ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿಯೇ?

Date:

Advertisements
ಯುಪಿಎ 1 ಮತ್ತು 2 ಅವಧಿಯಲ್ಲಿನ ಕಲ್ಯಾಣ ಯೋಜನೆಗಳ ಕಾಯ್ದೆಗಳು ಮತ್ತು ಕರಾಳ ಶಾಸನಗಳು ಎರಡಕ್ಕೂ ಮನಮೋಹನ್ ಸಿಂಗ್‌ ಅವರು ಹೊಣೆಗಾರರಾಗಿರಲಿಲ್ಲ ಎನ್ನುವ ವಾಸ್ತವ ದುರ್ಬಲ ಪ್ರಧಾನಿಯನ್ನು ಸಂಕೇತಿಸುತ್ತದೆಯೇ?

2004-2014ರ ಹತ್ತು ವರ್ಷಗಳ ಪ್ರಧಾನಮಂತ್ರಿಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ತಮ್ಮ ಎಲ್‌ಪಿಜಿ ಎನ್ನುವ ಕರಾಳ ನೀತಿಯಿಂದ ಉಂಟಾದ ಗುಣಪಡಿಸಲಾಗದ ಗಾಯಗಳಿಗೆ ಮುಲಾಮು ಎನ್ನುವಂತೆ ಕಲ್ಯಾಣ ಯೋಜನೆಗಳ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಸಹ ಚರ್ಚೆಗೆ ಯೋಗ್ಯವಾಗಿದೆ.

ಆದರೆ ಅರುಣಾ ರಾಯ್‌, ಜೀನ್‌ ಡ್ರೀಜೆಯಂತಹ ಅಭಿವೃದ್ಧಿ ಆರ್ಥಿಕ ತಜ್ಞರು, ಹರ್ಷ ಮಂದರ್‌ರಂತಹ ಚಿಂತಕರು, ಸೋನಿಯಾ ಗಾಂಧಿಯವರಂತಹ ಪ್ರಬುದ್ಧ ರಾಜಕಾರಣಿಗಳನ್ನು ಒಳಗೊಂಡ ‘ರಾಷ್ಟ್ರೀಯ ಸಲಹಾ ಮಂಡಳಿ’ಯ(ಎನ್‌ಎಸಿ) ಸಾಮಾಜಿಕ ಚಿಂತನೆ ಮತ್ತು ಅರೆ ಸಮಾಜವಾದಿ ಒಳನೋಟಗಳ ಕಾರಣದಿಂದ ಈ ಕಲ್ಯಾಣ ಯೋಜನೆಗಳ ಕಾಯ್ದೆಗಳು ಅನುಷ್ಠಾನಗೊಂಡವು ಎನ್ನುವುದು ವಾಸ್ತವ.

ಇಲ್ಲಿ ಸಿಂಗ್‌ ಅವರು ಅನೇಕ ‘ರೆ’ಗಳ ಋಣದಲ್ಲಿದ್ದಾರೆ. ಎನ್‌ಎಸಿ ಇಲ್ಲದೇ ಹೋಗಿದ್ದರೆ, ಡಿ ಫ್ಯಾಕ್ಟೋ ಪಿಎಂ ಎಂದು ಅಪಪ್ರಚಾರಕ್ಕೆ ಒಳಗಾಗಿದ್ದ ಸೋನಿಯಾ ಗಾಂಧಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ ಮತ್ತು ಯುಪಿಎ 1 ಅವಧಿಯಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಎಡ ಪಕ್ಷಗಳು ಜನಪರ ಕಾಳಜಿಯುಳ್ಳ ನೀತಿಗಳನ್ನು ರೂಪಿಸದಿದ್ದರೆ ಸಿಂಗ್‌ ಅವರ ಪ್ರಧಾನಮಂತ್ರಿಗಳ ಹತ್ತು ವರ್ಷಗಳ ಅವಧಿ ಮತ್ತಷ್ಟು ವೈಫಲ್ಯಗಳಿಂದ ಕೂಡಿರುತ್ತಿತ್ತು. ಈ ಸತ್ಯವೂ ಅವರ ಸಮಾಜೋ-ಆರ್ಥಿಕ-ರಾಜಕೀಯ ಚಿಂತನೆಯ ಮಿತಿಯನ್ನು ತೋರಿಸುತ್ತದೆ.

Advertisements

ಆರ್‌ಟಿಇ(2009), ನರೇಗಾ(2005), ಆರ್‌ಟಿಐ(2005), ಆಹಾರ ಭದ್ರತೆ(2013)ಗಳಂತಹ ಜನಪರ ಕಲ್ಯಾಣ ಕಾಯ್ದೆಗಳು ಯುಪಿಎ 1 ಮತ್ತು 2 ಅವಧಿಯಲ್ಲಿ ಜಾರಿಗೊಂಡಿದ್ದು ಈ ಸರ್ಕಾರದ ಹಿರಿಮೆಯನ್ನು ತೋರಿಸುತ್ತದೆ. ಆದರೆ ತಮ್ಮ ಎಲ್‌ಪಿಜಿ ಪರವಾದ ನೀತಿಗಳಿಗೆ ವಿರುದ್ಧವಾಗಿದ್ದ ಈ ಕಾಯ್ದೆಗಳನ್ನು ಎನ್‌ಎಸಿ ಇಲ್ಲದೇ ಹೋಗಿದ್ದರೆ ಸಿಂಗ್‌ ಅವರು ಸ್ವಯಂಪೂರ್ವಕವಾಗಿ ಜಾರಿಗೊಳಿಸುತ್ತಿದ್ದರೆ ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವ ಉತ್ತರ ದೊರಕುತ್ತದೆ. ಯಾಕೆಂದರೆ ಅವರ ಆರ್ಥಿಕ ಚಿಂತನೆಗಳು ಸಂಪೂರ್ಣವಾಗಿ ಬಂಡವಾಳಶಾಹಿ ಪರವಾದ ಅಭಿವೃದ್ಧಿಯನ್ನು ದೃಢವಾಗಿ ನಂಬಿಕೊಂಡಿದ್ದರೆ, ಅವರ ಸಚಿವ ಸಂಪುಟದಲ್ಲಿಯೂ ಇಂತಹ ಕಲ್ಯಾಣ ಯೋಜನೆಗಳ ಪರವಾಗಿ ಯೋಚಿಸಬಲ್ಲಂತಹ ಸಚಿವರ ಕೊರತೆಯಿತ್ತು. ಆದರೆ ಪ್ರಜಾಪ್ರಭುತ್ವವಾದಿಯಾಗಿದ್ದ ಸಿಂಗ್‌ ಅವರು ಮೇಲಿನ ಕಲ್ಯಾಣ ಯೋಜನೆಗಳಿಗೆ ಪ್ರಧಾನಿಯಾಗಿ ಸಂಪೂರ್ಣವಾಗಿ ಬೆಂಬಲಿಸಿದರು. ಇಂದಿನ ಮೋದಿ ನೇತೃತ್ವದ ದಮನಕಾರಿ ಆಡಳಿತವನ್ನು ಗಮನಿಸಿದಾಗ ಸಿಂಗ್‌ ಅವರ ಪ್ರಜಾಪ್ರಭುತ್ವವಾದಿ ಗುಣಗಳ ಮಹತ್ವ ಅರಿವಾಗುತ್ತದೆ.

ಇದನ್ನು ಓದಿದ್ದೀರಾ?: ಮೋದಿಯ ಹಾದಿ ಸುಗಮ ಮಾಡಿಕೊಟ್ಟ ಮನಮೋಹನ ಸಿಂಗ್

ಇದೇ ಅವಧಿಯಲ್ಲಿ ಯುಎಪಿಎ (ನಿಯಂತ್ರಣ) ಕಾಯ್ದೆ 2004 ಹಾಗೂ ಯುಎಪಿಎ(ತಿದ್ದುಪಡಿ) 2008ಯಂತಹ ಪ್ರಜಾಪ್ರಭುತ್ವ ವಿರೋಧಿ ಕರಾಳ ಕಾನೂನು, ಎನ್‌ಇಎ(ರಾಷ್ಟ್ರೀಯ ತನಿಖಾ ಏಜೆನ್ಸಿ) ಕಾಯ್ದೆಯಂತಹ ದಮನಕಾರಿ ಏಜೆನ್ಸಿಗೆ ಚಾಲನೆ ನೀಡಿದರು. ಖಾಸಗಿತನವನ್ನು ಕಸಿದುಕೊಳ್ಳುವ ಆಧಾರ್‌ನಂತಹ ಯೋಜನೆಯನ್ನು ಜಾರಿಗೊಳಿಸಿದರು. 2008-2012ರ ಅವಧಿಯಲ್ಲಿ ಗೃಹಮಂತ್ರಿಯಾಗಿದ್ದ ಪಿ.ಚಿದಂಬರಂ ಯುಎಪಿಎಯಂತಹ ಕರಾಳ ಕಾನೂನು ಜಾರಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರೆ ಚತ್ತೀಸ್‌ಗಢ, ಒಡಿಸ್ಸಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಸಲ್ವಾ ಜುಡಂನಂತಹ ಖಾಸಗಿ ಹತ್ಯೆಕೋರರ ಬರ್ಬರ ಪಡೆಯನ್ನು ಸ್ಥಾಪಿಸಿದರು.

ಇವೆರಡೂ ಯುಪಿಎ ಸರ್ಕಾರದ ಜನ ವಿರೋಧಿ ಆಡಳಿತಕ್ಕೆ ಉದಾಹರಣೆಗಳಾಗಿವೆ. ಸಿಂಗ್‌ ಅವರ ವೈಯಕ್ತಿಕ ಸೌಮ್ಯತೆ, ಸಜ್ಜನಿಕೆಯನ್ನು ಪರಿಗಣಿಸಿದಾಗ ಇಂತಹ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ಅವರು ಬೆಂಬಲಿಸಿರಲಿಕ್ಕಿಲ್ಲ ಎನ್ನುವುದು ನಿಜವಾದರೂ ಸಹ ಅವರ ಕೈ ಮೀರಿ ಜಾರಿಗೊಂಡಿರುವುದು ನಾಯಕತ್ವದಲ್ಲಿನ ದೌರ್ಬಲ್ಯವನ್ನು ಸೂಚಿಸುತ್ತದೆ. ಯುಪಿಎ 1 ಮತ್ತು 2 ಅವಧಿಯಲ್ಲಿನ ಕಲ್ಯಾಣ ಯೋಜನೆಗಳ ಕಾಯ್ದೆಗಳು ಮತ್ತು ಕರಾಳ ಶಾಸನಗಳು ಎರಡಕ್ಕೂ ಸಿಂಗ್‌ ಅವರು ಹೊಣೆಗಾರರಾಗಿರಲಿಲ್ಲ ಎನ್ನುವ ವಾಸ್ತವ ದುರ್ಬಲ ಪ್ರಧಾನಿಯನ್ನು ಸಂಕೇತಿಸುತ್ತದೆಯೇ?

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X