ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶ ಪ್ರಧಾನಮಂತ್ರಿಗಳಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ ಎಂಬ ಅರ್ಥದಲ್ಲಿ ಮಾತನಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಐವನ್ ಡಿಸೋಜ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೂಡಲೇ ರಾಜ್ಯ ಪೋಲಿಸ್ ಇಲಾಖೆಯ ಮಹಾನಿರ್ದೇಶಕರು, ಪರಿಷತ್ ಸದಸ್ಯರಾದ ಐವಾನ್ ಡಿಸೋಜ ಅವರ ವಿರುದ್ದ ದೂರುನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಿ
“ಎಂಎಲ್‌ಸಿ ಐವಾನ್ ಡಿಸೋಜ ಅವರು ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ; ರಾಜಭವನಕ್ಕೆ ನುಗ್ಗಿ ತೊಂದರೆ ಮಾಡುತ್ತೇವೆ ಎಂದಿದ್ದಾರೆ. ಐವಾನ್ ಡಿಸೋಜ ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ನನಗೆ ಬರುತ್ತಿದೆ. ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಬೇಕು. ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಬೇಕು” ಎಂದು ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಸುದ್ದಿಗಾರರ ಜೊತೆ ಮಾತನಾಡಿ, “ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಮಾತನಾಡುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ಬಿಚ್ಚಿಟ್ಟಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಯ ಹಿಂದಿನ ಮರ್ಮವೇನು? ರಾಜಭವನಕ್ಕೆ ಕಾಂಗ್ರೆಸ್ ಪುಢಾರಿಗಳನ್ನು ನುಗ್ಗಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಅರಾಜಕತೆ
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, “ಸಿದ್ದರಾಮಯ್ಯ ಅವರ ರಾಜೀನಾಮೆ ಸನ್ನಿಹಿತವಾಗುತ್ತಿದ್ದಂತೆಯೇ ಗೌರವಾನ್ವಿತ ರಾಜ್ಯಪಾಲರ ಕಚೇರಿಯ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಕಾಂಗ್ರೆಸ್ ಹಾಕುತ್ತಿದೆ. ಈ ಮೂಲಕ ಕರ್ನಾಟಕದಲ್ಲಿ ಅರಾಜಕತೆ ಮತ್ತು ಅಸ್ಥಿರತೆಯನ್ನು ಉಂಟುಮಾಡಲು ಸಂಚು ಮಾಡುತ್ತಿದೆ” ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, “ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಈಗ ಗೂಂಡಾಗಿರಿ ನಡೆಸುತ್ತಿದ್ದಾರೆ, ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ರಾಜ್ಯಪಾಲರನ್ನು ಬೆದರಿಸುತ್ತಿದ್ದಾರೆ. ರಾಜ್ಯವು ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಸಾಕ್ಷಿಯಾಗಬಹುದು ಎಂದು ಎಚ್ಚರಿಸುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ” ಎಂದು ಕಿಡಿಕಾರಿದರು.
ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಐವನ್ ಡಿಸೋಜಾ ವಿರುದ್ಧ ಉಪ್ಪಾರಪೇಟೆ ಪೋಲೀಸ್ ಠಾಣೆಗೆ ಬಿಜೆಪಿ ನಿಯೋಗ ದೂರು ನೀಡಿದೆ.