- ‘ಈ ಕುರಿತು ತಜ್ಞರ ಜೊತೆ ಚರ್ಚಿಸಿ ವರದಿ ಸಲ್ಲಿಸಲು ತಂಡ ರಚಿಸಲಾಗಿದೆ’
- ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಲಿದೆ’
ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೆಯ ಒಂದು ಅವಕಾಶ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಈ ಕುರಿತು ತಜ್ಞರ ಜೊತೆ ಚರ್ಚಿಸಿ ವರದಿ ಸಲ್ಲಿಸಲು ಈಗಾಗಲೇ ತಂಡ ರಚಿಸಲಾಗಿದೆ. ವರದಿ ಬಂದ ಬಳಿಕ ಸಾರ್ವಜನಿಕರಿಗೆ ಮಾಹಿತಿ ಕೊಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಬದ್ಧವಾಗಿ ಇದೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ವನ್ಯಜೀವಿಗಳ ಚರ್ಮ, ಉಗುರು ಧರಿಸುವುದು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಕಾನೂನು ಉಲ್ಲಂಘನೆ ಆಗುತ್ತದೆ” ಎಂದು ಹೇಳಿದರು.
“ರಿಯಾಲಿಟಿ ಶೋದಲ್ಲಿ ಹುಲಿ ಉಗುರು ಧರಿಸಿದ್ದ ವಿಚಾರದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಸಂತೋಷ ಅವರ ಹುಲಿ ಉಗುರು ಧಾರಣೆಯ ಪ್ರಕರಣದ ನಂತರ ಇಲ್ಲಿಯವರೆಗೆ 8 ದೂರುಗಳು ಸಾರ್ವಜನಿಕರ ಕಡೆಯಿಂದ ಬಂದಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಕಾನೂನಿನ ಪ್ರಕಾರ ಕ್ರಮವಹಿಸಲಾಗುವುದು. ದೂರು ಬಂದ ಬೇರೆ ಕಡೆ ಕೂಡ ನಮ್ಮ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಪೂರ್ತಿ ಅರಿವು ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಲಿದೆ” ಎಂದರು.
ಹುಲಿ ಉಗುರು ಧರಿಸಿದ ಹಲವರ ವಿರುದ್ಧ ದೂರುಗಳು ಬಂದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳುತ್ತಾರೆ. ಯಾರು ಬಳಿ ವ್ಯನ್ಯಜೀವಿಗಳ ಚರ್ಮ, ಉಗುರು, ಇತರೆ ವಸ್ತು ಇದೆಯೋ, ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳು ಇದೆಯೋ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಪ್ರಾಣಿಗಳ ವಸ್ತುಗಳು ಇದ್ದರೆ ಸ್ವಯಂಪ್ರೇರಿತವಾಗಿ ಹಿಂದಿರುಗಿಸಬಹುದು. ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಲು ಅವಕಾಶ ನೀಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭೀಕರ ಬರದ ನಡುವೆ ಅನಗತ್ಯ ವಿವಾದಗಳಲ್ಲಿ ಕಾಲಹರಣ ಮಾಡುತ್ತಿರುವ ಸರ್ಕಾರ
800 ಹುದ್ದೆ ಭರ್ತಿಗೆ ಅನುಮೋದನೆ
ಅರಣ್ಯ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳು ಖಾಲಿಯಿವೆ. 4 ಸಾವಿರ ಹುದ್ದೆಗಳ ಪೈಕಿ 800 ಹುದ್ದೆ ಭರ್ತಿಗೆ ಅನುಮೋದನೆ ನೀಡಲಾಗಿದೆ. 800 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಬಾಕಿಯಿರುವ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಇದೇ ವೇಳೆ ಖಂಡ್ರೆ ಮಾಹಿತಿ ಹಂಚಿಕೊಂಡರು.
“ಅರಣ್ಯ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದರೆ ಸಹಾಯವಾಣಿ ಸಂಖ್ಯೆ 1926ಗೆ ಕರೆ ಮಾಡಿ ಮಾಹಿತಿ ನೀಡಬಹುದು” ಎಂದರು.