ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಪಾಠ ಕಲಿಸಬೇಕೆಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶದ 24 ಪ್ರತಿಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಮತ್ತೊಂದೆಡೆ ದೆಹಲಿಯಲ್ಲಿ 38 ಎನ್‌ಡಿಎ ಮಿತ್ರಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ. ಆದರೆ, ಜೆಡಿಎಸ್ ಮಾತ್ರ ಎರಡೂ ಸಭೆಗಳಲ್ಲಿ ಭಾಗವಹಿಸದೆ ಕಾದುನೋಡುವ ತಂತ್ರ ಅನುಸರಿಸುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 18ರಂದು ಸಂಜೆ ದೆಹಲಿಯಲ್ಲಿ ನಡೆಯುವ ಎನ್‌ಡಿಎ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಇಂದಿನ ಎನ್‌ಡಿಎ ಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿಲ್ಲ.
ಎನ್‌ಡಿಎ ಮೈತ್ರಿಕೂಟ ಸಭೆಗೆ ಜೆಡಿಎಸ್ಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದು, ಎನ್‌ಡಿಎ ಸಭೆಗೆ ನನಗೆ ಆಹ್ವಾನ ಬಂದಿಲ್ಲ ಎಂದಿದ್ದರು. ಇದರೊಂದಿಗೆ ಇತ್ತ ಮಹಾಘಟಬಂಧನ್ ಸಭೆಗೂ ಆಹ್ವಾನವಿಲ್ಲ, ಅತ್ತ ಎನ್‌ಡಿಎ ಮೈತ್ರಿಕೂಟದ ಸಭೆಗೂ ಆಹ್ವಾನ ಬಂದಿಲ್ಲ. ಈ ಹಿನ್ನೆಯಲ್ಲಿ ಕುಮಾರಸ್ವಾಮಿ ನಡೆ ಯಾವ ಕಡೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಉತ್ಸುಕರಾಗಿರುವ ದಳಪತಿಗಳು ಇಂದಿನ ಎನ್‌ಡಿಎ ಮೈತ್ರಿಕೂಟ ಸಭೆಗೆ ಆಹ್ವಾನ ಬರದಿರುವುದರಿಂದ ಕುಮಾರಸ್ವಾಮಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಭೆಯಿಂದ ಅಂತರ ಕಾಯ್ದುಕೊಂಡಿರುವ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ಇಂದಿನ ಸಭೆಯ ನಿರ್ಧಾರ ನೋಡಿಕೊಂಡು ಮೈತ್ರಿ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಹಾಘಟಬಂಧನ್ | ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ ಜಾರಿ: ಕುಮಾರಸ್ವಾಮಿ ಆರೋಪ
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಸೋಮವಾರ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. “ನಾವು ಬಿಜೆಪಿ ಜೊತೆ ಹೋದರೆ ಕೆಲ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕು. ಇದರಿಂದ ಪಕ್ಷಕ್ಕೆ ಹೊಡೆತ ಆಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಚ್ಚೆ ಇಡಬೇಕು” ಎಂದು ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕೋ ಬೇಡವೋ ಎನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.