ಜಾರ್ಖಂಡ್ ಚುನಾವಣೆ | ಬಿಜೆಪಿಗೆ ಸೀಟು ಹಂಚಿಕೆ ಬಿಕ್ಕಟ್ಟು; ಮತ್ತೆ ಗೆಲ್ಲುವುದೇ ‘ಇಂಡಿಯಾ’?

Date:

Advertisements

ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ‘ಎನ್‌ಡಿಎ’ಯಲ್ಲಿ ಸೀಟು ಹಂಚಿಕೆಯ ಕಸರತ್ತು ನಡೆಯುತ್ತಿದೆ. ಆಡಳಿತಾರೂಢ ‘ಇಂಡಿಯಾ’ಕ್ಕಿಂತ ‘ಎನ್‌ಡಿಎ’ ಒಳಗೆ ಸೀಟು ಹಂಚಿಕೆಯು ಭಾರೀ ಬಿಕ್ಕಟ್ಟಾಗಿದೆ. ತಮ್ಮ ಮಿತ್ರಪಕ್ಷಗಳಿಗೆ ಹೆಚ್ಚಿನ ಸೀಟು ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ‘ಎನ್‌ಡಿಎ’ ಒಳಗಿನ ಕಗ್ಗಂಟು ನಿವಾರಣೆಗೆ ಯತ್ನಿಸುತ್ತಿದ್ದಾರೆ.

ಜಾರ್ಖಂಡ್‌ನ ಒಟ್ಟು 81 ಸ್ಥಾನಗಳಿಗೆ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆಯ ಮೊದಲ ಸುತ್ತಿನ ಮಾತುಕತೆ ಮುಗಿದಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 41 ಸ್ಥಾನಗಳು, ಕಾಂಗ್ರೆಸ್ 29, ಎಡ ಪಕ್ಷಗಳು 4 ಹಾಗೂ ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಇತ್ತ, ಎನ್‌ಡಿಎ ಒಳಗೆ ಬಿಜೆಪಿ 68ರಲ್ಲಿ ಸ್ಪರ್ಧಿಸಲು ಸಿದ್ದವಾಗಿದೆ. ಅಷ್ಟೂ ಸೀಟುಗಳಿಗಾಗಿ ಪಟ್ಟು ಹಿಡಿದಿದೆ. ಜೊತೆಗೆ, ತಮ್ಮ ಮೈತ್ರಿ ಪಕ್ಷಗಳಾದ ಸುದೇಶ್ ಮಹ್ತೋ ಅವರ ‘ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ’ಕ್ಕೆ (ಎಜೆಎಸ್‌ಯು) 10 ಕ್ಷೇತ್ರಗಳು, ಜೆಡಿಯುಗೆ 2 ಹಾಗೂ ಎಲ್‌ಜೆಪಿಗೆ 1 ಕ್ಷೇತ್ರ ಬಿಟ್ಟುಕೊಡುವುದಾಗಿ ಬಿಜೆಪಿ ಹೇಳಿಕೊಂಡಿದೆ. ಎನ್‌ಡಿಎ ಒಳಗಿನ ಸೀಟು ಹಂಚಿಕೆಯ ಬಿಕ್ಕಟ್ಟು ಬಗೆಹರಿದರೆ, ಈ ಬಾರಿ ಜಾರ್ಖಂಡ್‌ನಲ್ಲಿ ಅಧಿಕಾರ ಹಿಡಿಯುವ ಭರವಸೆಯನ್ನೂ ಬಿಜೆಪಿ ವ್ಯಕ್ತಪಡಿಸುತ್ತಿದೆ.

Advertisements

ಈ ಮೈತ್ರಿ 2019ರ ಚುನಾವಣೆಯಲ್ಲಿ ಮುರಿದುಬಿದ್ದಿತ್ತು. ಎನ್‌ಡಿಎ ಪಕ್ಷಗಳೊಳಗಿನ ಹೊಂದಾಣಿಕೆ ಕೊರತೆಯಿಂದಾಗಿ ಬಿಜೆಪಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ 79 ಸ್ಥಾನಗಳ ಪೈಕಿ, ಕೇವಲ 25 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. ಇನ್ನು, ಎಜೆಎಸ್‌ಯು 53 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದೂ ಕ್ಷೇತ್ರವನ್ನೂ ಗೆಲ್ಲಲಿಲ್ಲ. ಜೆಡಿಯು ಮತ್ತು ಎಲ್‌ಜೆಪಿ ಯಾವುದೇ ಕ್ಷೇತ್ರದಲ್ಲಿಯೂ ಠೇವಣಿಯನ್ನೂ ಉಳಿಸಿಕೊಳ್ಳಲಿಲ್ಲ.

ಈ ಬಾರಿ ಮೈತ್ರಿಯಲ್ಲಿಯೇ ಚುನಾವಣೆ ಎದುರಿಸಬೇಕು. ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕೆಂದು ಬಿಜೆಪಿ ತಂತ್ರ ರೂಪಿಸುತ್ತಿದೆ. ಸ್ಥಳೀಯ ಪಕ್ಷಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಹೇಗಾದರೂ ಅಧಿಕಾರ ಪಡೆಯಬೇಕೆಂದು ಹವಣಿಸುತ್ತಿದೆ. ಆದರೂ, ಮೈತ್ರಿ ಪಕ್ಷಗಳಿಗೆ ಹೆಚ್ಚು ಸೀಟು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ.

ಬಿಜೆಪಿಯ ಯೋಜನೆಯಂತೆ ಎಜೆಎಸ್‌ಯು ತನ್ನ ನೆಲೆ ಇರುವ ಕ್ಷೇತ್ರಗಳಾದ ಸಿಲ್ಲಿ, ರಾಮ್‌ಗಢ ಮತ್ತು ಲೋಹರ್ಡಗಾದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜೆಡಿಯು ತಮರ್ ಮತ್ತು ಜಮ್ಶೆಡ್‌ಪುರ ಪಶ್ಚಿಮದಲ್ಲಿ ಸ್ಪರ್ಧಿಸಲಿದ್ದು, ಎಲ್‌ಜೆಪಿ ಛತ್ರ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದೆ. ಈ ಕ್ಷೇತ್ರಗಳಲ್ಲಿ 2019ರಲ್ಲಿ ತಮ್ಮ ಪ್ರತಿಸ್ಪರ್ಧಿಗಳು (ಇಂಡಿಯಾ ಮೈತ್ರಿಕೂಟ) ಗಮನಾರ್ಹ ಪ್ರವೇಶ ಪಡೆದಿದ್ದು, ಆ ಕ್ಷೇತ್ರಗಳನ್ನು ಮರಳಿ ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಭಾವಿಸಿದೆ.

ಆದರೆ, ಜಾರ್ಖಂಡ್‌ನಲ್ಲಿ ತನ್ನ ಹಳೆಯ ಮೈತ್ರಿಕೂಟವನ್ನು ಒಟ್ಟುಗೂಡಿಸುವುದೇ ಬಿಜೆಪಿಯ ಮೊದಲ ವಿಜಯವೆಂದು ಹೇಳಲಾಗುತ್ತಿದೆ. ಆಡಳಿತಾರೂಢ ಜೆಎಂಎಂ ನೇತೃತ್ವದ ‘ಇಂಡಿಯಾ’ ಮೈತ್ರಿಯಿಂದ ಅಧಿಕಾರವನ್ನು ಮರಳಿ ಪಡೆಯಲು ಎನ್‌ಡಿಎ ಒಗ್ಗೂಡಬೇಕಿದೆ. ಈ ಏಕತೆಯ ಲಾಭವನ್ನು ಬಿಜೆಪಿ ಪಡೆಯಲಿದೆ.

ಆದಾಗ್ಯೂ, ಇಂಡಿಯಾ ಒಕ್ಕೂಟ ಗಟ್ಟಿಯಾಗಿ ನಿಂತಿದೆ. ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜೈಲಿಗಟ್ಟಿದ ಬಿಜೆಪಿಗೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಬಾರದಂಬ ಶಪಥ ಮಾಡಿದೆ. ಅದಕ್ಕಾಗಿ, ಸೀಟು ಹಂಚಿಕೆಯು ಹೆಚ್ಚು ಕಗ್ಗಂಟಾಗದಂತೆ ಮೈತ್ರಿಯನ್ನು ಮುನ್ನಡೆಸಲು ಕಾಂಗ್ರೆಸ್‌-ಜೆಎಂಎಂ ಮುಂದಾಗಿವೆ. ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಬಿಜೆಪಿಗೆ ಸುಲಭದ ಮಾತಲ್ಲ.

ಈ ನಡುವೆ, ಹೇಮಂತ್ ಅವರು ಜೈಲಿನಲ್ಲಿದ್ದಾಗ ಜೆಎಂಎಂನಿಂದ ಮುಖ್ಯಮಂತ್ರಿಯಾಗಿದ್ದ ಚಂಪೈ ಸೊರೇನ್ ಅವರು ಜೆಎಂಎಂ ತೊರೆದು ಬಿಜೆಪಿ ಸೇರಿದ್ದಾರೆ. ಅವರು ಕೇಸರಿ ಪಾಳೆಯಕ್ಕೆ ಹೋಗಿರುವುದು ಬಿಜೆಪಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸುತ್ತಿದೆ ಎಂಬ ಮಾತುಗಳಿವೆ. ಆದರೆ, ಅವರ ಸೇರ್ಪಡೆಯು ಬಿಜೆಪಿ ಬೆಂಬಲಿಗರಲ್ಲಿ ಅಸಮಾಧಾನ ಸೃಷ್ಟಿಸಿದೆ. ಜೊತೆಗೆ, ಬಿಜೆಪಿ ಧೋರಣೆಗಳು ಬುಡಕಟ್ಟು ಸಮುದಾಯಗಳ ವಿರುದ್ಧವಾಗಿವೆ ಎಂಬ ಭಾವನೆ ಅಲ್ಲಿನ ಪರಿಶಿಷ್ಟ ಪಂಗಡದ (ಎಸ್‌ಟಿ) ಜನರಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಇದು, ಬಿಜೆಪಿಗೆ ಮತ್ತಷ್ಟು ಹೊಡೆತ ನೀಡಲಿದೆ.

ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಲ್ಲಿ 28 ಕ್ಷೇತ್ರಗಳು ಎಸ್‌ಟಿ ಮೀಸಲು ಕ್ಷೇತ್ರಗಳಾಗಿವೆ. ಇಲ್ಲಿ, ಬುಡಕಟ್ಟು ಸಮುದಾಯಗಳ ಪ್ರಾಬಲ್ಯತೆ ಹೆಚ್ಚಾಗಿದೆ. ಈ ಪೈಕಿ, ಕೊಲ್ಗಾನ್ ಪ್ರದೇಶ 14 ಕ್ಷೇತ್ರಗಳಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಈ ಬಾರಿ, ಚಂಪೈ ಸೊರೇನ್ ಅವರ ಪ್ರಭಾವದಿಂದ ಈ ಪ್ರದೇಶದಲ್ಲಿ ಬಿಜೆಪಿ ನೆಲೆ ಕಾಣಲು ಸಾಧ್ಯವಾಗುತ್ತದೆ ಎಂದು ಕೇಸರಿ ಪಕ್ಷವು ನಂಬಿದೆ.  

ಇನ್ನು, ಸಂತಾಲ್ ಪರಗಣದ 18 ಕ್ಷೇತ್ರಗಳು ಕೂಡ ಬಿಜೆಪಿಗೆ ಸವಾಲಾಗಿವೆ. ಇಲ್ಲಿ, ಪ್ರಬಲವಾಗಿರುವ ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಬೆಂಬಲದಿಂದ 2019ರಲ್ಲಿ ಜೆಎಂಎಂ ಬರೋಬ್ಬರಿ 14 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಸ್ಲಿಂ ವಿರೋಧಿ ಧೋರಣೆ ಹೊಂದಿರುವ ಬಿಜೆಪಿ, ಇಲ್ಲಿ ಹೆಚ್ಚು ಮತಗಳನ್ನು ಗಳಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬುಡಕಟ್ಟು ಮತಗಳನ್ನು ವಿಭಜಿಸಿ, ಲಾಭ ಪಡೆಯಲು ಯತ್ನಿಸುತ್ತಿದೆ. ಆದರೂ, ಈ ತಂತ್ರವು ಫಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಉಳಿದಂತೆ, ಪಲಾಮು, ಚೋಟಾನಾಗ್‌ಪುರ ಮತ್ತು ಧನ್‌ಬಾದ್‌ನಂತಹ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ನೆಲೆ ಹೊಂದಿದೆ. 2019ರಲ್ಲಿ ಇಲ್ಲಿನ ಬಹುತೇಕ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿರುವ ಜೆಎಂಎಂ ಜನರ ವಿಶ್ವಾಸ ಗಳಿಸಿದೆ. ವೃದ್ಧಾಪ್ಯವೂ ಸೇರಿದಂತೆ ಎಲ್ಲ ಪಿಂಚಣಿ ಕಾರ್ಯಕ್ರಮಗಳನ್ನು ವಿಸ್ತರಿಸಿದೆ. ‘ಆಪ್ಕೆ ಅಧಿಕಾರ್-ಆಪ್ಕಿ ಸರ್ಕಾರ್ ಆಪ್ಕೆ ದ್ವಾರ್’ ಎಂಬ ಯೋಜನೆಯೊಂದಿಗೆ, ಸರ್ಕಾರಿ ಸೇವೆಗಳನ್ನು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದೆ. ಮೈಯಾ ಸಮ್ಮಾನ್ ಯೋಜನೆಯಡಿ ಹಿಂದುಳಿದ ಮಹಿಳೆಯರಿಗೆ 1,000 ರೂ. ಪ್ರೋತ್ಸಾಹ ಧನವನ್ನೂ ನೀಡುತ್ತಿದೆ. ಈ ಮೊತ್ತವನ್ನು ಮುಂದಿನ ಡಿಸೆಂಬರ್‌ನಿಂದ 2,500 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಇದೆಲ್ಲವೂ ‘ಇಂಡಿಯಾ’ ಮೈತ್ರಿಕೂಟದತ್ತ ಜನರ ಒಲವನ್ನು ಸೆಳೆಯುತ್ತಿದೆ.

ಈ ವರದಿ ಓದಿದ್ದೀರಾ?: ಮತ್ತೆ ಸಿಕ್ಕ ಮಧುಗೆರೆ ನರಸಿಂಹ, ತೇಜಸ್ವಿ ತೀರಿಹೋದದ್ದೇ ಗೊತ್ತಿಲ್ಲ ಮಾರಾಯರೆ ಎನ್ನುವುದೇ?

‘ಇಂಡಿಯಾ’ ಮೈತ್ರಿಕೂಟದ ಈ ನಿರೂಪಣೆ, ಕಾರ್ಯಯೋಜನೆಗಳನ್ನು ಎದುರಿಸಲು ಬಿಜೆಪಿ ಹೆಣಗಾಡುತ್ತಿದೆ. ಜೊತೆಗೆ, ಈ ವರ್ಷದ ಆರಂಭದಲ್ಲಿ ಸೊರೇನ್‌ ಅವರ ಬಂಧನವು ಜೆಎಂಎಂ ಪರವಾಗಿ ಸಹಾನುಭೂತಿಯ ಅಲೆಯನ್ನು ಹುಟ್ಟುಹಾಕಿದೆ. ಇದೇ ಸಹಾನುಭೂತಿಯ ಅಲೆಯಲ್ಲಿ ಎಲ್ಲ ಐದು ಎಸ್‌ಟಿ ಮೀಸಲು ಲೋಕಸಭಾ ಸ್ಥಾನಗಳನ್ನು ‘ಇಂಡಿಯಾ’ ಬಣ ಗೆದ್ದುಕೊಂಡಿದೆ. ಇದೇ ನಿರೂಪಣೆಯು ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ಸೊರೇನ್ ಅವರ ಜನಪ್ರಿಯತೆ ಮತ್ತು ಅವರ ಪರವಾದ ಸಹಾನುಭೂತಿಯನ್ನು ಎದುರಿಸಲು ಬಿಜೆಪಿ ಹೊಸ ಮಾರ್ಗವನ್ನು ಹುಡುಕಬೇಕಿದೆ.

ಈ ತಂತ್ರದಲ್ಲಿ, ಹೇಮಂತ್ ಅವರ ಸೊಸೆ ಸೀತಾ ಸೊರೇನ್ ಮತ್ತು ಚಂಪೈ ಸೊರೇನ್ ಅವರು ಬಿಜೆಪಿ ಸೇರಿರುವುದು ಜೆಎಂಎಂ ವಿರುದ್ಧದ ಪ್ರಚಾರಕ್ಕೆ ಬಿಜೆಪಿಗೆ ಶಕ್ತಿ ನೀಡಲಿದೆ. ಸೀತಾ ಸೊರೇನ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೂ, ಅವರು ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಜೆಎಂಎಂಗೆ ಹೋಗಬಹುದಾದ ಮತಗಳನ್ನು ವಿಭಜಿಸುತ್ತಾರೆ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ.

ಜನಪರ ಯೋಜನೆ, ಸಹಾನುಭೂತಿ, ಪಕ್ಷಾಂತರ ಹಾಗೂ ಅಸಮಾಧಾನಗಳು ಜಾರ್ಖಂಡ್‌ನಲ್ಲಿ ಪ್ರಮುಖ ಚುನಾವಣಾ ವಿಷಯಗಳಾಗಿ ಕಾಣಿಸಿಕೊಳ್ಳುತ್ತಿವೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ಈ ಬಾರಿ ಭಾರೀ ಪೈಪೋಟಿ ನಡೆಯಲಿದೆ ಎಂಬುದು ಕಂಡುಬರುತ್ತಿದೆ. ಹೀಗಾಗಿ, ಎರಡೂ ಮೈತ್ರಿಕೂಟಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಕಾರ್ಯತಂತ್ರ ಹೆಣೆಯುತ್ತಿವೆ. ಬಿಜೆಪಿಯು ಆಂತರಿಕ ಬಿರುಕುಗಳನ್ನು ಶಮನ ಮಾಡುವುದು ಮತ್ತು ಆಡಳಿತಾರೂಢ ಪಕ್ಷಗಳ ವಿರುದ್ಧ ಜನಭಿಪ್ರಾಯ ರೂಪಿಸಲು ಮುಂದಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X