- ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ
- ಬಿಜೆಪಿ ಸರ್ಕಾರಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದ ಕಾಂಗ್ರೆಸ್ ನಾಯಕ
ಬಿಜೆಪಿ ದೇಶದಲ್ಲಿ ದ್ವೇಷ ಹರಡಿ ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಕಾಂಗ್ರೆಸ್ಸಿಗರಾದ ನಮಗೆ ದೇಶ ಮತ್ತು ಸಂವಿಧಾನ ರಕ್ಷಿಸುವ ಜವಾಬ್ದಾರಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಕಾಂಗ್ರೆಸ್ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಆರ್ಎಸ್ಎಸ್ ಮತ್ತು ಬಿಜೆಪಿಯಿಂದ ನವ ಭಾರತವನ್ನು ರಕ್ಷಣೆ ಮಾಡಬೇಕು” ಎಂದಿದ್ದಾರೆ.
“ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರಲ್ಲಿ ಒಗ್ಗಟ್ಟು ಕಾಣುತ್ತಿದೆ. ರಾಜ್ಯದ ಎಲ್ಲ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ್ದರು. ಅದೇ ರೀತಿ ಚುನಾವಣೆಯಲ್ಲೂ ಕೆಲಸ ಮಾಡಿದರೆ ಪಕ್ಷದ ಗೆಲುವು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಬಿರುದು ಪಡೆದಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹೆಗ್ಗುರುತಾಗಿದೆ” ಎಂದು ಹರಿಹಾಯ್ದಿದ್ದಾರೆ.
“ಪ್ರಧಾನಮಂತ್ರಿಗಳು, ಬಿಜೆಪಿ ನಾಯಕರು ಏನೇ ಹೇಳಿದರೂ ಅವರು ಕಳೆದ ಐದು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ರಾಜ್ಯದ ಜನರಿಗೆ ಅರಿವಾಗಿದೆ. ಈ ಸರ್ಕಾರಕ್ಕೆ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆ” ಎಂದು ಹೇಳಿದ್ದಾರೆ.
“ಈ ಬಿಜೆಪಿ ಸರ್ಕಾರದ ವರ್ತನೆಯನ್ನು ನಮ್ಮ ಸರ್ಕಾರ ಮುಂದುವರಿಸುವುದಿಲ್ಲ. ಸ್ವಚ್ಛ, ಜನರ ಕಷ್ಟ ಆಲಿಸುವ, ಅವರ ಬದುಕು ಬದಲಿಸುವ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಳೇ ಡಬ್ಬಿಗೆ ಹೊಸ ಬಣ್ಣ ಬಳಿದಿದ್ದೇ ಮೋದಿ ಸಾಧನೆ: ಮಲ್ಲಿಕಾರ್ಜುನ ಖರ್ಗೆ
“ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಕ್ಷಣದಲ್ಲಿ ಬೇಕಾದರೂ ಇಲ್ಲಿಗೆ ಬಂದು ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಿಗೆ ಹೇಳಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಬರಲು ನನಗೆ ಬಹಳ ಇಷ್ಟ. ನಾನು ಕಾಂಗ್ರೆಸ್ ಪಕ್ಷ ಹೆಚ್ಚಿನ ಬಹುಮತ ಪಡೆಯಲು ಎಲ್ಲ ಸಹಾಯ ಮಾಡಲು ಸಿದ್ಧ” ಎಂದು ಹೇಳಿದ್ದಾರೆ.
“ಚುನಾವಣೆಯನ್ನು ಅಲ್ಪ ಬಹುಮತದಿಂದ ಗೆಲ್ಲುವುದರಲ್ಲಿ ಅರ್ಥವಿಲ್ಲ. ನಾವು ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಿಜೆಪಿ ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದ್ದು, ಮುಂದಿನ ಸರ್ಕಾರವನ್ನು ಬೀಳಿಸಲು ಅದೇ ಹಣ ಬಳಸುತ್ತಾರೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತದ ಗೆಲುವು ನೀಡಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಂದಿನಿ ಐಸ್ಕ್ರೀಂ ಸವಿದ ರಾಹುಲ್ ಗಾಂಧಿ
ನಂದಿನಿ ಮತ್ತು ಅಮುಲ್ ವ್ಯಾಪಾರದ ಕುರಿತು ವಿವಾದ ಸೃಷ್ಟಿಯಾದ ಬೆನ್ನಲ್ಲೇ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಜೆ ಪಿ ನಗರದ ನಂದಿನಿ ಪಾರ್ಲರ್ಗೆ ಭಾನುವಾರ ಸಂಜೆ ಭೇಟಿ ನೀಡಿ, ಐಸ್ಕ್ರೀಂ ಸವಿದರು.