ಹುಣಸೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನೂ ಜೆಡಿಎಸ್ ಗೆದ್ದುಕೊಂಡಿದ್ದು, ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ.
ಮೈಸೂರು ಜಿಲ್ಲೆಯ ಹಣಸೂರಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಶನಿವಾರ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನೂ ಜೆಡಿಎಸ್ ಗೆದ್ದುಕೊಂಡಿದೆ. ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲದೆ, ತೀವ್ರ ಹಿನ್ನಡೆ ಅನುಭವಿಸಿದೆ.
12 ಸ್ಥಾನಗಳ ಪೈಕಿ 5 ಸಾಲಗಾರರ ಕ್ಷೇತ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ತಲಾ 1 ಕ್ಷೇತ್ರ, ಮಹಿಳಾ ಮೀಸಲು 1 ಕ್ಷೇತ್ರ, ಬಿಸಿಎಂ (ಎ) ಮತ್ತು (ಬಿ) ತಲಾ 1 ಕ್ಷೇತ್ರ, ಸಾಮಾನ್ಯ 2 ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆದ್ದುಕೊಂಡಿದೆ.
ಪ್ರಸ್ತುತ, ಹುಣಸೂರು ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ಶಾಸಕ ಜಿ.ಡಿ ಹರೀಶ್ ಗೌಡ ಪ್ರತಿನಿಧಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ನಡೆದು 2 ವರ್ಷಗಳ ಬಳಿಕ ನಡೆದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಯೂ ಜೆಡಿಎಸ್ ಗೆದ್ದಿದೆ. ಇದು, ಕ್ಷೇತ್ರದಲ್ಲಿ ಜೆಡಿಎಸ್ ಹಿಡಿತ ಪ್ರಬಲವಾಗಿದೆ ಎಂಬುದನ್ನು ಸೂಚಿಸುತ್ತದೆ. ಮುಂದಿನ ಚುನಾವಣೆಗಳಲ್ಲಿಯೂ ಜೆಡಿಎಸ್ ಗೆಲುವಿನ ಹಾದಿಯಲ್ಲಿಯೇ ಸಾಗುತ್ತದೆ ಎಂದು ಜೆಡಿಎಸ್ ನಾಯಕರು ವಿಶ್ವಾಸ ಹೊಂದಿದ್ದಾರೆ.
ಇತ್ತ, 4 ಅಥವಾ 5 ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದ್ದ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ.