- ದೆಹಲಿ ವರಿಷ್ಠರ ನಿರ್ಧಾರದ ವಿರುದ್ಧ ಸಿಡಿದ ಜಗದೀಶ್ ಶೆಟ್ಟರ್
- ಬಿಜೆಪಿ ಎದುರೇ ಬಂಡಾಯ ಸ್ಪರ್ಧೆ ಸುಳಿವು ನೀಡಿದ ಮಾಜಿ ಸಿಎಂ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮದೇ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಹೊಸಬರಿಗೆ ಅವಕಾಶ ಬಿಟ್ಟುಕೊಡಿ ಎಂದಿದ್ದ ಬಿಜೆಪಿ ಹೈಕಮಾಂಡ್‌ಗೆ ತಿರುಗೇಟು ನೀಡಿರುವ ಅವರು 30 ವರ್ಷದ ಪಕ್ಷ ಸೇವೆಗೆ ಕೊಡುವ ಗೌರವ ಇದೆಯೇ ಏನು? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ನಾನಿನ್ನೂ ರಾಜಕೀಯದಲ್ಲಿ ಇರಬೇಕೆಂದು ಬಯಸಿದ್ದೇನೆ ಅದರಂತೆ ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ವರಿಷ್ಠರಿಗೇ ಸೆಡ್ಡು ಹೊಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, “ನನಗೆ ವರಿಷ್ಠರಿಂದ ಪೋನ್ ಬಂದಿದ್ದು ಸತ್ಯ.ನೀವು ಹಿರಿಯ ನಾಯಕ ಆಗಿದ್ದೀರಿ, ಬೇರೆಯವರಿಗೆ ಅವಕಾಶ ಕೊಡಿ ಎಂದು ನನಗೆ ಹೈಕಮಾಂಡ ಹೇಳಿದ್ರು”ಎಂದು ಅವರು ತಿಳಿಸಿದರು.
“ಕಳೆದ 30 ವರ್ಷಗಳಿಂದ ನಾನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನೂರಾರು ಜನರಿಗೆ ಟಿಕೆಟ್ ಕೊಡುವ ಕೆಲಸ ನಾನೂ ಮಾಡಿದ್ದೇನೆ. ನನಗೆ ಟಿಕೆಟ್ ನೀಡಬಾರದು ಎನ್ನುವುದಕ್ಕೆ ಕಾರಣ ಏನಿದೆ” ಎಂದು ಅವರು ಪಕ್ಷದ ವರಿಷ್ಠರನ್ನು ಕೇಳಿದರು.
ಮುಂದುವರೆದು ಮಾತನಾಡಿದ ಅವರು, “ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ನನ್ನ ಪರ ಪಾಸಿಟಿವ್ ರಿಸಲ್ಟ್ ಇದೆ. ಯಾವುದೇ ರೀತಿಯ ಕಪ್ಪು ಚುಕ್ಕೆ ನನ್ನ ಮೇಲಿಲ್ಲ.
ಇದರ ಜೊತೆಗೆ ಇಲ್ಲಿಯವರೆಗೂ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಇದಕ್ಕೆ ನನಗೆ ಈ ಶಿಕ್ಷೆಯನ್ನು ನೀವು ಕೊಡುತ್ತಿದ್ದೀರಾ ಎಂದು ಕೇಳಿದ ಶೆಟ್ಟರ್. ನಿಮ್ಮ ನಿರ್ಧಾರದಿಂದ ಮನಸ್ಸಿಗೆ ನೋವಾಗಿದೆ” ಎಂದರು.
ಬಳಿಕ ತಮ್ಮ ಸ್ಪರ್ಧೆ ವಿಚಾರ ಸ್ಪಷ್ಟಪಡಿಸಿದ ಶೆಟ್ಟರ್, ನಾನು ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರು.
ಈ ಸುದ್ದಿ ಓದಿದ್ದೀರಾ? : ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಕೆಎಸ್ ಈಶ್ವರಪ್ಪ: ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದರಾ?
ಪಿತೂರಿ ಮಾಡಿದವರಿಗೆ ತಿರುಗೇಟು
ಇನ್ನು ತಮಗೆ ಟಿಕೆಟ್ ತಪ್ಪಿಸುವಂತೆ ಮಾಡಿದವರ ವಿರುದ್ದ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ ಜಗದೀಶ್ ಶೆಟ್ಟರ್, ರಾಜಕೀಯದಲ್ಲಿ ಅವಸರ ಮಾಡಿದ್ರೆ ಅಪಘಾತವಾಗುತ್ತದೆ ಎನ್ನುವುದರ ನೆನಪು ಅವರುಗಳಿಗೆ ಇರಬೇಕು.
ನಾನು ಈಗಾಗಲೇ ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ನಾನು ಟಿಕೆಟ್‌ಗಾಗಿ ಎಲ್ಲಿಯೂ ಹೋಗುವುದಿಲ್ಲ, ಯಾರ ಜೊತೆಗೂ ಮಾತನಾಡುವುದಿಲ್ಲ.
ರಾಜಕಾರಣದಲ್ಲಿ ಯಾವಾಗ ಏನು ಆಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ತಾಳ್ಮೆ ಮುಖ್ಯ ಎಂದು ಅವರು ಹೇಳಿದರು.