ಲೋಕಸಭೆಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವು ಶಾಲೆಗಳಲ್ಲಿ ಎರಡು ಗಂಟೆಗಳ ಗಣಿತ ಪಾಠ ಕೇಳಿದಂತೆ ಭಾಸವಾಯಿತು. ಅವರು ಮಂಡಿಸಿದ 11 ನಿರ್ಣಯಗಳು ‘ಪೊಳ್ಳಾಗಿವೆ’. ಅವುಗಳು ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಿಂದ ಬಂದಂತಿವೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದ್ದಾರೆ.
ಭಾರತದ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದಿವೆ. 75 ವರ್ಷಗಳ ಸಂವಿಧಾನದ ವೈಭವದ ಪಯಣದ ಬಗ್ಗೆ ಲೋಕಸಭೆಯಲ್ಲಿ ಎರಡು ದಿನಗಳ ಚರ್ಚೆ ನಡೆದಿದೆ. ಆದರೆ, ಚರ್ಚೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಜರಿರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಆದಾಗ್ಯೂ, ಶನಿವಾರ ಲೋಕಸಭೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ 110 ನಿಮಿಷಗಳ ಭಾಷಣ ಮಾಡಿದ್ದಾರೆ. “2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ಸಂವಿಧಾನಕ್ಕೆ ಅನುಗುಣವಾಗಿ ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಆದರೆ, ಕಾಂಗ್ರೆಸ್ ‘ರಕ್ತದ ರುಚಿ’ಯನ್ನು ಪದೇ ಪದೇ ನೋಡಲು ಬಯಸುತ್ತಿದೆ” ಎಂದು ಮೋದಿ ಆರೋಪಿಸಿದರು.
ಮೋದಿ ಭಾಷಣದ ಬಗ್ಗೆ ಟೀಕೆ ಮಾಡಿದ ಪ್ರಿಯಾಂಕಾ, “ಪ್ರಧಾನಿ ಅವರು ಒಂದೇ ಒಂದು ಹೊಸ ವಿಷಯವನ್ನು ಮಾತನಾಡಿಲ್ಲ. ಅವರ ಮಾತುಗಳನ್ನು ಕೇಳಿ ಬೇಸರವಾಗಿದೆ. ಅವರು ಭಾಷಣ ಮಾಡುತ್ತಿದ್ದ ಸಮಯವು ನಾನು ಶಾಲೆಯಲ್ಲಿ ಗಣಿತದ ತರಗತಿಯಲ್ಲಿ ಎರಡು ಅವಧಿಯವರೆಗೆ ಕುತಿಸಿದ್ದೇನೆ ಎಂಬಂತೆ ಅನಿಸಿತು” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಪಡಿತರ ಚೀಟಿ ರದ್ದಾಗಲು ಮೋದಿ ಸರ್ಕಾರವೇ ಮುಖ್ಯ ಕಾರಣ
“ಮೋದಿ ಭಾಷಣವನ್ನು ಕೇಳುವಾಗ ಬಿಜೆಪಿ ಅಧ್ಯಕ್ಷ, ಸಂಸದ ಜೆ.ಪಿ ನಡ್ಡಾ ಅವರೂ ಕೂಡ ಕೈಗಳನ್ನು ಉಜ್ಜುತ್ತಿದ್ದರು. ಆದರೆ, ಅವರನ್ನು ಮೋದಿ ನೋಡಿದ ತಕ್ಷಣ ಅವರು ಗಮನವಿಟ್ಟು ಕೇಳುತ್ತಿರುವಂತೆ ವರ್ತಿಸುತ್ತಿದ್ದರು. ಅಮಿತ್ ಶಾ ಕೂಡ ತಲೆಯ ಮೇಲೆ ಕೈ ಹಾಕಿಕೊಂಡು ಕುಳಿತಿದ್ದರು. ಪಿಯೂಷ್ ಗೋಯಲ್ ಅವರು ನಿದ್ರೆಗೆ ಜಾರುತ್ತಿದ್ದರು. ಇದು ನನಗೆ ಹೊಸ ಅನುಭವವಾಗಿತ್ತು, ಪ್ರಧಾನಿ ಏನಾದರೂ ಹೊಸದನ್ನು ಹೇಳುತ್ತಾರೆಂದು ಕಾಯುತ್ತಿದ್ದೆ. ಆದರೆ, ಅವರು ಹೊಸದಾಗಿ ಏನನ್ನೂ ಹೇಳಿಲ್ಲ” ಎಂದು ಪ್ರಿಯಾಂಕಾ ವಿವರಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಮಾತನಾಡಿ, “ಭಾರತೀಯ ಸಂವಿಧಾನದ ಬಗ್ಗೆ ವಿಶೇಷ ಚರ್ಚೆಯ ಕಲ್ಪನೆಯನ್ನು ಪ್ರಸ್ತಾಪಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಧನ್ಯವಾದ ಹೇಳಬೇಕು. ಕಾಂಗ್ರೆಸ್‌ನ ದೂರದೃಷ್ಟಿಯಿಂದ ಮಾತ್ರವೇ ಇಂತಹ ರೋಮಾಂಚಕ ಚರ್ಚೆ ನಡೆದಿದೆ. ನಾವು ಬಿಜೆಪಿಯೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಆದರೆ ಈ ದೇಶದ ಜನರು ಸಂಸತ್ತಿನಲ್ಲಿ ಭಾರತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವುದನ್ನು ನೋಡಬೇಕಾಗಿದೆ” ಎಂದಿದ್ದಾರೆ.