- ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸಿಎಂ ಟಿಪ್ಪಣಿ
- ಎರಡು ವಾರಗಳೊಳಗೆ ಪಾರದರ್ಶಕ ವರದಿ ಸಲ್ಲಿಸಲು ಸೂಚನೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಪ್ರಕ್ರಿಯೆ ಸೇರಿ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಸಲು ತಂಡ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಈ ಕುರಿತು ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಟಿಪ್ಪಣಿ ಹೊರಡಿಸಿದ್ದು, “ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು ಇಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕುತ್ತಿಲ್ಲ, ಟೆಂಡರ್‌ಗಳು ಹಾಗೂ ಔಷಧಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲದ ಅಕ್ರಮಗಳು ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿರುತ್ತವೆ. ಎಲ್ಲ ಹಿನ್ನಲೆಯಲ್ಲಿ ಒಬ್ಬ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಉತ್ತಮ ಚಾರಿತ್ರ್ಯ ಹೊಂದಿರುವ ಸಹಕಾರ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಈ ಕೂಡಲೇ ರಚಿಸಿ, ಎರಡು ವಾರಗಳೊಳಗೆ ಪಾರದರ್ಶಕ ವರದಿ ಸಲ್ಲಿಸಿ” ಎಂದು ಸಿಎಂ ಸೂಚಿಸಿದ್ದಾರೆ.
ಸಂಸ್ಥೆಯಲ್ಲಿನ ಕೆಲ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಾಲ್ಕು ಪುಟಗಳ ವರದಿಸಹಿತ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರವೇ ತನಿಖಾ ತಂಡ ರಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರಾವಳಿಯ ಜನ ಹಿಂದುತ್ವದ ನಶೆಯಿಂದ ಹೊರಬರಲು ಇದು ʼಚೈತ್ರಕಾಲʼ
ದೂರಿನಲ್ಲಿ ಏನಿದೆ?
ಪೆಟ್‌ಸ್ಕ್ಯಾನ್ ಟೆಂಡರ್ ನಿಯಮ ಉಲ್ಲಂಘನೆಯಾಗಿದ್ದು, ನಿರ್ದೇಶಕರು ಅವಧಿಗೂ ಮುನ್ನವೇ ಟೆಂಡರ್ ಕಾರ್ಯಾದೇಶ, ಬಿಲ್ಡಿಂಗ್, ಹೆಚ್ಚುವರಿ ಹಣ ವಸೂಲಿ, ಟೆಂಡರ್ ನಿಯಮ ಉಲ್ಲಂಘಿಸಿ ಮಾನವ ಸಂಪನ್ಮೂಲ ಒದಗಣೆ, ಕಳಪೆ ಪೆಟ್‌ಸ್ಕ್ಯಾನ್ ಯಂತ್ರ ಖರೀದಿ, ಜಿಎಸ್‌ಟಿ ವಂಚನೆ, ಸರಕಾರದ ಅನುಮೋದನೆ ಇಲ್ಲದೆ ಟೆಂಡರ್‌ದಾರರಿಗೆ ಪೆಟ್‌ಸ್ಕ್ಯಾನ್ ಪರೀಕ್ಷೆಗಳ ಹಣ ಸಂದಾಯ, ಪಿಪಿಪಿ ಮಾದರಿಯ ನಿಯಮ ಉಲ್ಲಂಘನೆ, ಕಳಪೆ ಗುಣಮಟ್ಟದ ಔಷಧಿ, ಔಷಧಿಗಳ ಖರೀದಿಯಲ್ಲಿ ಅಕ್ರಮ, ರೋಗಿಗಳ ಸಾವಿನ ಸಂಖ್ಯೆ ಹೆಚ್ಚಳ ಹಾಗೂ ಆಡಳಿತ ವ್ಯವಸ್ಥೆಯ ಸಂಪೂರ್ಣ ವಿಫಲತೆ ಕುರಿತಂತೆ ಸುಮಾರು 15ಕ್ಕೂ ಹೆಚ್ಚು ಆರೋಪಗಳ ದೂರು ಸಲ್ಲಿಕೆಯಾಗಿದೆ.
