- ಬೊಮ್ಮಾಯಿ ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ
- ‘ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು’
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿರುವುದು ನೋವು ಮತ್ತು ಕಸಿವಿಸಿ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೆ ಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶೆಟ್ಟರ್ ಅವರಿಗೆ ದೆಹಲಿ ಮಟ್ಟದಲ್ಲಿ ಇದಕ್ಕಿಂತ ದೊಡ್ಡ ಹುದ್ದೆ ಕೊಡಲಾಗುವುದು ಎಂದು ಜೆ ಪಿ ನಡ್ಡಾ, ಅಮಿತ್ ಶಾ ಅವರು ತಿಳಿಸಿದ್ದರು” ಎಂದು ಹೇಳಿದ್ದಾರೆ.
“ನಿನ್ನೆಯೂ ಚರ್ಚೆ ಮಾಡಿ, ಅವರು ಸೂಚಿಸಿದವರಿಗೆ ಟಿಕೆಟ್ ಕೊಡಲಾಗುವುದು ಎಂದು ತಿಳಿಸಲಾಯಿತು. ಜಗದೀಶ್ ಶೆಟ್ಟರ್ ಅವರು ಮುಂದುವರಿಸಿಕೊಂಡು ಹೋಗಿದ್ದರೆ ಉತ್ತಮವಾಗಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್
“ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿದೆ. ಅವರ ಎಲ್ಲ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ” ಎಂದು ಹೇಳಿದ್ದಾರೆ.
“ಹೊಸ ಬೆಳವಣಿಗೆಗಾಗಿ ಈ ಪ್ರಯತ್ನ ಮಾಡಲಾಗಿದೆ. ಶೆಟ್ಟರ್ ರಾಜಿನಾಮೆಯಿಂದ ಬಿಜೆಪಿಗೆ ಸ್ವಲ್ಪ ಹಾನಿಯಾಗಲಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಎಲ್ಲ ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
“ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳದು ನಿಂತಿದೆ. ಎರಡನೆ ಪೀಳಿಗೆಯಲ್ಲಿ ಲಿಂಗಾಯತ ಸಮುದಾಯದ ಸಿ ಸಿ ಪಾಟೀಲ್, ನಿರಾಣಿ, ಸೋಮಣ್ಣ ಬೆಳೆದು ನಿಂತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಸ್ಥಾನ, ಅತೀ ಹೆಚ್ಚು ಮಂತ್ರಿ ಸ್ಥಾನ, ನೀಡಿದ್ದು ಬಿಜೆಪಿ” ಎಂದಿದ್ದಾರೆ.
“ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಇಬ್ಬರಿದ್ದಾರೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಹೆಸರು ಇದೆ. ನಮ್ಮ ಚುನಾವಣೆ ತಂತ್ರ ನಾವು ರೂಪಿಸುತ್ತೇವೆ. ಪಕ್ಷ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.