ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಶಾಲು ಹೊದಿಸಿ, ಪಕ್ಷದ ಬಾವುಟ ನೀಡುವ ಮೂಲಕ ‘ಕೈ’ ನಾಯಕರು ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಪಕ್ಷದ ಸದಸ್ಯತ್ವ ಪಡೆಯುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಗತ. ಶೆಟ್ಟರ್ ಅವರಿಗೆ ನಮ್ಮ ಪಕ್ಷದ ಸಿದ್ದಾಂತ ಈಗಾಗಲೇ ಗೊತ್ತಿದೆ. ಅವುಗಳನ್ನು ಒಪ್ಪಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಶೆಟ್ಟರ್ ಬಿಜೆಪಿ ತೊರೆದಿದ್ದಾರೆ. ಅವರ ನಡೆ ಸಂತೋಷ ತಂದಿದೆ” ಎಂದು ಹೇಳಿದರು.
“ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ. ಶೆಟ್ಟರ್ ಜೊತೆಗೆ ಅಭಯ್ ಸಿಂಗ್ ಕೈ ಹಿಡಿಯುತ್ತಿದ್ದಾರೆ. ನಾನು 35 ವರ್ಷ ರಾಜ್ಯದಲ್ಲಿ ರಾಜಕಾರಣ ಮಾಡಿದ್ದೇನೆ. ಒಮ್ಮೆಯೂ ಶೆಟ್ಟರ್ ಜೊತೆಗೆ ಜಗಳವಾಡಿಕೊಂಡಿಲ್ಲ” ಎಂದರು.
“ಶೆಟ್ಟರ್ ಯಾವುದೇ ವಿವಾದ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇವರು ನೇರ ಮಾತಿನ ರಾಜಕಾರಣಿ. ಜಗದೀಶ್ ಶೆಟ್ಟರ್‌ಗೆ ಧಾರವಾಡ ಭಾಗದ ಕ್ಷೇತ್ರಗಳ ಹೊಣೆ ನೀಡುತ್ತೇವೆ” ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಎಂ.ಬಿ ಪಾಟೀಲ್ ಉಪಸ್ಥಿತರಿದ್ದರು.
ಹುಬ್ಬಳಿ-ಧಾರವಾಡ ಸೆಂಟ್ರಲ್ ಸೀಟು ಹಂಚಿಕೆ ವಿಚಾರವಾಗಿ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರು. ಬಳಿಕ ಬಿಜೆಪಿ ಹೈಕಮಾಂಡ್ ನಾಯಕರು ಅವರ ಮನವೊಲಿಕೆಗೆ ಅನೇಕ ಆಫರ್‌ಗಳನ್ನು ಮುಂದಿಟ್ಟು ಕಸರತ್ತು ನಡೆಸಿದ್ದರು.
ಆದರೆ, ಬಿಜೆಪಿ ನಾಯಕರ ಆಫರ್ ಧಿಕ್ಕರಿಸಿದ್ದ ಜಗದೀಶ್ ಶೆಟ್ಟರ್ ಪಕ್ಷದ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅಧಿಕೃತವಾಗಿ ‘ಕೈ’ ಹಿಡಿದಿದ್ದಾರೆ.