ಅಂತ್ಯ ಕಾಣುತ್ತಾ ಯತ್ನಾಳ ರಾಜಕೀಯ ಭವಿಷ್ಯ?

Date:

Advertisements

ರಾಜಕೀಯ ಮೊದಲಾರ್ಧ ಮುಸ್ಲಿಂ ಸಮುದಾಯದ ಜತೆಗೆ ಬಕ್ರೀದ್, ರಂಜಾನ್ ಹಬ್ಬ ಆಚರಣೆ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ, ಈಗ ಬಿಜೆಪಿ ಸೇರಿ ತಾವೇ ‘ಹಿಂದು ಹುಲಿ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಸೇರಿದ ಬಳಿಕ ಮುಸ್ಲಿಂ ವಿರುದ್ಧ ದ್ವೇಷ ಭಾಷಣ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಲದಕ್ಕೆ, ಸ್ವತಃ ತಮ್ಮದೇ ಪಕ್ಷದ ನಾಯಕರ ವಿರುದ್ಧವೂ ವಾಗ್ದಾಳಿ ಮಾಡುವುದನ್ನು ಮೈಗೂಡಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿನ ಬಣ ರಾಜಕಾರಣದಲ್ಲಿ ಒಂದು ಬಣಕ್ಕೆ ಬಹಿರಂಗ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮತ್ತೊಂದು ಬಣದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿಯ ಮಾಜಿ ಸಚಿವ ರೇಣುಕಾಚಾರ್ಯರಂತಹ ಬಿಜೆಪಿಗರು, ‘ಹಿಂದು ಹುಲಿ ಎಂದು ಹೇಳಿಕೊಳ್ಳುವ ಯತ್ನಾಳ ಜೆಡಿಎಸ್‌ನಲ್ಲಿದ್ದಾಗ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಮಾಡಿ, ಬಿರಿಯಾನಿ, ಕಬಾಬ್ ತಿಂದಿದ್ದನ್ನು ಮರೆತು ಬಿಟ್ಟಿದ್ದಾರೆ’ ಎಂದು ಛೇಡಿಸುತ್ತಿದ್ದಾರೆ.

ತನ್ನ ರಾಜಕೀಯಕ್ಕಾಗಿ ಹಿಂದುತ್ವವನ್ನು ಮೈಗೂಡಿಸಿಕೊಂಡು, ಅದನ್ನೇ ದಾಳವಾಗಿಸಿಕೊಂಡಿರುವ ಯತ್ನಾಳ್, ಅಮಾಯಕ ಹಿಂದು ಯುವಕರನ್ನು ತನ್ನ ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳು, ಕಲಬುರಗಿಯಲ್ಲಿ ಸಕ್ಕರೆ ಕಾರ್ಖಾನೆ ಹೊಂದಿರುವ ಯತ್ನಾಳ, ಬಿಜೆಪಿಯಲ್ಲಿ ಎತ್ತರದ ಸ್ಥಾನಗಳಿಗೆ ಬೆಳೆಯಬೇಕು. ಉನ್ನತ ಹುದ್ದೆಗಳನ್ನು ಪಡೆಯಬೇಕೆಂದು ಹವಣಿಸುತ್ತಿದ್ದಾರೆ. ರಾಜಕೀಯ ಪಡಸಾಲೆಯಲ್ಲಿ ಮುಸ್ಲಿಮರ ವಿರುದ್ಧ ಕೋಮುದ್ವೇಷ ಬಿತ್ತುತ್ತಲೇ ರಾಜಕೀಯವಾಗಿ ಮುನ್ನೆಲೆಗೆ ಬರುತ್ತಿದ್ದಾರೆ.

ಆದರೂ, ಅವರಿಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ನಿರೀಕ್ಷಿತ ಸ್ಥಾನಗಳು ಸಿಕ್ಕಿಲ್ಲ. ಈ ಹಿಂದೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ, ಅನಂತ್ ಕುಮಾರ್ ಬೆಂಬಲದೊಂದಿಗೆ ವಾಜಪೇಯಿ ಸಂಪುಟದಲ್ಲಿ ಯತ್ನಾಳ್ ಎರಡು ವರ್ಷ ಸಚಿವರಾಗಿದ್ದರು. ಆ ಅವಕಾಶ ಬಿಟ್ಟರೆ ಯತ್ನಾಳ್‌ಗೆ ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳು ಈವರೆಗೂ ದೊರೆತಿಲ್ಲ. ಇದಕ್ಕೆ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವೇ ಕಾರಣ ಎಂಬುದು ಯತ್ನಾಳ ಅವರ ನೇರ ಆರೋಪ. ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಡಿಯೂರಪ್ಪ ವಿರುದ್ಧ ಯತ್ನಾಳ್ ಗುಟುರು ಹಾಕುತ್ತಿದ್ದಾರೆ. ಯಡಿಯೂರಪ್ಪ ತನ್ನ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಉಳಿದವರನ್ನು ಮೂಲೆಗೆ ದೂಡುತ್ತಿದ್ದಾರೆ ಎನ್ನುವ ಯತ್ನಾಳ, ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದಾರೆ.

Advertisements

ಇನ್ನು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದಾಗ ಯತ್ನಾಳ್ ಹೆಸರು ಪಕ್ಷದೊಳಗೆ ಕೇಳಿಬಂದಿತ್ತು. ಹೈಕಮಾಂಡ್ ನಾಯಕರೇ ಯತ್ನಾಳ ಹೆಸರು ಪ್ರಸ್ತಾಪಿಸಿದ್ದರು. ಆದರೆ, ಯಡಿಯೂರಪ್ಪನವರ ಕೆಂಗೆಣ್ಣಿಗೆ ಗುರಿಯಾಗಿದ್ದ ಯತ್ನಾಳ ಅವಕಾಶ ವಂಚಿತರಾಗಿದ್ದರು. ಯಡಿಯೂರಪ್ಪ ಕೃಪಾಕಟಾಕ್ಷದೊಂದಿಗೆ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆ ಸಿಟ್ಟು ಯತ್ನಾಳ್ ಮನದಲ್ಲಿ ಇನ್ನೂ ಕೂಡ ಹೆಪ್ಪುಗಟ್ಟಿದೆ. ಈಗ, ವಿಜಯೇಂದ್ರ ಅವರನ್ನು ಕೆಳಗಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು ಎಂಬ ಹೆಬ್ಬಯಕೆ ಯತ್ನಾಳ ಅವರಲ್ಲಿದೆ. ಇದಕ್ಕೆ, ಆರ್‌ಎಸ್‌ಎಸ್‌ ನಾಯಕರ ಬೆಂಬಲವೂ ಇದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ.

ರಾಜಕೀಯ ಸ್ಥಾನಗಳಿಂದ ವಂಚಿತರಾಗಿರುವ ಯತ್ನಾಳ ಆರ್‌ಎಸ್‌ಎಸ್‌ ಬೆಂಬಲದೊಂದಿಗೆ ತಮ್ಮದೇ ಮಿತ್ರ ಪಡೆ ಕಟ್ಟಿಕೊಂಡಿದ್ದಾರೆ. ಬಿ.ವೈ ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷದ ನಾಯಕತ್ವದ (ಯಡಿಯೂರಪ್ಪ-ವಿಜಯೇಂದ್ರ) ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಸವಾಲು ಹಾಕುತ್ತಿದ್ದಾರೆ. ಸ್ವಪಕ್ಷದವರ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದೀರಿ ಎಂದು ಬಿಜೆಪಿ ಹೈಕಮಾಂಡ್ 2024ರ ಡಿಸೆಂಬರ್ 02ರಂದು ಯತ್ನಾಳಗೆ ಮೊದಲ ಶೋಕಾಸ್ ನೋಟಿಸ್ ನೀಡಿತ್ತು. ಆಗ ಯತ್ನಾಳ್ ಬಹಿರಂಗ ಹೇಳಿಕೆ ಕೊಡುವುದಿಲ್ಲ ಎಂದು ಉತ್ತರಿಸಿದ್ದರು.

ಆದರೆ, ಅದಾದನಂತರವೂ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ, ಬಿಜೆಪಿ ಶಿಸ್ತು ಸಮಿತಿ ಎರಡನೇ ಬಾರಿಗೆ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿದ್ದಾರೆ. “ಈ ಹಿಂದೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ. ಆದರೆ, ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ. ಪಕ್ಷದಲ್ಲಿ ವಿರೋಧಿ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ಹೀಗಾಗಿ, ಈ ಬಗ್ಗೆ 72 ಗಂಟೆಗಳಲ್ಲಿ ಸ್ಪಷ್ಟನೆ ನೀಡಬೇಕು” ಎಂದು ಸೂಚನೆ ನೀಡಲಾಗಿದೆ.

ಆದರೆ, ಸಮಿತಿ ನೀಡಿದ್ದ ನೋಟಿಸ್‌ಗೆ ಸಮಜಾಯಿಷಿ ನೀಡಲು ಕೊಟ್ಟಿದ್ದ 72 ಗಂಟೆಯ ಗಡುವು ಗುರುವಾರ ಮುಕ್ತಾಯಗೊಂಡಿದೆ. ಇಲ್ಲಿಯವರೆಗೂ ಯತ್ನಾಳ ಯಾವುದೇ ರೀತಿಯ ವಿವರಣೆಯನ್ನು ಸಮಿತಿಗೆ ನೀಡಿಲ್ಲ. ಅಲ್ಲದೇ, “ಬಿಜೆಪಿ ವರಿಷ್ಠರು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ಬಂದರೂ ನಾನು ಅದಕ್ಕೆ ಉತ್ತರಿಸುವುದಿಲ್ಲ. ಅಷ್ಟಕ್ಕೂ, ಇಂತಹ ನೂರಾರು ನೋಟಿಸ್‌ಗಳು ನನಗೆ ಬರುತ್ತವೆ. ಅವುಗಳಿಗೆಲ್ಲ ಉತ್ತರ ಕೊಡಲು ಆಗುವುದಿಲ್ಲ. ಇದಕ್ಕೆಲ್ಲ ಹೆದರುವ ಮಗ ನಾನಲ್ಲ” ಎಂದು ಯತ್ನಾಳ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಯತ್ನಾಳ್ ಹಾಗೂ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿಯ ಮುಂದಿನ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಒಂದು ಕಡೆ, ಶಿಸ್ತು ಸಮಿತಿಯಿಂದ ಶೋಕಾಸ್ ನೋಟೀಸ್ ಪಡೆದಿರುವ ಭಿನ್ನಮತೀಯ ನಾಯಕ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಅವರು ನೀಡುವ ಉತ್ತರ ತೃಪ್ತಿಕರವಾಗದಿದ್ದರೆ, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಸಂಭವವಿದೆ.

ಒಂದು ವೇಳೆ, ಉಚ್ಚಾಟನೆಯಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ, ಬಿಜೆಪಿಗೆ ಭದ್ರ ಬುನಾದಿಯಾಗಿರುವ ಪಂಚಮಸಾಲಿ ಸಮುದಾಯವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಿರುಗಿ ಬೀಳಬಹುದು ಎಂಬ ಆತಂಕವೂ ಬಿಜೆಪಿಯಲ್ಲಿದೆ. ಹೀಗಾಗಿ, ಯತ್ನಾಳ್ ಬಾಯಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮಾನತುಗೊಳಿಸುವ ಅಸ್ತ್ರವನ್ನು ಬಳಸಲು ಶಿಸ್ತು ಸಮಿತಿ ಮುಂದಾಗಿದೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಇವೆ.

ಈ ಸುದ್ದಿ ಓದಿದ್ದೀರಾ? ಬಿರೇನ್ ಸಿಂಗ್ ರಾಜೀನಾಮೆಯಿಂದ ಬದಲಾಗುವುದೇ ಮಣಿಪುರ?

ಇನ್ನೊಂದು ಕಡೆ, ಸ್ವಪಕ್ಷದ ಹಿರಿಯ ನಾಯಕರ ವಿರುದ್ಧವೇ ಇಷ್ಟೊಂದು ನಾಲಿಗೆ ಹರಿಬಿಡುತ್ತಿರುವ ಯತ್ನಾಳ ವಿರುದ್ಧ ಇಲ್ಲಿಯವರೆಗೂ ಪಕ್ಷವು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಇದಕ್ಕೆ ಕಾರಣ ಯತ್ನಾಳ ಅವರ ಹಿಂದಿರುವ ಆರ್‌ಎಸ್‌ಎಸ್‌ ನಾಯಕರು ಎಂದೂ ಹೇಳಲಾಗುತ್ತಿದೆ.

ಹಾಗೆ ನೋಡಿದರೆ, ಬಣ ಕಚ್ಚಾಟವು ಮೇಲ್ನೋಟಕ್ಕೆ ವಿಜಯೇಂದ್ರ, ರೇಣುಕಾಚಾರ್ಯ ವರ್ಸಸ್ ಯತ್ನಾಳ್ – ರಮೇಶ್ ಜಾರಕಿಹೊಳಿಯವರ ನಡುವೆ ನಡೆಯುತ್ತಿದೆ ಎಂದು ಕಂಡುಬಂದರೂ, ಇದು ಮುಖ್ಯವಾಗಿ ಯಡಿಯೂರಪ್ಪ ವರ್ಸಸ್ ಬಿ.ಎಲ್ ಸಂತೋಷ್‌ರವರ ಬಣ ಕಾದಾಟ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಬಿ.ಎಲ್ ಸಂತೋಷ್ ಜೊತೆಗೆ ರಾಜ್ಯದಲ್ಲಿ ಕೇವಲ ಒಂದಲ್ಲ ಎರಡು ಗುಂಪುಗಳು ಇವೆ. ಪ್ರಹ್ಲಾದ್ ಜೋಶಿ, ಸಿ.ಟಿ ರವಿ, ತೇಜಸ್ವಿ ಸೂರ್ಯ ಥರಹದ ಸಂಘ ಪರಿವಾರದ ಕೋಮುವಾದಿ ಮನಸ್ಥಿತಿ ಗುಂಪು ಹಿಂದಿನಿಂದಲೂ ಸಂತೋಷ್ ಜೊತೆಗಿದ್ದರೂ ಅವರನ್ನು ಸದ್ಯಕ್ಕೆ ಮುಂದೆ ಬಿಡುತ್ತಿಲ್ಲ. ಬದಲಿಗೆ ಬಾಯಿ ಬಡುಕರಾದ ಯತ್ನಾಳ್‌ ಥರದವರನ್ನು ಮುಂದೆ ಬಿಟ್ಟು ಈ ಫೈಟ್ ನಡೆಸಲಾಗುತ್ತಿದೆ. ಲಿಂಗಾಯಿತರ ವಿರುದ್ಧ ಲಿಂಗಾಯಿತರನ್ನೇ ಎತ್ತಿಕಟ್ಟಿ ಕೊನೆಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂತೋಷ್ ಮುಂದಾಗಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಯತ್ನಾಳ ಹಿಂದೆ ಬಿ.ಎಲ್.ಸಂತೋಷ್ ಇದ್ದಾರೆ. ಹಾಗಾಗಿ, ಬಿಜೆಪಿಯ ಪ್ರಮುಖ ನಾಯಕರ ವಿರುದ್ಧವೇ ಬೀದಿಯಲ್ಲಿ ನಿಂತು ಕೆಟ್ಟದಾಗಿ ಮಾತಾಡುವ ಯತ್ನಾಳ ವಿರುದ್ಧ ಇಲ್ಲಿಯವರೆಗೂ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ- ಶಾ ಸಹ ಇದರಲ್ಲಿ ಒಂದು ಬ್ಯಾಲೆನ್ಸ್ ಮೇಂಟೇನ್ ಮಾಡುತ್ತಿದ್ದಾರೆ. ಅದೇನಂದರೆ ಯಡಿಯೂರಪ್ಪ ತೀರ ತಮ್ಮನ್ನು ದಾಟಿ ಬೆಳೆಯದಿರಲಿ ಎಂಬುದು ಕೂಡ ಇದೆ.

ಎರಡನೇ ಬಾರಿಗೆ ಪಕ್ಷ ಶಿಸ್ತು ಸಮಿತಿ ನೋಟಿಸ್‌ ಕಳಿಸಿದರೂ ಕೂಡ ಮೊಂಡುವಾದ ಮಾಡಿ ಉತ್ತರಿಸದ ಯತ್ನಾಳ ವಿರುದ್ಧ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆ. ಯತ್ನಾಳನ್ನ ಬಿ.ಎಲ್ ಸಂತೋಷ್ ರಕ್ಷಣೆ ಮಾಡುತ್ತಾರಾ? ಅಥವಾ ಪಕ್ಷದ ಶಿಸ್ತು ಸಮಿತಿ ಯತ್ನಾಳ ಅವರನ್ನ ಪಕ್ಷದಿಂದ ಅಮಾನತು ಮಾಡುತ್ತಾರಾ ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X