370ನೇ ವಿಧಿ ರದ್ದುಗೊಳಿಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರಕಾರವಿರಲಿಲ್ಲ; ಬದಲಿಗೆ ರಾಜ್ಯಪಾಲರ ಆಡಳಿತವನ್ನು ಹೇರಲಾಗಿತ್ತು. ಇಂತಹ ಸಂದರ್ಭದಲ್ಲಿ 370ನೇ ವಿಧಿಯನ್ನು ಹಿಂಪಡೆದಿರುವುದು ಅಸಾಂವಿಧಾನಿಕ ಎಂಬುದು ಸಂವಿಧಾನ ತಜ್ಞರು ಹಾಗೂ ಕಾನೂನು ತಜ್ಞರ ಸ್ಪಷ್ಟ ಅಭಿಪ್ರಾಯ.
”ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಹೀಗಾಗಿ ಅದರ ರದ್ದತಿ ನಿರ್ಣಯ ಸಮರ್ಪಕವಾಗಿತ್ತು” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಮತ್ತೊಮ್ಮೆ ಹೇಳುವ ಮೂಲಕ, ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.
ಹೀಗಾಗಿ, ಸಂವಿಧಾನದಲ್ಲಿ 370ನೇ ವಿಧಿ ಅಳವಡಿಸಲು ಕಾರಣವಾದ ಚಾರಿತ್ರಿಕ ಸಂಗತಿಗಳ ಕುರಿತು ಒಂದು ಹಿನ್ನೋಟ:
1846ರಿಂದ 1858ರವರೆಗೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಜಮ್ಮು ಮತ್ತು ಕಾಶ್ಮೀರ ಒಂದು ರಾಜಪ್ರಭುತ್ವದ ಸ್ವಾಯತ್ತ ರಾಜ್ಯವಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧೀನ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರ, 1947ರವರೆಗೂ ಬ್ರಿಟಿಷ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ಈ ರಾಜ ಪ್ರಭುತ್ವದ ರಾಜ್ಯವನ್ನು ಪ್ರಥಮ ಆಂಗ್ಲೊ-ಸಿಖ್ ಕದನದ ವೇಳೆ ಸೃಷ್ಟಿಸಲಾಗಿತ್ತು. ಈ ವೇಳೆ, ಈಸ್ಟ್ ಇಂಡಿಯಾ ಕಂಪನಿಯು ಜಮ್ಮುವಿನ ಮಹಾರಾಜರಾಗಿದ್ದ ಗುಲಾಬ್ ಸಿಂಗ್‌ಗೆ ಕಾಶ್ಮೀರವನ್ನು ಯುದ್ಧ ಪರಿಹಾರ ಮೊತ್ತಕ್ಕೆ ಬದಲಿಯಾಗಿ 75 ಲಕ್ಷ ರೂಪಾಯಿಗೆ ಮಾರಾಟ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದರೂ, ರಕ್ಷಣೆ, ವಿದೇಶಾಂಗ ವ್ಯವಹಾರಗಳು ಹಾಗೂ ಸಂಪರ್ಕ ರಂಗ ಹೊರತುಪಡಿಸಿ, ಉಳಿದೆಲ್ಲ ವಿಚಾರಗಳಲ್ಲಿ ಸ್ವಾಯತ್ತತೆ ಹೊಂದಿತ್ತು. ಅಲ್ಲದೆ, ಹೊರಗಿನವರು ತನ್ನ ರಾಜ್ಯದಲ್ಲಿ ಭೂಮಿ ಆಸ್ತಿ ಖರೀದಿಸುವುದನ್ನೂ ಜಮ್ಮು ಮತ್ತು ಕಾಶ್ಮೀರ ರಾಜ ಪ್ರಭುತ್ವ ನಿಷೇಧಿಸಿತ್ತು.
ಆದರೆ, 1947ರಲ್ಲಿ ಪರಿಸ್ಥಿತಿ ತೀರಾ ವೇಗವಾಗಿ ಬದಲಾಗತೊಡಗಿತು. ಭಾರತ-ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್ ಯಾವುದೇ ದೇಶಗಳೊಂದಿಗೆ ವಿಲೀನವಾಗದಿರುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಅಕ್ಟೋಬರ್ 1947ರಲ್ಲಿ ಪಾಕಿಸ್ತಾನ ಸರಕಾರ ಬೆಂಬಲಿತ ಬುಡಕಟ್ಟು ಉಗ್ರರು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ, ಮಹಾರಾಜ ಹರಿಸಿಂಗ್ ತಮ್ಮ ನಿರ್ಧಾರದ ಕುರಿತು ಮರುಚಿಂತನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಇದನ್ನು ಓದಿದ್ದೀರಾ?: ಸುಪ್ರೀಂ ಸಿಬ್ಬಂದಿ ನೇಮಕದಲ್ಲಿ ಮೊದಲ ಬಾರಿಗೆ ಮೀಸಲಾತಿ ನೀತಿ ಜಾರಿ: ಸಾಮಾಜಿಕ ನ್ಯಾಯಕ್ಕೆ ಸಂದ ಜಯ
ಹೀಗಾಗಿ, ಭಾರತ ಸರಕಾರಕ್ಕೆ ಹತಾಶೆಯಿಂದ ಕರೆ ಮಾಡಿದ್ದ ಮಹಾರಾಜ ಹರಿಸಿಂಗ್ ಅವರಿಗೆ ಪ್ರಧಾನಿ ಜವಾಹರ ಲಾಲ್ ನೆಹರೂ ನೆರವು ನೀಡುವ ಭರವಸೆ ನೀಡಿದರೂ, ಭಾರತದೊಂದಿಗೆ ವಿಲೀನವಾಗುವ ಒಪ್ಪಂದಕ್ಕೆ ಮೊದಲು ಸಹಿ ಮಾಡಬೇಕು ಎಂದು ಅವರಿಗೆ ಷರತ್ತು ಒಡ್ಡಿದರು.
ಬೇರೆ ಆಯ್ಕೆಯಿಲ್ಲದ ಮಹಾರಾಜ ಹರಿಸಿಂಗ್, ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದರಾದರೂ, ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ಖಾತರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಳಿಕ, ಅಕ್ಟೋಬರ್ 26, 1947ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಒಪ್ಪಂದಕ್ಕೆ ಅವರು ಸಹಿ ಹಾಕಿದರು. ಈ ಒಪ್ಪಂದದನ್ವಯ, ರಕ್ಷಣೆ, ವಿದೇಶಾಂಗ ವ್ಯವಹಾರಗಳು ಹಾಗೂ ಸಂಪರ್ಕ ರಂಗ ಹೊರತುಪಡಿಸಿ, ಉಳಿದೆಲ್ಲ ವಿಚಾರಗಳಲ್ಲೂ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಲಾಯಿತು.
ಇದಾದ ನಂತರ, ಭಾರತದ ಪ್ರಧಾನ ರಾಜ್ಯಪಾಲರಾಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಭಾರತೀಯ ಸ್ವಾತಂತ್ರ್ಯ ಕಾಯ್ದೆಯ ನಿಯಮಗಳಡಿ ಈ ವಿಲೀನ ಒಪ್ಪಂದವನ್ನು ಅಂಗೀಕರಿಸಿದರು.
ವಿಲೀನ ಒಪ್ಪಂದದ ಪರಿಚ್ಛೇದ 7ರ ಅನ್ವಯ, ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ನಡುವಿನ ವಿಲೀನ ಒಪ್ಪಂದವು, ಅದು ತನ್ನ ಸ್ವಂತ ಸಂವಿಧಾನ ಹೊಂದುವ ಹಾಗೂ ಗಮನಾರ್ಹ ಪ್ರಮಾಣದ ಸ್ವಾಯತ್ತತೆ ಹೊಂದುವ ಹಕ್ಕನ್ನು ಉಳಿಸಿತ್ತು. ಈ ಪರಿಚ್ಛೇದವೇ ಮುಂದೆ 370ನೇ ವಿಧಿಯ ಸೃಷ್ಟಿಗೆ ತಳಹದಿ ಸಾಧನವಾಗಿ ಬದಲಾಯಿತು. ಜಮ್ಮು ಮತ್ತು ಕಾಶ್ಮೀರದ ಹಕ್ಕುಗಳನ್ನು ಉಳಿಸಲು 370ನೇ ವಿಧಿಯನ್ನು ಸೃಷ್ಟಿಸಲಾಗಿತ್ತು. ಆ ಮೂಲಕ, ಭಾರತದ ಒಕ್ಕೂಟದೊಳಗೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಖಾತರಿಗೊಳಿಸಲಾಗಿತ್ತು.
ಸಂವಿಧಾನ ಕರಡು ರಚನೆಯ ಪ್ರಮುಖ ಸದಸ್ಯರ ಪೈಕಿ ಒಬ್ಬರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ರಕ್ಷಣೆಯನ್ನು ಖಾತರಿಪಡಿಸುವ ವಿಧಿಯನ್ನು ರೂಪಿಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರ್ ಲಾಲ್ ನೆಹರೂ ವಹಿಸಿದರು.
ಜುಲೈ 1949ರಲ್ಲಿ ಈ ಪ್ರಸ್ತಾವಿತ ವಿಧಿಯ ರಚನಾತ್ಮಕ ಸ್ವರೂಪದ ಕುರಿತು ಚರ್ಚೆಗಳು ಪ್ರಾರಂಭಗೊಂಡವು. ಈ ಚರ್ಚೆಗಳಲ್ಲಿ ಭಾಗಿಯಾದವರ ಪೈಕಿ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರೂ, ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಗೋಪಾಲಸ್ವಾಮಿ ಅಯ್ಯಂಗಾರ್ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಪ್ರಧಾನಿ ಹಾಗೂ ಸಂವಿಧಾನ ಕರಡು ರಚನೆ ಸಮಿತಿಯ ಸದಸ್ಯರಾಗಿದ್ದ ಶೇಖ್ ಅಬ್ದುಲ್ಲಾ ಕೂಡ ಸೇರಿದ್ದರು. ಈ ಚರ್ಚೆಗಳು ಹಲವು ತಿಂಗಳುಗಳ ಕಾಲ ನಡೆದವು.
ಬಳಿಕ, ಅಕ್ಟೋಬರ್ 17, 1949ರಲ್ಲಿ 370ನೇ ವಿಧಿಯು 306ಎ ವಿಧಿಯಾಗಿ ಸಂವಿಧಾನ ಕರಡು ರಚನೆ ಸಮಿತಿಗೆ ರವಾನೆಯಾಯಿತು.

ಸಂವಿಧಾನದಲ್ಲಿ 370ನೇ ವಿಧಿ ಸೇರ್ಪಡೆಯ ಅವಶ್ಯಕತೆ
ಸಂವಿಧಾನದಲ್ಲಿ 370ನೇ ವಿಧಿ ಅಳವಡಿಸಬೇಕಾದ ಅನಿವಾರ್ಯತೆ ಕುರಿತು ಸಮರ್ಥಿಸಿಕೊಂಡ ಗೋಪಾಲಸ್ವಾಮಿ ಅಯ್ಯಂಗಾರ್, ಸಂವಿಧಾನ ಕರಡು ರಚನೆ ಸಮಿತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಚಂಚಲ ಪರಿಸ್ಥಿತಿಯನ್ನು ವಿವರಿಸಿದರು.
”ಮೊದಲನೆಯದಾಗಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಗೆ ಯುದ್ಧ ಮುಂದುವರಿದಿದೆ. ಈ ವರ್ಷದ ಆರಂಭದಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಅದೀಗಲೂ ಜಾರಿಯಲ್ಲಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿನ್ನೂ ಅಸಾಧಾರಣ ಮತ್ತು ಅಸಹಜ ಪರಿಸ್ಥಿತಿ ಮುಂದುವರಿದಿದ್ದು, ಅದಿನ್ನೂ ಶಮನಗೊಂಡಿಲ್ಲ. ಹೀಗಾಗಿ, ಉಳಿದ ರಾಜ್ಯಗಳಿಗೆ ಹೋಲಿಸಿದರೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸಹಜ ಜೀವನವನ್ನು ಮರು ಸ್ಥಾಪಿಸಲು ಸರಕಾರ ಈ ಅಸಹಜ ಷರತ್ತುಗಳಿಗೆ ಒಪ್ಪಿಗೆ ಸೂಚಿಸಬೇಕಾದ ಅನಿವಾರ್ಯತೆ ಇದೆ” ಎಂದು ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಸಂವಿಧಾನ ಕರಡು ರಚನೆ ಸಮಿತಿಗೆ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಶಾಸನಸಭೆ ಅಸ್ತಿತ್ವದಲ್ಲಿಲ್ಲದೆ ಇದ್ದುದರಿಂದ, ಜಮ್ಮು ಮತ್ತು ಕಾಶ್ಮೀರ ತನ್ನದೇ ಆದ ಸಂವಿಧಾನ ಹೊಂದುವವರೆಗೂ 306ಎ ವಿಧಿಯನ್ನು ಮಧ್ಯಂತರ ವ್ಯವಸ್ಥೆಯನ್ನಾಗಿ ಅಳವಡಿಸುವ ಪ್ರಸ್ತಾವ ಮಂಡಿಸಿದರು.
ಜನವರಿ 26, 1950ರಲ್ಲಿ ಭಾರತೀಯ ಸಂವಿಧಾನ ಜಾರಿಗೊಂಡರೆ, ಭಾರತದ ಉಳಿದ ರಾಜ್ಯಗಳೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧವನ್ನು ವ್ಯಾಖ್ಯಾನಿಸುವ 370ನೇ ವಿಧಿಯೂ ಅದರೊಂದಿಗೆ ಜಾರಿಗೆ ಬಂದಿತ್ತು.
ಇದನ್ನು ಓದಿದ್ದೀರಾ?: ಮೋದಿ-ಇಂದಿರಾ ನಡುವಣ ಐದು ಹೋಲಿಕೆಗಳು, ಇನ್ನೈದು ಭಿನ್ನತೆಗಳು
ವರ್ಷಗಳು ಕಳೆದಂತೆ, ಸರಣಿ ಅಧ್ಯಕ್ಷೀಯ ಆದೇಶಗಳ ಮೂಲಕ, ಭಾರತ ಸರಕಾರವು ಸಂವಿಧಾನದ ಬಹುತೇಕ ನಿಯಮಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸುವ ಮೂಲಕ, 370ನೇ ವಿಧಿಯಡಿ ಅದಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪರಿಣಾಮಕಾರಿಯಾಗಿ ಕುಗ್ಗಿಸಿತ್ತು. ಇದಾದ ಬಳಿಕ, ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿತ್ತು. ಕೇಂದ್ರ ಸರಕಾರದ ಈ ನಿರ್ಧಾರವನ್ನು ಡಿಸೆಂಬರ್ 11, 2023ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು.
370ನೇ ರದ್ದತಿ ಅಸಾಂವಿಧಾನಿಕವೇ?
ಭಾರತೀಯ ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ಮಾತ್ರ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಹೀಗಾಗಿಯೇ, ಹಲವು ಅಧ್ಯಕ್ಷೀಯ ಆದೇಶಗಳ ಮೂಲಕ, ಕಾಲಕಾಲಕ್ಕೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಡಿತಗೊಳಿಸುತ್ತಾ ಬರಲಾಗಿತ್ತು. ಅದಕ್ಕೆಲ್ಲ ಸಂವಿಧಾನ ಹಾಗೂ ಕಾನೂನಿನ ಬಲವೂ ಇತ್ತು. ಆದರೆ, ಸಂವಿಧಾನದ 370ನೇ ವಿಧಿ ರದ್ದತಿಯ ವೇಳೆ ಕೇಂದ್ರ ಸರಕಾರಕ್ಕೆ ಅಂತಹ ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಬಲವಿರಲಿಲ್ಲವೆಂಬುದು ಕಾನೂನು ತಜ್ಞರು ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರ ವಾದ. ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕ ಮಾತ್ರವಾಗಿತ್ತು ಎಂಬುದರ ಬಗ್ಗೆ ಇವರೆಲ್ಲರಲ್ಲೂ ಸಹಮತವಿದ್ದರೂ, 370ನೇ ವಿಧಿಯನ್ನು ರದ್ದುಗೊಳಿಸಲು ಕೈಗೊಂಡ ಪ್ರಕ್ರಿಯೆಗಳು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂಬುದು ಇವರೆಲ್ಲರ ಅಭಿಪ್ರಾಯವಾಗಿದೆ.
ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕ ಮಾತ್ರ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ, ಈ ವಿಧಿಯನ್ನು ರದ್ದುಗೊಳಿಸಬೇಕಾದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಸರ್ವಾನುಮತದ ಒಪ್ಪಿಗೆ ಪಡೆಯಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ. ಆದರೆ, 370ನೇ ವಿಧಿ ರದ್ದುಗೊಳಿಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರಕಾರವಿರಲಿಲ್ಲ; ಬದಲಿಗೆ ರಾಜ್ಯಪಾಲರ ಆಡಳಿತವನ್ನು ಹೇರಲಾಗಿತ್ತು. ಇಂತಹ ಸಂದರ್ಭದಲ್ಲಿ 370ನೇ ವಿಧಿಯನ್ನು ಹಿಂಪಡೆದಿರುವುದು ಅಸಾಂವಿಧಾನಿಕ ಎಂಬುದು ಸಂವಿಧಾನ ತಜ್ಞರು ಹಾಗೂ ಕಾನೂನು ತಜ್ಞರ ಸ್ಪಷ್ಟ ಅಭಿಪ್ರಾಯ. ಹೀಗಿದ್ದೂ, ಸಂವಿಧಾನದಲ್ಲಿ 370ನೇ ವಿಧಿಯ ಅಳವಡಿಕೆಯು ತಾತ್ಕಾಲಿಕ ವ್ಯವಸ್ಥೆಯಾಗಿತ್ತು ಎಂಬ ಅಂಶವನ್ನು ಮಾತ್ರ ಪರಿಗಣಿಸಿದ್ದ ಈ ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ನ್ಯಾಯಪೀಠ, 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಸರ್ವಾನುಮತದಿಂದ ಎತ್ತಿ ಹಿಡಿದಿತ್ತು. ಈ ಸಾಂವಿಧಾನಿಕ ಪೀಠದಲ್ಲಿ ಹಾಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಕೂಡಾ ಇದ್ದರು ಎಂಬುದಿಲ್ಲಿ ಗಮನಾರ್ಹ.
ಈ ತೀರ್ಪು ಹೊರಬಿದ್ದ ಸುಮಾರು ಎರಡು ವರ್ಷಗಳ ನಂತರ, 370ನೇ ವಿಧಿ ರದ್ದತಿಯನ್ನು ಸಮರ್ಥಿಸಿಕೊಂಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ, ಈ ವಿಧಿಯು ಡಾ.ಬಿ.ಆರ್.ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಾಗಿತ್ತು ಎಂದು ಪ್ರತಿಪಾದಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಭಾರತ ಹೇಳಿ ಕೇಳಿ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶ. ಇಡೀ ದೇಶದ ಆಡಳಿತವನ್ನು ಕೇಂದ್ರ ಸರಕಾರ ನಿಯಂತ್ರಿಸಿದರೂ, ಪ್ರತ್ಯೇಕ ಶಾಸನಸಭೆಗಳನ್ನು ಹೊಂದಿರುವ ರಾಜ್ಯಗಳು ಸಂವಿಧಾನದತ್ತವಾಗಿ ತಮ್ಮದೇ ಆದ ಸ್ವಾಯತ್ತತೆಯನ್ನು ಅನುಭವಿಸುತ್ತಲೇ ಇವೆ. ಈ ಮಾತಿಗೆ ಪ್ರತಿ ರಾಜ್ಯದ ಪ್ರತ್ಯೇಕ ಬಜೆಟ್ ಅನ್ನು ಉದಾಹರಿಸಬಹುದು. ನಮ್ಮ ಒಕ್ಕೂಟ ವ್ಯವಸ್ಥೆಯ ಸೌಂದರ್ಯವಿರುವುದೇ ರಾಜ್ಯಗಳ ಇಂತಹ ಸ್ವಾಯತ್ತತೆಯಲ್ಲಿ.
ಇದನ್ನು ಓದಿದ್ದೀರಾ?: ‘ಜಾತ್ಯತೀತತೆ, ಸಮಾಜವಾದವೇ ನಮ್ಮ ಸಂವಿಧಾನದ ತಳಹದಿ’ ಎಂದಿದ್ದರು ಅಂಬೇಡ್ಕರ್; ಇಲ್ಲಿದೆ ಪುರಾವೆ!
ಇಷ್ಟಕ್ಕೂ ಭಾರತೀಯ ಸಂವಿಧಾನದಡಿ ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ವಿಶೇಷ ಸ್ಥಾನಮಾನ ಒದಗಿಸಿರಲಿಲ್ಲ. ಬದಲಿಗೆ, ಈಶಾನ್ಯ ಭಾರತದ ನಾಗಾಲ್ಯಾಂಡ್ (ವಿಧಿ 371ಎ ಅಡಿ), ಅಸ್ಸಾಂ (371ಬಿ), ಮಣಿಪುರ (ವಿಧಿ 371 ಸಿ), ಸಿಕ್ಕಿಂ (371 ಎಫ್), ಮಿಝೋರಾಂ (ವಿಧಿ 371 ಜಿ ಅಡಿ) ಹಾಗೂ ಅರುಣಾಚಲ ಪ್ರದೇಶ (371 ಎಚ್ ಅಡಿ) ಸೇರಿದಂತೆ ಒಟ್ಟು 12 ರಾಜ್ಯಗಳು ವಿಶೇಷ ಸ್ಥಾನಮಾನವನ್ನು ಹೊಂದಿವೆ. ಈ ರಾಜ್ಯಗಳಲ್ಲಿನ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು, ವಿಶೇಷವಾಗಿ ಪ್ರಕ್ಷುಬ್ಧತೆಗೀಡಾಗಿರುವ ಈ ರಾಜ್ಯಗಳ ಕೆಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲು, ಈ ರಾಜ್ಯಗಳ ಬುಡಕಟ್ಟು ಜನಾಂಗಗಳ ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು ಹಾಗೂ ಜನಾಂಗೀಯ ವೈವಿಧ್ಯತೆಯನ್ನು ರಕ್ಷಿಸಲು, ಭಾರತದ ಉಳಿದ ರಾಜ್ಯಗಳೊಂದಿಗೆ ಈ ರಾಜ್ಯಗಳಲ್ಲಿ ಸಮಾನ ಪ್ರಗತಿ ಸಾಧಿಸಲು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಏಕರೂಪದ ಅವಕಾಶಗಳನ್ನು ಒದಗಿಸಲು ಹಾಗೂ ಈ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದೊಂದಿಗೆ ಈ ವಿಶೇಷ ಸ್ಥಾನಮಾನಗಳನ್ನು ಒದಗಿಸಲಾಗಿದೆ.
ಒಂದು ವೇಳೆ, ಈಶಾನ್ಯ ಭಾರತದ 12 ರಾಜ್ಯಗಳಿಗೆ ಒದಗಿಸಲಾಗಿರುವ ಈ ವಿಶೇಷ ಸ್ಥಾನಮಾನಗಳು ಡಾ. ಬಿ.ಆರ್.ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಲ್ಲವೆಂದಾದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿಸಲಾಗಿದ್ದ ವಿಶೇಷ ಸ್ಥಾನಮಾನ ಹೇಗೆ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧ? ಅಥವಾ ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿಸಲಾಗಿದ್ದ ವಿಶೇಷ ಸ್ಥಾನಮಾನ ಡಾ. ಬಿ.ಆರ್.ಅಂಬೇಡ್ಕರ್ ಅವರ ಏಕ ಸಂವಿಧಾನದ ಪರಿಕಲ್ಪನೆಗೆ ವಿರುದ್ಧವೆನ್ನುವುದಾದರೆ, ಈಶಾನ್ಯ ಭಾರತದ 12 ರಾಜ್ಯಗಳಿಗೆ ನೀಡಲಾಗಿರುವ ವಿಶೇಷ ಸ್ಥಾನಮಾನಗಳು ಹೇಗೆ ವಿರುದ್ಧವಲ್ಲ ಎಂಬುದು ಸಂವಿಧಾನ ತಜ್ಞರು ಹಾಗೂ ಕಾನೂನು ತಜ್ಞರ ಪ್ರಶ್ನೆ.
ಈ ಪ್ರಶ್ನೆಗೆ ಖುದ್ದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರೇ ಸ್ಪಷ್ಟನೆ ನೀಡಬೇಕಿರುವುದು ಈ ಹೊತ್ತಿನ ತುರ್ತು.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ