ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ವೇಳೆ, ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಮಸೀದಿ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪರಿಣಾಮ, ಸ್ಥಳದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದೆ. ಕೋಮುದ್ವೇಷ ಪ್ರಚೋದನೆಗೆ ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸೇರಿ, ಹಲವಾರು ಬಿಜೆಪಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಪುರದಲ್ಲಿ ಶನಿವಾರ ರಾತ್ರಿ, ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೇಸರಿ ಧ್ವಜಗಳು ಮತ್ತು ಪಂಜುಗಳನ್ನು ಹಿಡಿದು ‘ಜೈ ಶ್ರೀ ರಾಮ್’ ಮತ್ತು ‘ಪಾಕಿಸ್ತಾನ್ ಮುರ್ದಾಬಾದ್’ ಸೇರಿದಂತೆ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ವೇಳೆ, ಜಾಮಾ ಮಸೀದಿ ಆವರಣಕ್ಕೆ ನುಗ್ಗಿ ಶಾಸಕ ಆಚಾರ್ಯ ಮತ್ತು ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ.
ಮಸೀದಿ ಆವರಣದಲ್ಲಿ ಪ್ರಕ್ಷುಬ್ದತೆ ಉಂಟಾದ ಬೆನ್ನಲ್ಲೇ, ಕಾಂಗ್ರೆಸ್ ಶಾಸಕರಾದ ರಫೀಕ್ ಖಾನ್ ಮತ್ತು ಅಮೀನ್ ಕಾಗ್ಜಿ ಹಾಗೂ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಅವರು ಸ್ಥಳಕ್ಕೆ ತೆರಳಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಜಾಮಾ ಮಸೀದಿ ಸಮಿತಿ ನೀಡಿದ ದೂರಿನ ಮೇರೆಗೆ ಬಿಜೆಪಿ ಶಾಸಕ ಆಚಾರ್ಯ ಮತ್ತು ಇತರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ಬಿಜೆಪಿ ಶಾಸಕರು ಬೂಟುಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸಿದರು. ಮೆಟ್ಟಿಲುಗಳ ಮೇಲೆ ಪೋಸ್ಟರ್ ಅಂಟಿಸಿದರು. ಭಯೋತ್ಪಾದಕರನ್ನು ಬೆಂಬಲಿಸುವವರನ್ನು ‘ಒಬ್ಬೊಬ್ಬರಾಗಿ ಸ್ವರ್ಗದ ಬಾಗಿಲಿಗೆ ಕಳಿಸಲಾಗುವುದು’ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಆಚಾರ್ಯ ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿ ಓದಿದ್ದೀರಾ?: ಸರ್ವಪಕ್ಷಗಳ ಸಭೆಗೆ ಪ್ರಧಾನಿ ಮೋದಿ ಗೈರು: ದೇಶಕ್ಕಿಂತ ಚುನಾವಣೆಯೇ ಮುಖ್ಯವಾಯಿತಾ?
ಬಿಜೆಪಿ ಶಾಸಕ ಮತ್ತು ಬೆಂಬಲಿಗರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 298 (ಪೂಜಾ ಸ್ಥಳಕ್ಕೆ ಹಾನಿ ಅಥವಾ ಅಪವಿತ್ರಗೊಳಿಸುವುದು), 300 (ಧಾರ್ಮಿಕ ಸಭೆಯನ್ನು ಕದಡುವುದು), 302 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಪದ ಬಳಕೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಸಿಐಡಿ-ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಕೋಮು ಉದ್ವಿಗ್ನತೆ ಹರಡುತ್ತಿದ್ದಂತೆ, ಶಾಸಕ ಆಚಾರ್ಯ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಾಮಾ ಮಸೀದಿಯಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಜಾಮಾ ಮಸೀದಿ ಸಮಿತಿ ಮತ್ತು ಮುಸ್ಲಿಂ ಸಮುದಾಯದ ಹಿರಿಯ ನಾಯಕರು ಪತ್ರಿಕಾಗೋಷ್ಠಿ ನಡೆಸಿದ್ದು, “ದಾಂಧಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಕಾಯುತ್ತೇವೆ. ಮಸೀದಿಗೆ ನುಗ್ಗಿ ದಾಂಧಲೆ ನಡೆಸಿದ ಬಿಜೆಪಿಗರು ಮತ್ತು ಶಾಸಕ ಆಚಾರ್ಯ ಅವರನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.