ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಸೂಚಿಸಿದ ವಿಶೇಷ ನ್ಯಾಯಾಲಯದ ಆದೇಶ ಕಾನೂನುಬಾಹಿರವೇ? ಜಾರಿ ಮಾಡಲು ಸಾಧ್ಯವಿಲ್ಲದ ಆದೇಶದಿಂದ ಸಿದ್ದರಾಮಯ್ಯನವರಿಗೆ ಅನುಕೂಲವಾಗಲಿದೆಯೇ?
ಇಲ್ಲಿದೆ ಈ ದಿನ ಸ್ಫೋಟಕ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಲೋಕಾಯುಕ್ತ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (ಸೆ.25) ನೀಡಿರುವ ಆದೇಶವನ್ನು ಜಾರಿ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಅಸ್ತಿತ್ವದಲ್ಲೇ ಇಲ್ಲದ ಹಿಂದಿನ ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) ಅಡಿಯಲ್ಲಿ ನ್ಯಾಯಾಧೀಶರು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರ ಈ ಆದೇಶ ಅಚ್ಚರಿದಾಯಕವಾಗಿದೆ. ಏಕೆಂದರೆ, ಆದೇಶ ಈ ರೀತಿ ಇರುವುದರಿಂದ ತನಿಖೆ ಆರಂಭಿಸಲು ಲೋಕಾಯುಕ್ತ ಪೊಲೀಸರಿಗೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ಹಾಗಾಗಿ ಆದೇಶದಲ್ಲಿರುವ ಈ ಲೋಪವೇ ಸಿದ್ದರಾಮಯ್ಯನವರ ವಿರುದ್ಧದ ತನಿಖೆ ಆಗದಂತೆ ತಡೆದಂತಾಗುತ್ತದೆ.
ರಾಜ್ಯ ಹೈಕೋರ್ಟಿನ ಪೀಠವು ಸಿದ್ದರಾಮಯ್ಯನವರ ಮೇಲೆ ತನಿಖೆ ನಡೆಸಲು ರಾಜ್ಯಪಾಲರು ನೀಡಿದ ಅನುಮತಿಯ ಕ್ರಮಬದ್ಧತೆಯನ್ನು ಎತ್ತಿ ಹಿಡಿದು ಸೆ.24ರಂದು ತೀರ್ಪು ನೀಡಿತ್ತು. ಅದರ ಮರುದಿನವೇ, ಅಂದರೆ ಸೆ.25ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತದ ಮೈಸೂರು ಎಸ್‌ಪಿಯವರು ಸಿಆರ್‌ಪಿಸಿಯ 156 (3)ರ ಅಡಿಯಲ್ಲಿ ಈ ಸಂಬಂಧ ತನಿಖೆ ನಡೆಸಬೇಕೆಂದು ಆದೇಶ ಮಾಡಿತ್ತು. ಅಲ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಲೋಕಾಯುಕ್ತ ತನಿಖೆಗೆ ಹಾದಿ ಸುಗಮವಾಯಿತೆಂದು ಬಿಜೆಪಿ ವಲಯಗಳಿಂದ ಪ್ರತಿಭಟನೆ ಇತ್ಯಾದಿಗಳು ನಡೆಯುತ್ತಿವೆ. ಆದರೆ, ಜೂನ್ 30ರಂದೇ ಕೊನೆಗೊಂಡ ಸಿಆರ್‌ಪಿಸಿಯಡಿ ಎಫ್‌ಐಆರ್ ಹೇಗೆ ಹಾಕುವುದು, ತನಿಖೆ ಹೇಗೆ ಆರಂಭಿಸಲು ಸಾಧ್ಯ ಎಂಬ ಪ್ರಶ್ನೆ ಇದೆ.
ಇದನ್ನು ಓದಿದ್ದೀರಾ?: ಮುಡಾ ಪ್ರಕರಣ | ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ ದೂರಿನನ್ವಯ ಈ ಆದೇಶವನ್ನು ಸದರಿ ನ್ಯಾಯಾಲಯವು ಹೊರಡಿಸಿತ್ತು. ಒಂದು ವೇಳೆ ಹಳೆಯ ಸಿಆರ್‌ಪಿಸಿಯ 156(3)ರ ಬದಲಾಗಿ, ಇಂತಹ ಆದೇಶವನ್ನು ಹೊರಡಿಸುವ ಬದಲಿಗೆ ಭಾರತೀಯ ನ್ಯಾಯ ಸಂಹಿತೆಯ 175(4)(ಎ)(ಬಿ)ಯಡಿ ಇದನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಅದನ್ನು ನ್ಯಾಯಾಧೀಶರು ಏಕೆ ಕೈಗೊಂಡಿಲ್ಲ ಎಂಬ ಕುರಿತು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನುಕೂಲವಲ್ಲವೇ ಎಂಬ ಜಿಜ್ಞಾಸೆಗೆ ಕಾನೂನು ಪಂಡಿತರು ಉತ್ತರಿಸಬೇಕಾಗುತ್ತದೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸುವ ಪ್ರಯತ್ನವನ್ನು ಈದಿನ.ಕಾಮ್ ಮಾಡಿತು. ಆದರೆ, ಅವರು ಉತ್ತರಿಸಲು ನಿರಾಕರಿಸಿದರು.
ಕಾನೂನು ತಜ್ಞರ ಅಭಿಪ್ರಾಯಗಳ ಜೊತೆಗೆ ವಿಶೇಷ ವರದಿಯನ್ನು ನಿರೀಕ್ಷಿಸಿ.
