ವಿಧಾನಸಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ, ಜಿಲ್ಲೆಯನ್ನು ತನ್ನ ವಶಕ್ಕೆ ಪಡೆದುಕೊಂಡ ಕಾಂಗ್ರೆಸ್, ಈಗ ಮತ್ತೊಮ್ಮೆ ಜೆಡಿಎಸ್‌ಗೆ ಭಾರೀ ಹೊಡೆತ ಕೊಟ್ಟಿದೆ. ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಮನ್ಮುಲ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಜೆಡಿಎಸ್ ತೆಕ್ಕೆಯಲ್ಲಿ ಮನ್ಮಲ್‌ಅನ್ನೂ ತನ್ನ ವಶಕ್ಕೆ ಪಡೆದುಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನ ಬೋರೇಗೌಡ ಗೆಲುವು ಸಾಧಿಸಿದ್ದಾರೆ. ಓರ್ವ ಬಿಜೆಪಿ ಬೆಂಬಲಿತ ಸದಸ್ಯ ಕೂಡ ಬೋರೇಗೌಡರಿಗೆ ಬೆಂಬಲ ನೀಡಿದ್ದು, ಅವರು ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಯಾರೇ ಗೆಲ್ಲಬೇಕಿದ್ದರೂ, 9 ಮತಗಳನ್ನು ಪಡೆಯಬೇಕಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ನಿರ್ದೇಶಕರು, ಓರ್ವ ನಾಮ ನಿರ್ದೆಶಿತ ಸದಸ್ಯ, ನಾಲ್ವರು ಅಧಿಕಾರಿಗಳು ಹಾಗೂ ಓರ್ವ ಬೆಜೆಪಿ ಬೆಂಬಲಿತ ಸದಸ್ಯರು ಮತ ನೀಡಿದ್ದಾರೆ.
2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳನ್ನು ಗೆದ್ದು, ‘ಕ್ಲೀನ್ ಸ್ವೀಪ್’ ಮಾಡಿದ್ದ ಜೆಡಿಎಸ್, ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. 2023ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೇಲವ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದ್ದು, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.