- ಡಿಕೆಶಿಯವರ ಬೆಳವಣಿಗೆ ಕಂಡು ಕುಮಾರಸ್ವಾಮಿಗೆ ಹೊಟ್ಟೆಗೆ ಬೆಂಕಿ ಬಿದ್ದಿದೆ
- ಜೆಡಿಎಸ್‌ನಲ್ಲಿ ಬೆಲೆ ಇಲ್ಲ, ಕಾಂಗ್ರೆಸ್‌ಗೆ ಬನ್ನಿ; ಸಿಎಂ ಇಬ್ರಾಹಿಂಗೆ ಒತ್ತಾಯ
ಜೆಡಿಎಸ್ ಮೊದಲು ತಮ್ಮ ತತ್ವ ಸಿದ್ದಾಂತ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟತೆ ನೀಡಲಿ. ರಾಜ್ಯಾಧ್ಯಕ್ಷರನ್ನು ನಿರ್ಲಕ್ಷ್ಯ ಮಾಡಿ, ಒಳಗೊಳಗೆ ಒಪ್ಪಂದ ಮಾಡಿಕೊಂಡು ಜ್ಯಾತ್ಯತೀತ ಸಿದ್ಧಾಂತ ಹಾಳು ಮಾಡಿದ್ದೀರಿ. ನಿಮಗೆ ದಿಗ್ಬ್ರಮೆ ಆಗುವಷ್ಟು ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ನಿಮ್ಮ ಪಕ್ಷ ವಿಸರ್ಜನೆ ಆಗುವ ಮಟ್ಟಕ್ಕೆ ಬರಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೆಡಿಎಸ್ ಎನ್ನುವುದು ಫ್ಯಾಮಿಲಿ ಟ್ರಸ್ಟ್ ಆದರೆ ಎಂದಿಗೂ ಬಿಜೆಪಿಯ ಜೊತೆ ಹೋಗದ ದೇವೆಗೌಡರು ಈಗ ಕೋಮುವಾದಿ ಪಕ್ಷದ ಜೊತೆ ಹೋಗಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಎಲ್ಲಿ ಭೂಗತವಾಗಿದ್ದಾರೆʼ ಅವರಿಗೆ ಈ ಮೈತ್ರಿ ಇಷ್ಟವಿದೆಯೇ? ಅವರು ಹೊರಗೆ ಬಂದು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
“ಕುಮಾರಸ್ವಾಮಿ ಅವರೇ ನೀವು ಡಿ ಕೆ ಶಿವಕುಮಾರ್ ಅವರಿಗೆ ಬೈದಷ್ಟು ಅವರು ಒಕ್ಕಲಿಗ ನಾಯಕರಾಗಿ ಬೆಳೆಯುತ್ತಲೇ ಇರುತ್ತಾರೆ. ಅವರ ಬೆಳವಣಿಗೆ ಕಂಡು ನಿಮಗೆಲ್ಲ ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು ಕುಟುಕಿದರು.
ಮಾಜಿ ಎಂಎಲ್‌ಸಿ ರಮೇಶ್ ಬಾಬು ಮಾತನಾಡಿ, “ಜೆಡಿಎಸ್ ಮತ್ತು ಬಿಜೆಪಿ ಒಂದಾಗಿರುವುದು ಯಡಿಯೂರಪ್ಪ ಅವರನ್ನು ತುಳಿಯಲು ಕುಮಾರಸ್ವಾಮಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಡಿ ಕೆ ಶಿವಕುಮಾರ್ ಅವರನ್ನು ಬೈಯುವ ಕೆಲಸ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ಕೃಷಿ ಬಿಕ್ಕಟ್ಟು ಮತ್ತು ಎಂ ಎಸ್ ಸ್ವಾಮಿನಾಥನ್ ಸೃಷ್ಟಿಸಿದ ಚರಿತ್ರೆ
“ಕೇರಳದ ಜೆಡಿಎಸ್ ಶಾಸಕರು ದೇವೆಗೌಡರ ವಿರುದ್ದ ದನಿ ಎತ್ತಿ, ನಾವು ಪ್ರತ್ಯೇಕವಾಗಿ ಉಳಿಯುತ್ತೇವೆ ಎಂದು ಹೇಳಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲ, ಅದರ ರಾಷ್ಟ್ರೀಯ ಅಧ್ಯಕ್ಷರು ದೇವೇಗೌಡರು. ದೇವೇಗೌಡರು ಸಮಾಜವಾದಿ ಜನತಾ ಪಕ್ಷ ಎನ್ನುವ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಗುದ್ದಲಿ ಹಿಡಿದ ರೈತನ ಪಕ್ಷ ಆದರೆ ಅದು ಸಫಲವಾಗಲಿಲ್ಲ” ಎಂದರು.
“ದೇವೇಗೌಡರು ಹೇಳಿದ್ದಾರೆ ಬಂಗಾಳದಲ್ಲಿ ಎಡ ಪಕ್ಷಗಳು ಬಿಜೆಪಿ ಜೊತೆ ಸೇರಿದ್ದವು ಎಂದು ಆದರೆ ನೀವು ಕೇರಳದಲ್ಲಿ ಮಾಡಿದ್ದೇನು. ಹಿರಿಯರು ಸುಳ್ಳು ಹೇಳಬಾರದು. ಸಿ ಎಂ ಇಬ್ರಾಹಿಂ ಅವರೇ ನಿಮಗೆ ಜೆಡಿಎಸ್‌ನಲ್ಲಿ ಬೆಲೆ ಇಲ್ಲ ಆದ ಕಾರಣ ಕಾಂಗ್ರೆಸ್‌ಗೆ ಬನ್ನಿ. ಅನೇಕ ಶಾಸಕರು ಹಾಗೂ ಮಾಜಿ ಶಾಸಕರು, ಸಚಿವರು ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆʼ ಎಂದು ಹೇಳಿದರು.
“ತಾಂತ್ರಿಕ ಕಾರಣವಾಗಿ 19 ಶಾಸಕರಲ್ಲಿ ಯಾರೂ ಕೂಡ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸುತ್ತಿಲ್ಲ. ಎಲ್ಲರೂ ಸೈದ್ದಾಂತಿಕವಾಗಿ ಗಟ್ಟಿ ಇರುವ ಕಾಂಗ್ರೆಸ್‌ಗೆ ಬರಬಹುದು ಎಂದು ಬಹಿರಂಗವಾಗಿ ಆಹ್ವಾನ ನೀಡುತ್ತೇನೆ” ಎಂದರು.