ಕೊಲೆ ಪ್ರಕರಣದಲ್ಲಿ ನಟ ದರ್ಶನ ಬಂಧನವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, “ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾರಿಗೂ ಭಯ ಇಲ್ಲ. ಇದು ಕೊಲೆಗಡುಕರ ಸರ್ಕಾರ ಆಗಿದೆ. ಚುನಾವಣೆಯಲ್ಲಿ ನಟ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು ಎಂದು ಅವರನ್ನು ಶಾಮಿಯಾನ ಹಾಕಿ ರಕ್ಷಣೆ ಮಾಡುತ್ತಿದ್ದಾರೆ” ಎಂದಿದ್ದಾರೆ.
“ನಟ ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮೀಯಾನ ಹಾಕಿ ರಕ್ಷಣೆ ಕೊಡಲಾಗಿದೆ. ದೊಡ್ಡವರಿಗೊಂದು ನ್ಯಾಯ, ಜನರಿಗೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೊಂದು ಕಾನೂನು ಎಂಬ ಸಂದೇಶವನ್ನು ಸರ್ಕಾರ ರವಾನಿಸಿದೆ. ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿ. ಕೊಲೆಗಡುಕರ ರಕ್ಷಣೆಯನ್ನು ಸರ್ಕಾರ, ಪೊಲೀಸರು ಮಾಡಬಾರದು” ಎಂದು ಹೇಳಿದ್ದಾರೆ.
“ಈ ವೇಳೆ ಯಡಿಯೂರಪ್ಪ ಅವರ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಯಡಿಯೂರಪ್ಪ ಅವರ ಸುದೀರ್ಘವಾದ ರಾಜಕಾರಣ ನೋಡಿದ್ದೇನೆ” ಎಂದಿದ್ದಾರೆ.
“ಈ ರೀತಿಯ ಆರೋಪಗಳು ಯಡಿಯೂರಪ್ಪ ವಿರುದ್ಧ ಯಾವತ್ತೂ ಕೇಳಿ ಬಂದಿರಲಿಲ್ಲ. ಈಗ ಏಕೆ ಕೇಳಿಬರುತ್ತಿವೆ. ಇದರಲ್ಲಿ ಸರ್ಕಾರದ ಪಾತ್ರದ ಬಗ್ಗೆ ಗೊತ್ತಿಲ್ಲ. ನ್ಯಾಯಾಲಯ ನೆಲದ ಕಾನೂನು ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ
“ಯಡಿಯೂರಪ್ಪ ವಿರುದ್ಧದ ಪ್ರಕರಣ ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸ್ತಿದ್ದಾರೆ. ಏನಾಗುತ್ತದೆ ಎಂಬುದನ್ನ ಕಾದು ನೋಡೋಣ ಎಂದು ಶೋಭಾ ಹೇಳಿದ್ದಾರೆ.