಪಾಠ ಕಲಿಸುವ ವೇದಿಕೆ ಆಗಿಯೂ ಇದನು ಸಿದ್ಧ ರಾಮಯ್ಯ ಬಳಸ ಬಹುದು.
ನೀವು ಭಯಂಕರ ಆಶಾವಾದಿ. ವನ್ ವೇ ಯಲ್ಲೂ ಎರಡು ಕಡೆ ನೋಡಿ ರಸ್ತೆ ದಾಟುವವರ ತರ. ಸಿಎಂ ಸಮಾರಂಭಕ್ಕೆ ಹೋಗೇ ಹೋಗುತ್ತಾರೆ.