‘ಮನೇಲಿ ಇಲಿ ಬೀದೀಲಿ ಹುಲಿ’ ಎಂಬಂತೆ ನಿಮ್ಮ ಪೌರುಷ, ಅಬ್ಬರ ಮಾಧ್ಯಮಗಳ ಮುಂದೆ ಮಾತ್ರಾನಾ? ಅಥವಾ ಸಿದ್ದರಾಮಯ್ಯರನ್ನು ಇಳಿಸಿದರೆ ಅವರು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಎಂಬ ಭಯವೋ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಡೋಂಗಿರಾಮಯ್ಯನ ಇಡೀ ಜೀವನವೇ ಒಂದು ದೊಡ್ಡ ಡೋಂಗಿ. ಬುರುಡೆ ರಾಮಯ್ಯನ ಬದುಕೆಲ್ಲ ಬರೀ ಬುರುಡೆಯೇ. ಕಾಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ಬಣ್ಣ ಬದಲಾಯಿಸುವ ಊಸರವಳ್ಳಿ ರಾಮಯ್ಯನ ಬೂಟಾಟಿಕೆ ಬಗ್ಗೆ ದೊಡ್ಡ ಪುಸ್ತಕವೇ ಬರೆಯಬಹುದು” ಎಂದು ಲೇವಡಿ ಮಾಡಿದ್ದಾರೆ.
“2011ರಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನುಡಿದಿರುವ ನುಡಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಳ್ಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರೇ” ಎಂದು ವಿಡಿಯೋ ಒಂದನ್ನು ಟ್ಯಾಗ್ ಮಾಡಿದ್ದಾರೆ.
“ಎರಡೆರಡು ನ್ಯಾಯಾಲಯಗಳು ಛೀಮಾರಿ ಹಾಕಿ, ಲೋಕಾಯುಕ್ತ ಪೊಲೀಸರು ಎಫ್ಐಆರ್ ಹಾಕಿದ್ದರೂ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲಾಗದಂತಹ ನಿಮ್ಮಂತಹ ದುರ್ಬಲ ಕೆಪಿಸಿಸಿ ಅಧ್ಯಕ್ಷರು ಬಹುಶಃ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಇರಲಿಲ್ಲ. ಇಂತಹ ನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ” ಎಂದು ಪ್ರಶ್ನಿಸಿದ್ದಾರೆ.