ಬಂಡಾಯವೆದ್ದ ನಾಯಕರುಗಳ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಪಕ್ಷದ ವಿರುದ್ಧವಾಗಿ ಹೇಳಿಕೆ ನೀಡಿದ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ 30 ಬಂಡಾಯ ನಾಯಕರುಗಳನ್ನು ಬಿಜೆಪಿ ಮಂಗಳವಾರ ಉಚ್ಚಾಟಿಸಿದೆ.
ಜಾರ್ಖಂಡ್ ರಾಜ್ಯ ಬಿಜೆಪಿ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರ ನಿರ್ದೇಶನದ ಮೇರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಪ್ರದೀಪ್ ವರ್ಮಾ ಅವರು ಬಂಡಾಯ ನಾಯಕರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಹೊರಹಾಕಿದ್ದಾರೆ.
ಜಾರ್ಖಂಡ್‌ನಲ್ಲಿ ಬಿಜೆಪಿ ಘೋಷಿಸಿದ 35ಕ್ಕೂ ಅಧಿಕ ಅಭ್ಯರ್ಥಿಗಳು ಇತರೆ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರಗೊಂಡವರಾಗಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ನಿರಾಶೆಗೆ ಕಾರಣವಾಗಿದೆ. ಇದರಿಂದಾಗಿ ಬಿಜೆಪಿಯಲ್ಲಿ ಹಲವು ನಾಯಕರುಗಳು ಬಂಡಾಯವೆದ್ದಿದ್ದಾರೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಜನತೆಗೆ 25 ಗ್ಯಾರಂಟಿಗಳನ್ನು ಘೋಷಿಸಿದ ಬಿಜೆಪಿ: ಇಲ್ಲಿ ಟೀಕೆ, ಅಲ್ಲಿ ಓಲೈಕೆ!
“ನಮಗೆ ಇರುವ ವಿಶ್ವಾಸಾರ್ಹತೆಯನ್ನು ಅನುಮಾನಿಸಲಾಗುತ್ತಿದೆ. ಆದ್ದರಿಂದ ಹಲವು ನಾಯಕರು ಬಿಜೆಪಿ ತೊರೆದು ಜೆಎಂಎಂ ಅಥವಾ ಕಾಂಗ್ರೆಸ್‌ಗೆ ಸೇರುವ ನಿರ್ಧಾರ ಮಾಡಿದ್ದಾರೆ” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಬಿಜೆಪಿಯಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ರಾಂಚಿಗೆ ತೆರಳಿದ್ದಾರೆ. ಅತೃಪ್ತ ನಾಯಕರುಗಳ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಜೊತೆಗೆ ಶಿವರಾಜ್ ಸಿಂಗ್ ಚೌಹಾಣ್ ಅವರಂತಹ ಹಿರಿಯ ನಾಯಕರು ಅತೃಪ್ತ ನಾಯಕರನ್ನು ಭೇಟಿ ಮಾಡಿದರು. ಇದೀಗ ಬಂಡಾಯ ನಾಯಕರುಗಳನ್ನು ಉಚ್ಚಾಟಿಸಿದೆ.
ಇನ್ನು ಜಾರ್ಖಂಡ್‌ನಲ್ಲಿ ಆಡಳಿತಾರೂಢ ಇಂಡಿಯಾ ಒಕ್ಕೂಟ ‘ಒಂದು ಮತ, ಏಳು ಗ್ಯಾರಂಟಿ’ ಎಂಬ ಏಳು ಗ್ಯಾರಂಟಿಗಳನ್ನು ಘೋಷಿಸಿದೆ. ಹಾಗೆಯೇ ಒಂದು ಮತ, ಏಳು ಗ್ಯಾರಂಟಿ ಸಮುದಾಯಕ್ಕೆ ಪ್ರತ್ಯೇಕ ಹಿಂದುಳಿದ ವರ್ಗ ಕಲ್ಯಾಣ ಸಚಿವಾಲಯದ ಭರವಸೆ ನೀಡಿದೆ. ಬುಡಕಟ್ಟು ಜನಾಂಗದವರನ್ನು ಓಲೈಸುವ ಪ್ರಯತ್ನದಲ್ಲಿದೆ.
ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಬಂದಿರುವ ಬಿಜೆಪಿ ಜಾರ್ಖಂಡ್‌ನಲ್ಲಿ 25 ಗ್ಯಾರಂಟಿಗಳನ್ನು ಘೋಷಿಸಿದೆ. ಜೊತೆಗೆ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
