ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಮಂಡ್ಯ ಸೇರಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನದಲ್ಲಿ ಇಂದು ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, “ಮಂಡ್ಯ, ಕೋಲಾರ, ಹಾಸನ ಲೋಕಸಭಾ ಕ್ಷೇತ್ರವನ್ನು ನಮಗೆ ಕೊಡಲು ತೀರ್ಮಾನ ಮಾಡಿದ್ದಾರೆ. ಕೇಳಿದ್ದಿದ್ದರೆ ಇನ್ನೂ ಎರಡು ಕ್ಷೇತ್ರ ಕೊಡುವವರಿದ್ದರು. ಆದರೆ ಚುನಾವಣಾ ರಾಜಕೀಯ ಮಾಡುವ ಶಕ್ತಿ ನಮಗಿಲ್ಲ” ಎಂದು ತಿಳಿಸಿದರು.
“ಡಾ.ಸಿ.ಎನ್. ಮಂಜುನಾಥ್ ಅವರನ್ನ ಚುನಾವಣೆಗೆ ತರಬೇಕು ಎಂದು ನಾವು ತೀರ್ಮಾನ ಮಾಡಿರಲಿಲ್ಲ. ಮಾಧ್ಯಮಗಳೇ ಅವರಿಗೆ ಪ್ರಚಾರ ನೀಡಿದ್ದರು. ನಮಗೆ ಎಂದಿಗೂ ಇಷ್ಟು ಪ್ರಚಾರವನ್ನ ಮಾಧ್ಯಮಗಳು ಕೊಡಲಿಲ್ಲ. ಬಿಜೆಪಿ ಹೈಕಮಾಂಡ್ ಮಂಜುನಾಥ್ ಸ್ಪರ್ಧಿಸಬೇಕು ಎಂಬ ತೀರ್ಮಾನ ತೆಗೆದುಕೊಂಡಿದೆ” ಎಂದು ಕುಮಾರಸ್ವಾಮಿ ಹೇಳಿದರು.
“ದೇವೇಗೌಡರು ಕೂಡ ನನ್ನ ಅಳಿಯ ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ, ಅನಿವಾರ್ಯವಾಗಿ ಇಂದು ಸ್ಪರ್ಧಿಸಬೇಕಾಗಿದೆ” ಎಂದು ಮಂಜುನಾಥ್ ರಾಜಕೀಯಕ್ಕೆ ಬರುವುದನ್ನು ಖಚಿತಪಡಿಸಿದರು.
ಇದನ್ನು ಓದಿದ್ದೀರಾ? ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ಸಿಎಎಗೆ ವಿರೋಧ: ಗೃಹ ಸಚಿವ ಅಮಿತ್ ಶಾ
“ನೀವು ನಮ್ಮನ್ನ ಸೋಲಿಸಿಲ್ಲ, ನಾವೇ ಮೈ ಮರೆತಿದ್ದೇವೆ. ಪಕ್ಷ ಕಟ್ಟಬೇಕು ಎಂದು ನಿರಂತರ 90 ದಿನ ಶ್ರಮ ಹಾಕಿದೆ. ಎಲ್ಲ ಕಡೆ ಜನ ಸಾಗರ ಸೇರಿತು. ಆದರೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಎಂದು ಗೊತ್ತಿಲ್ಲ. 19ಕ್ಕೆ ಇಳಿದಿದ್ದೇವೆ” ಎಂದು ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬೇಸರ ಹೊರ ಹಾಕಿದರು.
