ಬಿಜೆಪಿಯ ಕೃಷಿ ಕಾಯ್ದೆಗಳನ್ನು ಬಲವಾಗಿ ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ರೈತರ ಆದಾಯ ದ್ವಿಗುಣ ಮಾಡಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ ನಡೆಸಲು ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ನಿರ್ದೇಶನ ನೀಡಿರುವುದು ಕಳವಳಕಾರಿ ಸಂಗತಿ. ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಕೂಡ ರೈತರ ವಿಚಾರದಲ್ಲಿ ಭಿನ್ನವಾಗಿಲ್ಲ ಎಂಬುದನ್ನು ಸರ್ಕಾರದ ನಡೆಯೇ ತೋರಿಸುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದ್ದ ವಿವಾದಿತ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ಮಾಡಿ ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ರಾಜ್ಯ ಸರ್ಕಾರ ಸೂಚಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
2024ರ ಡಿಸೆಂಬರ್ 24ರಂದು ರಾಜ್ಯ ಕೃಷಿ ಇಲಾಖೆಗೆ ಸರ್ಕಾರ ಆದೇಶ ಹೊರಡಿಸಿ, ಕೃಷಿ ಬೆಲೆ ಆಯೋಗಕ್ಕೆ ನೇಮಕ ಮಾಡಲಾದ ಅಧ್ಯಕ್ಷ ಮತ್ತು ಸದಸ್ಯರಿಗೆ ಷರತ್ತು-ನಿಬಂಧನೆ ಹಾಗೂ ಕರ್ತವ್ಯಗಳನ್ನು ನಿಗದಿ ಮಾಡಲಾಗಿದೆ. ಇದೇ ಆದೇಶದಲ್ಲಿ ಕೇಂದ್ರ ಸರ್ಕಾರದ ಮೂರು ಕಾಯ್ದೆಗಳು ಮತ್ತು ಅದರ ಆಧಾರದಲ್ಲಿ 2020ರ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಆಧಾರವಾಗಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಅಷ್ಟೇ ಅಲ್ಲ; ರೈತರ ಆದಾಯ ಹೆಚ್ಚಿಸಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ ನಡೆಸಬೇಕು ಎಂದು ಸೂಚಿಸಲಾಗಿದೆ.
‘ರೈತ ಉತ್ಪನ್ನ ಮತ್ತು ವಾಣಿಜ್ಯ ಉತ್ತೇಜನ ಹಾಗೂ ಸೌಲಭ್ಯಗಳ ಕಾಯ್ದೆ-2020‘, ‘ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ರಕ್ಷಣೆ ಕಾಯ್ದೆ-2020‘ ಹಾಗೂ ‘ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020‘ಗಳನ್ನು ಕೇಂದ್ರ ಸರ್ಕಾರವು 2020ರಲ್ಲಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿತ್ತು. ಅದೇ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಎಪಿಎಂಸಿಗಳ ಹೊರಗೂ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ಮಾಡಿಕೊಡಲು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಈ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ 562 ರೈತ ಸಂಘಟನೆಗಳು ಒಗ್ಗೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಐತಿಹಾಸಿಕ ದೆಹಲಿ ರೈತ ಹೋರಾಟ ನಡೆಸಿದವು. ಆ ಹೋರಾಟದಲ್ಲಿ ಏಳು ನೂರಕ್ಕೂ ಹೆಚ್ಚು ರೈತರು ಪ್ರಾಣ ತ್ಯಾಗ ಮಾಡಿದ್ದಾರೆ.

ಆಗ ರಾಜ್ಯದಲ್ಲಿ ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆ ಮತ್ತು ರಾಜ್ಯ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದನ್ನು ವಿರೋಧಿಸಿ, “ರೈತರಿಗೆ ಮಾರಕ ಮತ್ತು ಇವುಗಳ ಹಿಂದೆ ಕಾರ್ಪೊರೇಟ್ ಲಾಬಿ ಇದೆ” ಎಂದು ಗಂಭೀರವಾಗಿ ಆರೋಪಿಸಿತ್ತು. ಅಷ್ಟೇ ಅಲ್ಲದೆ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ 2023ರ ವಿಧಾನಸಭಾ ಚುನಾವಣೆಯ ವೇಳೆ ಮಂಡಿಸಿದ್ದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು.
ರೈತರು ದೆಹಲಿ ಗಡಿಯಲ್ಲಿ ಈ ಕಾಯ್ದೆಗಳ ವಿರುದ್ಧ ಪ್ರಾಣವನ್ನು ಲೆಕ್ಕಿಸದೇ ನಡೆಸಿದ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು, 2021ರ ಡಿಸೆಂಬರ್‌ನಲ್ಲಿ ಮೂರೂ ಕಾಯ್ದೆಗಳನ್ನು ವಾಪಸ್ ಪಡೆಯಿತು. ವಿಪರ್ಯಾಸ ಎಂದರೆ ಅವುಗಳ ಆಧಾರದಲ್ಲಿ ರಾಜ್ಯದಲ್ಲಿ 2020ರಲ್ಲಿ ಜಾರಿಗೆ ತರಲಾದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಇನ್ನೂ ಜಾರಿಯಲ್ಲಿಟ್ಟುಕೊಂಡಿದೆ.
ಬಿಜೆಪಿಯು ರೈತರ ಆದಾಯವನ್ನು ದ್ವಿಗುಣಗೊಳಿಸುವ ಬೋಗಸ್ ಮಾತುಗಳನ್ನು ಆಡಿ, ಕೃಷಿ ಭೂಮಿಯನ್ನು, ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಹುನ್ನಾರ ಮಾಡಿದ್ದನ್ನು ವಿರೋಧಿಸಿದ್ದ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವುದಾಗಿ ಮಾತು ಕೊಟ್ಟಿತ್ತು. ಆದರೆ, ಈಗ ರೈತರ ಆದಾಯ ಹೆಚ್ಚಿಸುವ ಹೆಸರಿನಲ್ಲಿ ಬಿಜೆಪಿ ಸರ್ಕಾರ ರೂಪಿಸಿದ ಕರಾಳ ನೀತಿಗಳನ್ನೇ ಕೃಷಿ ಬೆಲೆ ಆಯೋಗದ ಮೂಲಕ ಯಥಾವತ್ ಜಾರಿಗೊಳಿಸಲು ಹೊರಟ ಸಿದ್ದರಾಮಯ್ಯ ಸರ್ಕಾರದ ನಡೆ ರೈತ ಹೋರಾಟಗಾರರ ಕಣ್ಣನ್ನು ಕೆಂಪಾಗಿಸಿದೆ.
ಹೀಗಾಗಿ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುರ್ತು ಬಹಿರಂಗ ಪತ್ರ ಬರೆದು, ಸರ್ಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಸರ್ಕಾರ ರೂಪಿಸಿದ ಕರಾಳ ನೀತಿಗಳನ್ನೇ ಕಾಂಗ್ರೆಸ್ ಸರ್ಕಾರವೂ ಪಾಲಿಸುತ್ತಿರುವುದು ರೈತಕುಲಕ್ಕೆ ಮಾಡುತ್ತಿರುವ ಮಹಾದ್ರೋಹವಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

“ತನ್ನ ರಾಜಕೀಯ ಲಾಭಕ್ಕಾಗಿ ಅನ್ನದಾತರ ಹಿತಾಸಕ್ತಿಯನ್ನು ಬಲಿಕೊಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಯಲಾಗಿದೆ. ಹಿಂದಿನ ಅವಧಿಯಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಮುಂದಾದಾಗ ಅದನ್ನು ವಿರೋಧಿಸಿ, ಬೀದಿ ರಂಪಾಟ ಮಾಡಿ, ತನ್ನ ರಾಜಕೀಯ ತೆವಲಿಗೆ ಸ್ಥಾಪಿತವಾದ ಹಿತಾಸಕ್ತಿಗಳ ರಕ್ಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ಅದೇ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ” ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಡಾ. ಅಶೋಕ ಎಂ. ದಳವಾಯಿ ಅವರನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದೆ. ಕೇಂದ್ರದ ಮೂರು ಕರಾಳ ಕೃಷಿ ಕಾಯ್ದೆಗಳ ಜಾರಿಯಲ್ಲಿ ಅಶೋಕ ಎಂ. ದಳವಾಯಿ ಅವರ ಪಾತ್ರ ಇತ್ತು ಎಂಬುದು ರೈತ ಹೋರಾಟಗಾರರ ಆರೋಪ. ಅಶೋಕ ದಳವಾಯಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಜಾತಿ ಪ್ರೇಮ ಹಿಡಿದುಕೊಂಡು ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದಲೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
'ಕೃಷಿ ಬೆಲೆ ಆಯೋಗದ ಅಧ್ಯಕ್ಷ ಸ್ಥಾನದಿಂದ ಅಶೋಕ ದಳವಾಯಿ ಪದಚ್ಯುತಿಗೊಳ್ಳಲಿ' ಈ ಎಲ್ಲ ವಿಚಾರವಾಗಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಅವರನ್ನು ಈ ದಿನ.ಕಾಮ್ ಮಾತಿಗೆ ಸಂಪರ್ಕಿಸಿದಾಗ, "ಕಾಂಗ್ರೆಸ್ ಸರ್ಕಾರ ಕೂಡ ಹಿಂಬಾಗಿಲಿನ ಮೂಲಕ ಕೇಂದ್ರ ಬಿಜೆಪಿಯ ಮೂರು ಕೃಷಿ ಕಾಯ್ದೆ ಮತ್ತು ರಾಜ್ಯ ಬಿಜೆಪಿಯ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅಂಶಗಳನ್ನೇ ಜಾರಿ ಮಾಡಲು ಹೊರಟಿದೆ. ಇದಕ್ಕೆ ಕೃಷಿ ಬೆಲೆ ಆಯೋಗವನ್ನು ದಾಳಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ರಚಿಸುವಲ್ಲಿ ಹೆಚ್ಚಿನ ಸಹಾಯ ಮಾಡಿದ್ದು ಅಶೋಕ ದಳವಾಯಿ. ಆಗ ಅವರು ಕೇಂದ್ರ ಸರ್ಕಾರದ ಕೃಷಿ ಮತ್ತು ಸಹಕಾರ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಈಗ ಅವರನ್ನೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. ಇದರಲ್ಲಿ ಏನೋ ಹುನ್ನಾರ ಅಡಗಿದೆ" ಎಂದು ಆರೋಪಿಸಿದರು. "ಸರ್ಕಾರ ರಚನೆಗೂ ಮುನ್ನ ಸಿದ್ದರಾಮಯ್ಯ ಅವರು ಬಿಜೆಪಿಯ ರೈತ ವಿರೋಧಿ ಕಾಯ್ದೆಗಳ ಬಗ್ಗೆ ಅಬ್ಬರಿಸಿ ಮಾತನಾಡಿದ್ದರು. ಅವರ ಅಬ್ಬರ ಈಗ ಎಲ್ಲಿದೆ? ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುವ ಅಶೋಕ್ ದಳವಾಯಿ ಅವರನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಯಾಕೆ ನೇಮಿಸಲಾಗಿದೆ? ಸಿದ್ದರಾಮಯ್ಯ ಅವರಿಗೂ ಕೇಂದ್ರದ ಕೃಷಿ ಕಾಯ್ದೆಗಳ ಅಂಶಗಳನ್ನು ಮುಂದುವರಿಸುವ ನಿಲುವು ಇದೆಯಾ? ಇದಕ್ಕೆಲ್ಲ ಸರ್ಕಾರ ಸ್ಪಷ್ಟನೆ ಕೊಡಬೇಕು. 2018ರಲ್ಲಿ ಹೆಬ್ಬಾಳದ ಪಶುಭವನದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ನಮ್ಮಿಂದ ಮಾಹಿತಿ ಸಂಗ್ರಹಿಸುವ ನಾಟಕವಾಡಿ, ಕೊನೆಗೆ ಕಾಯ್ದೆಗೆ ತಿದ್ದುಪಡಿ ತಂದಾಗಲೇ ಗೊತ್ತಾಗಿದ್ದು ಅಶೋಕ ದಳವಾಯಿ ಕುತಂತ್ರ ನೀತಿ. ಅವರಿಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇಲ್ಲ. ಕೂಡಲೇ ಅವರನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಬೇಕು" ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದ ಭಂಡತನಕ್ಕೆ ಏನು ಹೇಳಬೇಕು: ಪ್ರಕಾಶ ಕಮ್ಮರಡಿ "2020ರಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳಿಗೆ ವ್ಯಕ್ತವಾದ ರೈತರ ಸಾಮೂಹಿಕ ಸಿಟ್ಟು ಕಂಡು ಕೊನೆಗೆ ಕೇಂದ್ರವೇ ಆ ಕಾಯ್ದೆಗಳನ್ನು ವಾಪಸ್ ಪಡೆಯಿತು. ಅದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ರಾಜ್ಯ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಿತ್ತು. ಕಾಂಗ್ರೆಸ್ ಆಗ ಇದಕ್ಕೆಲ್ಲ ತೀವ್ರ ವಿರೋಧ ವ್ಯಕ್ತಪಡಿಸಿ ನಮ್ಮ ಪ್ರತಿಭಟನೆಗಳಲ್ಲಿ ಭಾಗಿಯಾಗಿ, ಅಧಿಕಾರಕ್ಕೆ ಬಂದರೆ ರಾಜ್ಯ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿದ್ದ ಎಪಿಎಂಸಿ ಕಾಯ್ದೆ ಮತ್ತು ರಾಜ್ಯ ಭೂ ಸುಧಾರಣಾ ಕಾಯ್ದೆ ರದ್ದುಪಡಿಸುವುದಾಗಿ ಭರವಸೆ ಕೊಟ್ಟಿತ್ತು. ರೈತರು ಸಿದ್ದರಾಮಯ್ಯ ಅವರ ಮಾತಿಗೆ ಬೆಲೆಕೊಟ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಆದರೆ ಇದೇ ಕಾಂಗ್ರೆಸ್ ಸರ್ಕಾರ ಏನು ಮಾಡಲು ಹೊರಟಿದೆ? ಕೇಂದ್ರಕ್ಕೆ ಮೂರು ಕೃಷಿ ಕಾಯ್ದೆ ರಚಿಸಲು ಸಹಕಾರ ಮಾಡಿದ ಅಶೋಕ್ ದಳವಾಯಿ ಅವರನ್ನೇ ಕೃಷಿ ಬೆಲೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಾಂಗ್ರೆಸ್ ಸರ್ಕಾರದ ಈ ಭಂಡತನಕ್ಕೆ ಏನು ಹೇಳಬೇಕು" ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ ಕಮ್ಮರಡಿ ಪ್ರಶ್ನಿಸಿದರು. "ಇಡೀ ಕೃಷಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತನ್ನ ಕೈವಶ ಮಾಡಿಕೊಂಡು, ರಾಜ್ಯದಿಂದ ಎಲ್ಲ ಹಕ್ಕುಗಳನ್ನು ಬೇರ್ಪಡಿಸಿ, ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಹುನ್ನಾರ ಆ ಮೂರು ಕಾಯ್ದೆಯಲ್ಲಿತ್ತು. ಈಗ ಸಿದ್ದರಾಮಯ್ಯ ಸರ್ಕಾರ ಅದೇ ಕಾಯ್ದೆಗಳಿಗೆ ಜೋತು ಬಿದ್ದು ರೈತರ ಆದಾಯ ಹೆಚ್ಚಿಸಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ ನಡೆಸಲು ರಾಜ್ಯದ ಕೃಷಿ ಬೆಲೆ ಆಯೋಗಕ್ಕೆ ಸೂಚಿಸಿರುವುದು ಉದ್ದೇಶಪೂರ್ವಕವೋ ಅಥವಾ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದೆ ಇದೆಲ್ಲ ಆಗುತ್ತಿದೆಯೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ" ಎಂದರು.

ರಾಜ್ಯ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿದ್ದ ಎಪಿಎಂಸಿ ಕಾಯ್ದೆ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಅಧಿವೇಶನದಲ್ಲಿ ಒಮ್ಮೆ ಪ್ರಯತ್ನಿಸಿತ್ತು. ಅದೇ ಸಮಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಫ್ರೀಡಂಪಾರ್ಕ್‌ನಲ್ಲಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಗೆ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಆಗಮಿಸಿ, ಎಪಿಎಂಸಿ ಕಾಯ್ದೆ ರದ್ದತಿಗೆ ಬೆಂಬಲ ಸೂಚಿಸಿದ್ದರು. ಆದರೆ, ಅಧಿವೇಶನದಲ್ಲಿ ಎಪಿಎಂಸಿ ಕಾಯ್ದೆ ರದ್ದತಿಗೆ ವಿರುದ್ಧವಾಗಿ ಬಿಜೆಪಿ ಜೊತೆ ಜೆಡಿಎಸ್ ನಿಂತಿದ್ದರಿಂದ ವಿಧಾನ ಪರಿಷತ್‌ನಲ್ಲಿ ಬಹುಮತ ಸಿಗಲಿಲ್ಲ. ಅಲ್ಲಿಗೆ ಎಪಿಎಂಸಿ ಕಾಯ್ದೆ ರದ್ದು ಮಾಡುವ ಸರ್ಕಾರದ ಪ್ರಯತ್ನ ನಿಂತುಹೋಗಿದೆ. ಈ ಬಗ್ಗೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಅಭಿಪ್ರಾಯ ಪಡೆಯಲು ಕರೆ ಮಾಡಿದಾಗ ಸಚಿವರು ಕರೆ ಸ್ವೀಕರಿಸಲಿಲ್ಲ.
ಬಿಜೆಪಿಯ ಕೃಷಿ ಕಾಯ್ದೆಗಳನ್ನು ಬಲವಾಗಿ ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ರೈತರ ಆದಾಯ ದ್ವಿಗುಣ ಮಾಡಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ ನಡೆಸಲು ರಾಜ್ಯದ ಕೃಷಿ ಬೆಲೆ ಆಯೋಗಕ್ಕೆ ನಿರ್ದೇಶನ ನೀಡಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಕೂಡ ರೈತರ ವಿಚಾರದಲ್ಲಿ ಭಿನ್ನವಾಗಿಲ್ಲ ಎಂಬುದನ್ನು ಸರ್ಕಾರದ ನಡೆಯೇ ತೋರಿಸಿಕೊಡುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ರೈತರ ಸಿಟ್ಟಿಗೆ ಗುರಿಯಾಗುವ ಮೊದಲೇ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.