ಗುಜರಾತ್ ಮಾಡೆಲ್, ಸಬ್ ಕಾ ಸಾತ್ – ಸಬ್ ಕಾ ವಿಕಾಸ್, ಬೇಟಿ ಬಚಾವೋ – ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ – ಇವು ಮೋದಿ ಸರ್ಕಾರದಲ್ಲಿ ಕೇಳಿಬಂದ ಬೃಹತ್ ಘೋಷಣೆಗಳು. ಈ ಘೋಷಣೆಗಳು ವಾಸ್ತವದಲ್ಲಿ ಏನಾಗಿವೆ ಎಂಬದನ್ನು ನಾವು ನೋಡಿದ್ದೇವೆ. ಈ ಘೋಷಣೆಗಳು ಮಾತ್ರವಲ್ಲದೆ, ಪದೇ-ಪದೇ ಮೋದಿ ಅವರು ಸಾರುತ್ತಲೇ ಇದ್ದ ಮತ್ತೊಂದು ಘೋಷಣೆ – ಡಿಜಿಟಲ್ ಇಂಡಿಯಾ. ಇಡೀ ದೇಶವನ್ನೇ ಡಿಜಿಟಲ್ ಮಾಡುತ್ತೇನೆ. ಒಂದು ಬಟನ್‌ನಲ್ಲಿ ಇಡೀ ಇಂಡಿಯಾವನ್ನೇ ತೋರಿಸುತ್ತೇನೆ ಎಂದು ಮೋದಿ ಅವರು ಅಬ್ಬರಿಸಿ, ಬೊಬ್ಬಿರಿದದ್ದನ್ನು ನಾವು-ನೀವೆಲ್ಲರೂ ನೋಡಿದ್ದೇವೆ. ಆದರೆ, ಇದೇ ಡಿಜಿಟಲ್ ಇಂಡಿಯಾದಲ್ಲಿ ಹತ್ತಾರು ಸಾಲು-ಸಾಲು ರೈಲು ಅಪಘಾತಗಳು ನಡೆದು, ನೂರಾರು ಮಂದಿ ಸಾವನ್ನಪ್ಪಿರುವ ದುರಂತಗಳು ನಡೆದಿವೆ. ಮೋದಿ ಆಡಳಿತದಲ್ಲಿ ರೈಲುಗಳು ಮಾತ್ರ ಹಳಿ ತಪ್ಪಿಲ್ಲಾ ಅವರ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಈ ರೀತಿ ಹಲವಾರು ಕಾರ್ಯಕ್ರಮಗಳು ಕೂಡ ಹಳಿ ತಪ್ಪಿವೆ.
ಗ್ರಾಮೀಣ ಪ್ರದೇಶಗಳನ್ನು ಹೈಸ್ಪೀಡ್ ಇಂಟರ್ನೆಟ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುವ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಸುಧಾರಿಸುವ ಉದ್ದೇಶದಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ಜುಲೈ 1ರಂದು ಈ ಡಿಜಿಟಲ್ ಇಂಡಿಯಾ ಘೋಷಿಸಿದರು. ಮೋದಿಯವರ ಈ ಉದ್ದೇಶವೇನೋ ಒಳ್ಳೆಯದಾಗಿಯೇ ಇದೆ. ಆದರೆ, ಇದು ಸರಿಯಾದ ಹಳಿಯಲ್ಲಿ ಚಲಿಸದೇ, ಹಳಿ ತಪ್ಪಿದೆ. ಇದರ ಬಗ್ಗೆ ಮೋದಿಯವರು ಕ್ರಮಕೈಗೊಳ್ಳದೇ, ಫೋಟೋ ಶೂಟ್‌ನಲ್ಲಿ ಬ್ಯಿಸಿ ಆಗಿದ್ದಾರೆ.
ಈ ಯೋಜನೆಗೆ ಇಲ್ಲಿಯವರೆಗೂ ಸಾವಿರಾರು ಕೋಟಿಗೂ ಹೆಚ್ಚಿನ ಹಣವನ್ನ ಸುರಿಯಲಾಗಿದ್ದರೂ ಕೂಡ ಕ್ರಿಯಾತ್ಮಕ ಇಂಟರ್ನೆಟ್ ವ್ಯವಸ್ಥೆಯನ್ನ ರೂಪಿಸುವಲ್ಲಿ ಸರ್ಕಾರ ಇನ್ನು ತನ್ನ ಗುರಿ ತಲುಪಿಲ್ಲ. ಗುರಿ ತಲುಪಲು ಪ್ರಯತ್ನ ಪಡದ ಮೋದಿ ಸರ್ಕಾರ ಜನರು ಹೆಚ್ಚಾಗಿ ಒಂದನ್ನ ಬಳಕೆ ಮಾಡಿದರೇ, ಅದರ ಮೇಲೆ ತೆರಿಗೆ ಹೇಗೆ ಹಾಕಲಿ ಎಂಬ ಬಗ್ಗೆ ಯೋಜಿಸುತ್ತಾರೆ. ಅದರಂತೆಯೇ, ವಿತ್ತೀಯ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟಿದ್ದ ಯುಪಿಐ ವಹಿವಾಟಿನ ಮೌಲ್ಯವು 2023-24ರ ಹಣಕಾಸು ವರ್ಷದ ವೇಳೆಗೆ ಶೇ.138ರಷ್ಟು ಏರಿಕೆಯಾಗಿ ₹200 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸದ್ಯ UPI ಭಾರತದಲ್ಲಿ ವಹಿವಾಟುಗಳಿಗೆ ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಸದ್ಯಕ್ಕೆ ದೇಶದಲ್ಲಿ ಯುಪಿಐ ಬಳಕೆಗೆ ಯಾವುದೇ ಶುಲ್ಕ ಇಲ್ಲ. ಹೀಗಾಗಿ, ಜನರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ಹಲವು ರೀತಿಯ ಆನ್ ಲೈನ್ ಪಾವತಿ ವೇದಿಕೆಗಳ ಮೂಲಕ ಹಣಕಾಸಿನ ವಹಿವಾಟು ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಯುಪಿಐ ಬಳಕೆ ಮೇಲೆ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ.
2014ರಲ್ಲಿ ಸಂಪುಟವು ಅನುಮೋದಿಸಿರುವ ಡಿಜಿಟಲ್ ಇಂಡಿಯಾ ಯೋಜನೆಯಡಿ, ಎನ್‌ಡಿಎ-2 ಸರ್ಕಾರವು 2016ರ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ನೀಡುವ ಗುರಿ ಹೊಂದಿತ್ತು. ಸರ್ಕಾರದ ಇತ್ತೀಚಿನ ಆಂತರಿಕ ಮಾಹಿತಿಯ ಪ್ರಕಾರ ದೇಶದ 2.5 ಲಕ್ಷ ಗ್ರಾಮಪಂಚಾಯತ್‌ಗಳ ಪೈಕಿ ಶೇ.2.5ಕ್ಕೂ ಕಡಿಮೆ ಪಂಚಾಯತ್‌ಗಳು ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆದಿವೆ.
ಆದರೆ, ಡಿಜಿಟಲ್ ಇಂಡಿಯಾದಲ್ಲಿ ಡಿಜಿಟಲ್ ಕಡತಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸೈಬಲ್ ಕ್ರೈಮ್‌ಗಳು ಹೆಚ್ಚುತ್ತಿವೆ. ಸರ್ಕಾರಿ ಇ-ಕಡತಗಳು ಸೇರಿದಂತೆ ಎಲ್ಲ ಸಂಸ್ಥೆಗಳ ಆಂತರಿಕ ವಿಷಯಗಳನ್ನು ಹ್ಯಾಕರ್‌ಗಳು ಆರಾಮದಾಯವಾಗಿ ಕದಿಯುತ್ತಿದ್ದಾರೆ. ಸೈಬರ್ ಕ್ರೈಮ್ ದಾಳಿಗೆ ಸ್ವತಃ ಸುಪ್ರೀಂ ಕೋರ್ಟ್ ಕೂಡ ತುತ್ತಾಗಿದೆ. ಭಾರತದ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದ್ದ ಕಾರಣ ಕೆಲ ದಿನಗಳವರೆಗೆ ಲೈವ್ ಮತ್ತು ಆಪ್ ಕೂಡ ಆಫ್ ಆಗಿತ್ತು. ಯುಎಸ್ ಮೂಲದ ಕಂಪನಿಯು ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯನ್ನು ಪ್ರಚಾರ ಮಾಡುವ ವೀಡಿಯೊಗಳನ್ನು ಹ್ಯಾಕ್ ಮಾಡಲಾಗಿತ್ತು.
ಇನ್ನು 81.5ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳನ್ನ ಹೊಂದಿರುವ ಆಧಾರಕಾರ್ಡ್ ಮಾಹಿತಿ ಆನ್ ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೀಡಿಯಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.
2023ರ ಅಕ್ಟೋಬರ್‌ನಲ್ಲಿ, ಅಮೆರಿಕದ ಸೈಬರ್ ಭದ್ರತಾ ಕಂಪನಿಯಾದ ರೆಸೆಕ್ಯುರಿಟಿ, ಆಧಾರ್ ಸಂಖ್ಯೆಗಳು ಮತ್ತು ಪಾಸ್ ಪೋರ್ಟ್ ವಿವರಗಳು ಸೇರಿದಂತೆ 815 ಮಿಲಿಯನ್ ಭಾರತೀಯ ನಾಗರಿಕರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ.
2024ರ ಮೇ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ನ ದತ್ತಾಂಶ ಸೋರಿಕೆಯಾಗಿತ್ತು ಈ ಬಗ್ಗೆ ಸ್ವತಃ ಕೇಂದ್ರ ಸರಕಾರವೇ ದೃಢಪಡಿಸಿತ್ತು.
ಇನ್ನು ಬೋಟ್ ಅತಿ ದೊಡ್ಡ ಸ್ಮಾರ್ಟ್ ವಾಚ್ ಮತ್ತು ಆಡಿಯೊ ಉತ್ಪನ್ನ ಕಂಪನಿಗಳಲ್ಲಿ ಒಂದಾಗಿದೆ. ಈ ಬೋಟ್ ಕಂಪನಿಯ ಪ್ರೋಡಕ್ಟ್‌ನ 7.5 ಮಿಲಿಯನ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಖರೀದಿದಾರರ ಮೊಬೈಲ್ ಸಂಖ್ಯೆ ಸೇರಿದಂತೆ ಇಮೇಲ್ ಐಡಿಗಳಂತಹ ವಿವರಗಳು ಸೋರಿಕೆಯಾಗಿದೆ.
‘ಒಬಾಮಾಕೇರ್’ ಎಂಬ ಹೆಸರಿನ ಹ್ಯಾಕರ್ 995 ಕೋಟಿ ಪಾಸ್‌ವರ್ಡ್‌ಗಳನ್ನು ಸೋರಿಕೆ ಮಾಡಿದ್ದಾನೆ ಎಂದು ಫೋರ್ಬ್ಸ್ ಹೇಳಿದೆ. ಸಂಶೋಧಕರ ಪ್ರಕಾರ, ಹಳೆಯ ಮತ್ತು ಹೊಸ ಡೇಟಾ ಉಲ್ಲಂಘನೆಗಳ ಮಿಶ್ರಣದ ಸಹಾಯದಿಂದ ಪಾಸ್‌ವರ್ಡ್‌ಗಳನ್ನು ಸೋರಿಕೆ ಮಾಡಲಾಗಿದೆ. ಇದು ಸಾರ್ವಕಾಲಿಕ ಅತಿದೊಡ್ಡ ಪಾಸ್ವರ್ಡ್ ಡೇಟಾ ಸೋರಿಕೆ ಎಂದು ಹೇಳಿದ್ದಾರೆ.
2024ರಲ್ಲಿ ಸರ್ಕಾರಿ ಇಲಾಖೆಗಳು ಸೈಬರ್ ದಾಳಿಗೆ ಬಲಿಯಾಗಿವೆ. ವಿವಿಧ ಸರ್ಕಾರಿ ಶಾಖೆಗಳು ಮತ್ತು ತಂತ್ರಜ್ಞಾನ ವಲಯವು ಸೈಬರ್ ದಾಳಿಗೆ ಪ್ರಾಥಮಿಕ ಗುರಿಗಳಾಗಿದ್ದು, ಆರೋಗ್ಯ ರಕ್ಷಣೆ, ಬ್ಯಾಂಕಿಂಗ್, ಉತ್ಪಾದನೆ ಹಾಗೂ ಗ್ರಾಹಕ ಸೇವೆಗಳು ಸೈಬರ್ ದಾಳಿಗೆ ಒಳಗಾಗಿವೆ. ಸೈಬರ್ ಸೆಕ್ಯುರಿಟಿ ಸಂಸ್ಥೆ ಟೆಕ್ನಿಸಾಂಕ್ಟ್‌ನ ‘ಇಂಡಿಯಾ ಬ್ರೀಚ್ ರಿಪೋರ್ಟ್’ ಈ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆರು ತಿಂಗಳ ಅವಧಿಯಲ್ಲಿ 388 ಡೇಟಾ ಸೋರಿಕೆಗಳಾಗಿವೆ.
ಟೆಲಿಗ್ರಾಮ್ ಅಪ್ಲಿಕೇಶನ್ ಡೇಟಾ ಉಲ್ಲಂಘನೆ ಮತ್ತು ಹಗರಣಗಳಿಗೆ ಕೇಂದ್ರವಾಗಿದೆ. ಹ್ಯಾಕರ್‌ಗಳ ಕೇಂದ್ರವಾಗಿರುವ ಟೆಲಿಗ್ರಾಮ್ ಅನ್ನು ಮಾಹಿತಿಯನ್ನು ಹಂಚಿಕೊಳ್ಳಲು ವೇದಿಕೆಯಾಗಿ ಬಳಸಲಾಗುತ್ತದೆ ಎಂದು ಹೇಳಿದೆ.
ದೆಹಲಿ ಮೂಲದ ಕಾನೂನು ಸೇವಾ ಸಂಸ್ಥೆಯಾದ ಸಾಫ್ಟ್ ವೇರ್ ಫ್ರೀಡಂ ಲಾ ಸೆಂಟರ್ ಇಂಡಿಯಾ, ರಾಷ್ಟ್ರೀಯ ಸೈಬರ್ ಏಜೆನ್ಸಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್‌ಗೆ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್‌ನ ಡೇಟಾ ಉಲ್ಲಂಘನೆಯ ತನಿಖೆಯನ್ನು ಪ್ರಾರಂಭಿಸಲು ಪತ್ರ ಬರೆದಿದೆ. ಹೆಸರುಗಳು, ಫೋನ್ ಸಂಖ್ಯೆಗಳು, ನಿವಾಸ ವಿಳಾಸ, ತೆರಿಗೆ ಮಾಹಿತಿ, ಐಡಿ ನಕಲುಗಳು, ಪರೀಕ್ಷಾ ಫಲಿತಾಂಶಗಳು ಹಾಗೂ ಸ್ಟಾರ್ ಹೆಲ್ತ್ ಗ್ರಾಹಕರಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿ ಟೆಲಿಗ್ರಾಮ್‌ನಲ್ಲಿ ಲಭ್ಯವಿರುವುದಾಗಿ ವರದಿಯಾಗಿದೆ.
ಇನ್ನು ಹ್ಯಾಕರ್‌ನೊಬ್ಬ 3.1 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇರಿದ ಸಂಪೂರ್ಣ 7.24 ಟಿಬಿ ಡೇಟಾವನ್ನು $1,50,000ಗೆ ವೆಬ್ ಸೈಟ್‌ನಲ್ಲಿ ತೆರೆದ ಮಾರಾಟಕ್ಕೆ ಹಾಕಿದ್ದಾನೆ. ಈ ಬಗ್ಗೆ ತನಿಖೆ ನಡೆಸುವಂತೆ ಕಾನೂನು ಸೇವಾ ಸಂಸ್ಥೆಯಾದ ಸ್ಟಾರ್ ಹೆಲ್ತ್ ಡೇಟಾ ಹೇಳಿದೆ.
ಚೀನಾ ಮೂಲದ ಹ್ಯಾಕಿಂಗ್ ಗುಂಪೊಂದು ಇಮಿಗ್ರೇಷನ್ ಆಫ್ ಇಂಡಿಯಾದಿಂದ 95.2 ಜಿಬಿ ಮಾಹಿತಿಯನ್ನ ಕದ್ದಿದೆ. ಸರ್ಕಾರದ ಮಾಹಿತಿಗಳೇ ಕಳ್ಳತನವಾಗುತ್ತಿದ್ದರೂ ಕೂಡ ಕೇಂದ್ರ ಸಚಿವ ಅಮಿತ್ ಶಾ ಅವರದು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ.
ಖಾಸಗಿ ವರ್ಚುವಲ್ ನೆಟ್ವರ್ಕ್ ಪೂರೈಕೆದಾರ ಸರ್ಫ್ ಶಾರ್ಕ್ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, 2023ರಲ್ಲಿ ಒಟ್ಟು 5.3 ಮಿಲಿಯನ್ ಭಾರತೀಯ ಆನ್‌ಲೈನ್ ಖಾತೆಗಳ ಮಾಹಿತಿ ಸೋರಿಕೆಯಾಗಿದೆ. 2023ರಲ್ಲಿ ಪ್ರತಿ ನಿಮಿಷಕ್ಕೆ ಸುಮಾರು 10 ಭಾರತೀಯ ಬಳಕೆದಾರರ ಖಾತೆಗಳು ಸೋರಿಕೆಯಾಗುತ್ತಿದ್ದು, ಪ್ರತಿ 1,000 ಖಾತೆಗಳಲ್ಲಿ ನಾಲ್ಕು ಉಲ್ಲಂಘನೆಯಾಗಿದೆ ಎಂದು ವರದಿ ಹೇಳಿದೆ. ವರ್ಷದಲ್ಲಿ ಹೆಚ್ಚು ಡೇಟಾ ಸೋರಿಕೆ ಅನುಭವಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
17,000 ವರ್ಡ್ ಪ್ರೇಸ್ ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಇನ್ನು ವಿಶ್ವದ ಅತಿದೊಡ್ಡ ರಕ್ಷಣಾ ಮತ್ತು ಬಾಹ್ಯಾಕಾಶ ಗುತ್ತಿಗೆದಾರರಲ್ಲಿ ಒಂದಾದ ಬೋಯಿಂಗ್‌ನ ಆಂತರಿಕ ಡೇಟಾವನ್ನು ಆನ್ ಲೈನ್‌ನಲ್ಲಿ ಸೈಬರ್ ಕ್ರೈಮ್ ಗ್ಯಾಂಗ್ ಪ್ರಕಟಿಸಿತ್ತು. ಜೆನೆಟಿಕ್ಸ್ ಟೆಸ್ಟಿಂಗ್ ಕಂಪನಿಯ ಡೇಟಾ ಕೂಡ ಸೋರಿಕೆಯಾಗಿತ್ತು. ಡೇಟಾ ಮಾಹಿತಿ ಸೋರಿಕೆ, ಸೈಬರ್ ಕ್ರೈಮ್ ಬಗ್ಗೆ ಇಲ್ಲಿ ಹೇಳತಾ ಹೋದರೆ, ಪಟ್ಟಿ ಸಾಲೋದಿಲ್ಲ. ಅಷ್ಟರ ಮಟ್ಟಿಗೆ ದೇಶದಲ್ಲಿ ಡೇಟಾ ಸೋರಿಕೆಯಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಮಿತಿಮೀರಿದ ಯತ್ನಾಳ ವರ್ತನೆ; ಕೋಮುದ್ವೇಷ ಭಾಷಣಕ್ಕೆ ಇಲ್ಲವೇ ಬ್ರೇಕ್?!
ಡಿಜಿಟಲ್ ಮೂಲಸೌಕರ್ಯದಲ್ಲಿನ ಪ್ರಗತಿಗಳ ಹೊರತಾಗಿಯೂ ಕೂಡ ದತ್ತಾಂಶ ಉಲ್ಲಂಘನೆ ಮುಂದುವರೆಯುತ್ತಿದೆ. ಇದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಬೆದರಿಕೆಗಳನ್ನು ಉಂಟುಮಾಡುತ್ತದೆ. ಲಕ್ಷಾಂತರ ನಾಗರಿಕರು ಮತ್ತು ಬಳಕೆದಾರರ ಡೇಟಾವನ್ನು ಸಂರಕ್ಷಿಸುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು, ನಿಗಮಗಳೊಂದಿಗೆ, ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿ ಇರಿಸಲಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಹೆಣಗಾಡುತ್ತಿವೆ. ಆದಾಗ್ಯೂ, ಕೂಡ ಪ್ರಪಂಚದಾದ್ಯಂತದ ಡೇಟಾ ಸೋರಿಕೆಗಳ ವರದಿಗಳು ಬರುತ್ತಲೇ ಇವೆ.
ಇನ್ನು, 2023ರಲ್ಲಿ 10 ತಿಂಗಳಲ್ಲಿ ಭಾರತೀಯ ಬ್ಯಾಂಕ್‌ಗಳ ಮೇಲೆ 13 ಲಕ್ಷ ಸೈಬರ್ ದಾಳಿಗಳು ನಡೆದಿವೆ. ಆರ್‌ಬಿಐ ವರದಿಯ ಪ್ರಕಾರ, ದೇಶದ ಹಣಕಾಸು ವಲಯದಲ್ಲಿ ಜನವರಿ ಮತ್ತು ಅಕ್ಟೋಬರ್ 2023ರ ನಡುವೆ 13 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಎದುರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದರರ್ಥ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ವರ್ಷ ಪ್ರತಿದಿನ ಸುಮಾರು 4,400 ಸೈಬರ್ ದಾಳಿಗಳನ್ನು ಎದುರಿಸಿವೆ. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಬ್ಯಾಂಕುಗಳು ಈಗ ಹಿಂದೆಂದಿಗಿಂತಲೂ ಹೆಚ್ಚಿನ ಅಪಾಯಗಳಿಗೆ ಗುರಿಯಾಗಿವೆ ಎಂದು ವರದಿಯೊಂದು ಹೇಳಿದೆ.
ಸೈಬರ್ ಅಪರಾಧವನ್ನು ಎದುರಿಸಲು ಮೋದಿ ಸರ್ಕಾರ ಬದ್ಧವಾಗಿದೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸೈಬರ್ ಅಪರಾಧವನ್ನು ಎದುರಿಸಲು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಮೋದಿ ಸರ್ಕಾರ ಸೈಬರ್ ಕ್ರೈಮ್ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಇರುವ ವಸ್ತು ಸ್ಥಿತಿಗಳು ಆತಂಕ ಹುಟ್ಟಿಸುತ್ತಿವೆ.