ಜಮ್ಮು ಮತ್ತು ಕಾಶ್ಮೀರವು ರಾಜ್ಯತ್ವವನ್ನು ಮರಳಿ ಪಡೆಯುವುದನ್ನು ಕಾಂಗ್ರೆಸ್ ಖಾತ್ರಿಪಡಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆ.18ರಿಂದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಒಂದು ದಿನದ ಮುನ್ನ ಖರ್ಗೆ ಟ್ವೀಟ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕಾಂಗ್ರೆಸ್ ನೀಡಿರುವ ಏಳು ಭರವಸೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. “ಪಕ್ಷವು ಅಧಿಕಾರಕ್ಕೆ ಬಂದರೆ, ಜಮ್ಮು ಮತ್ತು ಕಾಶ್ಮೀರದ ಹಕ್ಕುಗಳನ್ನು ಕಾಂಗ್ರೆಸ್ ಖಾತರಿಪಡಿಸುತ್ತದೆ. ನಾವು ಜಮ್ಮು ಮತ್ತು ಕಾಶ್ಮೀರವು ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನವನ್ನು ಪಡೆಯಲು ಶ್ರಮಿಸುತ್ತೇವೆ” ಎಂದು ಹೇಳಿದ್ದಾರೆ.
“ಖಾಲಿ ಇರುವ ಒಂದು ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವ ಮೂಲಕ ಯುವಕರಿಗೆ ಹೊಸ ಶಕ್ತಿ ನೀಡಲಿದೆ” ಎಂದು ಹೇಳಿದ್ದಾರೆ.
ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ಮತ್ತು ಪ್ರತಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿಯೂ ಪಕ್ಷವು ಭರವಸೆ ನೀಡಿದೆ. ಇದರಿಂದ, ‘ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಖರ್ಗೆ ಹೇಳಿದ್ದಾರೆ.
“ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಡಾ. ಮನಮೋಹನ್ ಸಿಂಗ್ ಅವರ ಯೋಜನೆಯನ್ನು ವಿಸ್ತರಿಸಲಾಗುವುದು. ಒಬಿಸಿ ವರ್ಗಕ್ಕೆ ನೀಡಲಾಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಖಾತ್ರಿಪಡಿಸಲಾಗುವುದು” ಎಂದು ಖರ್ಗೆ ಹೇಳಿದ್ದಾರೆ.
“ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 3,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. 11 ಕೆಜಿ ಧಾನ್ಯದೊಂದಿಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಆಹಾರ ಭದ್ರತೆ ನೀಡಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
“ಭೂರಹಿತರು, ಹಿಡುವಳಿದಾರರು ಮತ್ತು ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ವಾರ್ಷಿಕ 4,000 ರೂ. ಹೆಚ್ಚುವರಿ ಆರ್ಥಿಕ ಬೆಂಬಲ ನೀಡುತ್ತೇವೆ. ರಾಜ್ಯದ ಭೂಮಿಯನ್ನು ಸಾಗುವಳಿ ಮಾಡುವ ಭೂರಹಿತ ರೈತರಿಗೆ 99 ವರ್ಷಗಳ ಗುತ್ತಿಗೆ ವ್ಯವಸ್ಥೆ ಜಾರಿಗೆ ತರುತ್ತೇವೆ” ಎಂದು ಕಾಂಗ್ರೆಸ್ ಹೇಳಿದೆ.