ವಾರ್ಷಿಕವಾಗಿ ₹20,617 ಕೋಟಿಗಳ ವಹಿವಾಟು ಹೊಂದಿರುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಡಿ ಕೆ ಸುರೇಶ್ ಅವರು ಕಣ್ಣೀಟ್ಟು ಸಾಗುತ್ತಿದ್ದಾರೆ. ಸುಮಾರು 26.89 ಲಕ್ಷ ಹಾಲು ಉತ್ಪಾದಕರು ಕೆಎಂಎಫ್‌ನೊಂದಿಗೆ ನೋಂದಾಯಿಸಲ್ಪಟ್ಟಿದ್ದಾರೆ.
ಬೆಂಗಳೂರು, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬಮೂಲ್) ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದೆ. ಮಾಜಿ ಸಂಸದ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಅವರು ಅವಿರೋಧವಾಗಿ ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟೇ ಡಿ ಕೆ ಸುರೇಶ್ ಮುಂದಿನ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಸುರೇಶ್ ಅವರು ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿ, ಇದೀಗ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಏರಲು ಬಾಕಿ ಉಳಿದಿರುವುದು ಈಗ ಒಂದೇ ಮೆಟ್ಟಿಲು.
ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಸುರೇಶ್ ಅವರು ಬೆಂಗಳೂರು ಡೈರಿ ಸರ್ಕಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಕುದೂರು ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ(ಬಮೂಲ್)ನಲ್ಲಿ 16 ನಿರ್ದೇಶಕರ ಪೈಕಿ 14 ಜನ ಚುನಾವಣೆ ಮೂಲಕ ಆರಿಸಲಾಗಿದ್ದು, ಇಬ್ಬರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ 11 ಮಂದಿ ನಿರ್ದೇಶಕರಾಗಿರುವುದು ಡಿ ಕೆ ಸುರೇಶ್ ಅವರ ಮುಂದಿನ ಹೆಜ್ಜೆಗಳಿಗೆ ಬಲತುಂಬಿದೆ.
ಮುಂಬರುವ ದಿನಗಳಲ್ಲಿ ಕೆಎಂಎಫ್ ಅಧ್ಯಕ್ಷರಾಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ತಂತ್ರವನ್ನು ಡಿ ಕೆ ಸುರೇಶ್ ಹೆಣೆದಂತೆ ಕಾಣುತ್ತಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದ್ದು, ಡಿ ಕೆ ಸುರೇಶ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನುತ್ತವೆ ಮೂಲಗಳು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ರಾಜಕಾರಣಿ ಡಿ ಕೆ ಸುರೇಶ್. ಮೋದಿ ಅಲೆಯಲ್ಲೂ ರಾಜ್ಯದಲ್ಲಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಗೆದ್ದು ಪಕ್ಷಕ್ಕೆ ಆಸರೆಯಾಗಿದ್ದರು. ಆದರೆ, ರಾಜಕೀಯ ಎದುರಾಳಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಹೆಣೆದ ರಣತಂತ್ರಕ್ಕೆ ಡಿ ಕೆ ಸುರೇಶ್ ಸೋಲು ಕಂಡರು. ಆ ಸೋಲು ಡಿಕೆ ಸಹೋದರರ ಪಾಲಿಗೆ ಬಹುದೊಡ್ಡ ರಾಜಕೀಯ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋತ ನಂತರ ಡಿ ಕೆ ಸುರೇಶ್ ಸ್ವಲ್ಪ ಸಮಯ ಮೌನವಾಗಿದ್ದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವಕಾಶವಿದ್ದರೂ ಸ್ಪರ್ಧಿಸದೇ ಸಿ ಪಿ ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ಕರೆದುಕೊಂಡು ಬಂದು ಗೆಲ್ಲಿಸಿದರು.
“ಜನ ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಹೀಗಾಗಿ ನಾನು ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ” ಎಂದಿದ್ದ ಡಿ ಕೆ ಸುರೇಶ್ ಇದೀಗ ರಾಷ್ಟ್ರ ರಾಜಕಾರಣದ ಬದಲಾಗಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ‘ಬೆಂಗಳೂರು ಹಾಲು ಒಕ್ಕೂಟ’ದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ಯ ರಾಜಕೀಯದಲ್ಲಿ ಅವರ ಭವಿಷ್ಯದ ಅಡಿಪಾಯವಾಗಿದೆ.
ಕೆಎಂಎಫ್ ಅಡಿಯಲ್ಲಿ 14 ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಹಾಲು ಒಕ್ಕೂಟಗಳ ಅಧ್ಯಕ್ಷರು ಕೆಎಂಎಫ್‌ನ ನಿರ್ದೇಶಕರಾಗಲಿದ್ದಾರೆ. ಈ ನಿರ್ದೇಶಕರಲ್ಲಿ ಒಬ್ಬರು ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಇದುವರೆಗೂ 14 ಒಕ್ಕೂಟಗಳ ಪೈಕಿ 11 ಒಕ್ಕೂಟಗಳ ಚುನಾವಣೆ ಪೂರ್ಣಗೊಡಿದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬಳ್ಳಾರಿ ಚುನಾವಣೆ ಬಾಕಿಯಿದೆ.
ಕೆಎಂಎಫ್‌ನ ವಾರ್ಷಿಕ ಆದಾಯ 20,000 ಕೋಟಿ ರೂ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘ ಕೆಎಂಎಫ್ಗೆ ಐವತ್ತು ವರ್ಷ ಇತಿಹಾಸ ಇದೆ. 1974ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೊರೇಶನ್ ಆಗಿ ಅಸ್ತಿತ್ವಕ್ಕೆ ಬಂತು. 1984ರಲ್ಲಿ ಕೆಎಂಎಫ್ ಎಂದು ಇದರ ಹೆಸರು ಬದಲಿಸಲಾಯಿತು. 1983ರಲ್ಲಿ ನಂದಿನಿ ಬ್ರ್ಯಾಂಡ್ ಅನ್ನು ಪರಿಚಯಿಸಲಾಯಿತು. ಇವತ್ತು ಕೆಎಂಎಫ್‌ನ ವಾರ್ಷಿಕ ಆದಾಯ 20,000 ಕೋಟಿ ರೂ. ಆಗಿದೆ. ಅಮೂಲ್ ಬಿಟ್ಟರೆ ಕೆಎಂಎಫ್ ಭಾರತದ ಅತಿದೊಡ್ಡ ಹಾಲು ಒಕ್ಕೂಟವಾಗಿದೆ.
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಈ ಬಗ್ಗೆ ಟೀಕೆ ಕೇಳಿಬಂದರೂ ಕರ್ನಾಟಕದ ಹಾಲಿನ ಸಂಸ್ಥೆಯೊಂದು ಈ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ. ಕೆಎಂಎಫ್‌ನ 50 ವರ್ಷದ ಮೈಲಿಗಲ್ಲಿನಲ್ಲಿ ಇದೊಂದು ಮಹತ್ವದ ಬೆಳವಣಿಗೆ ಆಗಿದೆ.
ಕರ್ನಾಟಕ ಹಾಲು ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಎಲ್.ಬಿ.ಪಿ. ಭೀಮಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದ ವೇಳೆ ‘ಕೆಎಂಎಫ್ ಪ್ರಸ್ತುತ ₹20,617 ಕೋಟಿಗಳ ವಹಿವಾಟು ಹೊಂದಿದ್ದು, ಮುಂದಿನ ಮೂರು ವರ್ಷಗಳಲ್ಲಿ ₹25 ಸಾವಿರ ಕೋಟಿಗಳ ವಹಿವಾಟಿನ ಗುರಿ ನಿಗದಿಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದರು.

ಉತ್ತರ ಭಾರದಲ್ಲೂ ‘ನಂದಿನಿ’ ತನ್ನ ವಹಿವಾಟನ್ನು ವಿಸ್ತರಿಸುತ್ತಿದೆ. ಪ್ರಸ್ತುತ ₹20,617 ಕೋಟಿಗಳ ವಹಿವಾಟು ಹೊಂದಿರುವ ಕೆಎಂಎಫ್ ಮೇಲೆ ಡಿ ಕೆ ಸುರೇಶ್ ಅವರು ಕಣ್ಣೀಟ್ಟು ಸಾಗುತ್ತಿದ್ದಾರೆ. ಸುಮಾರು 26.89 ಲಕ್ಷ ಹಾಲು ಉತ್ಪಾದಕರು ಕೆಎಂಎಫ್‌ನೊಂದಿಗೆ ನೋಂದಾಯಿಸಲ್ಪಟ್ಟಿದ್ದಾರೆ. ಸುರೇಶ್ ಅಧ್ಯಕ್ಷರಾಗುವ ಹಾದಿ ಕಠಿಣವಾಗಿಲ್ಲ. ಆದರೆ ಪಕ್ಷದೊಳಗೆ ಪೈಪೋಟಿ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ತಮ್ಮ ಬಣದಲ್ಲೇ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸುರೇಶ್ ಅವರಿಗೆ ಅವರ ಸಹೋದರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗುಂಪಿನ ಬೆಂಬಲವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಮಾಲೂರು ಶಾಸಕ ಕೆ ವೈ ನಂಜೇಗೌಡ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಬೆನ್ನಲ್ಲೇ ಕೆಎಂಎಫ್‌ನ ಹಾಲಿ ಅಧ್ಯಕ್ಷ ಭೀಮಾ ನಾಯ್ಕ ಅವರೂ ಮತ್ತೊಮ್ಮೆ ಸ್ಪರ್ಧಿಸುವುದಾಗಿ ಹೇಳಿದ್ದು ಕುತೂಹಲ ಸೃಷ್ಟಿಸಿದೆ.
ಡಿ ಕೆ ಸುರೇಶ್ ನಡೆಯನ್ನು ಡಿಕೆ ಬ್ರದರ್ಸ್ ಕೆಎಂಎಫ್‌ನ ನಿಯಂತ್ರಣದ ಮೂಲಕ ಗ್ರಾಮೀಣ ಪ್ರದೇಶದಲ್ಲಿ, ವಿಶೇಷವಾಗಿ ಒಕ್ಕಲಿಗ ಸಮುದಾಯದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ವಿಸ್ತರಿಸುವ ತಂತ್ರವೆಂದೇ ಹೇಳಲಾಗುತ್ತಿದೆ. ಕೆಎಂಎಫ್, ಕರ್ನಾಟಕದ ಹಾಲಿನ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದ್ದು, ಇದರ ಅಧ್ಯಕ್ಷ ಸ್ಥಾನವು ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಒಳಗಿನ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಗುಂಪುಗಾರಿಕೆಯ ಸಂಘರ್ಷದಲ್ಲಿ ಗೆಲುವು ಯಾರಿಗೆ ಎಂಬುದು ಆಗಸ್ಟ್ ಹೊತ್ತಿಗೆ ತಿಳಿಯಲಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.