ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿಗೆ ನೋಟಿಸ್ ಎಂದಾಕ್ಷಣ ರೈತರು ಆತಂಕಕ್ಕೆ ಒಳಗಾಗೋದು ಸಹಜ. ಆದರೆ, ಅದನ್ನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳೋದು; ಅದಕ್ಕಾಗಿ ಜಂಟಿ ಸಂಸದೀಯ ಸಮಿತಿಯ ಹೆಸರು ಎತ್ತಿಕೊಳ್ಳೋದು, ಸರ್ಕಾರಿ ಖರ್ಚಿನಲ್ಲಿ ದುರುದ್ದೇಶದ ಕೆಲಸ ಮಾಡೋದು, ಅಂತಿಮವಾಗಿ ನಾವು ಯಾವುದೋ ಜಮೀನನ್ನ ಇನ್ಯಾರಿಗೋ ಕೊಡುವ ಕಾನೂನು ತರುತ್ತೇವೆ ಎಂಬಂತಹ ಹೇಳಿಕೆ ಕೊಡುವುದು ಬಿಜೆಪಿಗರ ಜಾಯಮಾನವಾಗಿದೆ. ಜನ ಎಚ್ಚೆತ್ತುಕೊಳ್ಳಬೇಕಾಗಿದೆ...
ನವೆಂಬರ್ 7ರಂದು ಕರ್ನಾಟಕದಲ್ಲಿ ನಡೆದ ಒಂದು ಬೆಳವಣಿಗೆ ಮಾಮೂಲಿ ರಾಜಕೀಯ ಪ್ರಹಸನ ಅಷ್ಟೇ ಅನ್ನುವ ರೀತಿ ಮರೆಯಾಯಿತು. ಆದರೆ, ಅದೊಂದು ಗಂಭೀರವಾದ, ಈ ದೇಶದ ಸಂಸತ್ತನ್ನು ಅವಮಾನಿಸಿದ ಮತ್ತು ಮುಂದಿನ ದಿನಗಳಲ್ಲಿ ಹಿಂದು ದೇವಸ್ಥಾನಗಳನ್ನು ಹಾಗೂ ರೈತರನ್ನು ಭಾರೀ ಇಕ್ಕಟ್ಟಿಗೆ ದೂಡುವ ವಿದ್ಯಮಾನವಾಗಿತ್ತು.
ಸಂಸತ್ತಿನಲ್ಲಿ ವಕ್ಫ್ ಮಸೂದೆಗೆ ತಿದ್ದುಪಡಿ ತರಬೇಕೆಂದು ನರೇಂದ್ರ ಮೋದಿ ಸರ್ಕಾರ ಹೊರಟಿತ್ತು. ಅದರಲ್ಲಿ ಇರುವ ಅಂಶಗಳು ಸಂವಿಧಾನದ ಆಶಯಕ್ಕೆ ಮತ್ತು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ವಿರೋಧ ಪಕ್ಷಗಳು ತಕರಾರು ಎತ್ತಿದ್ದವು. ಹಾಗಾಗಿ ಅದನ್ನ ಪರಿಶೀಲಿಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚನೆ ಮಾಡಲಾಗಿತ್ತು. ಅದರಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯಿಂದ ಸದಸ್ಯರನ್ನು ಸೇರಿಸಿ, ಬಿಜೆಪಿಯ ಹಿರಿಯ ಸಂಸದ ಜಗದಂಬಿಕಾ ಪಾಲ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಈ ಜಗದಂಬಿಕಾ ಪಾಲ್ ಯಾರು ಅನ್ನುವುದು ಬಹಳ ಸ್ವಾರಸ್ಯಕರ ಸಂಗತಿ. ಈ ವ್ಯಕ್ತಿ ದೇಶದಲ್ಲಿ ಅತ್ಯಂತ ಕಡಿಮೆ ಅವಧಿ – ಅಂದರೆ ಒಂದು ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದವರು. ಉತ್ತರ ಪ್ರದೇಶದಲ್ಲಿ ಅವರ ಪಕ್ಷ, ‘ಲೋಕತಾಂತ್ರಿಕ ಕಾಂಗ್ರೆಸ್’ ಬಿಜೆಪಿಯ ಕಲ್ಯಾಣಸಿಂಗ್ ಅವರಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದು, ಒಂದು ದಿನಕ್ಕೆ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಗೆ ಕೈ ಕೊಟ್ಟು ಸರ್ಕಾರ ಉರುಳಿಸಿ, ಒಂದೇ ದಿನದಲ್ಲಿ ಅಲಹಾಬಾದ್ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದ ಈ ಪಾಲ್, ನಂತರ ಅದೇ ಬಿಜೆಪಿಗೆ ಸೇರಿಕೊಂಡರು. ಇದೀಗ, ಅವರನ್ನು ಜೆಪಿಸಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಇದ್ದಕ್ಕಿದ್ದ ಹಾಗೆ ಪಾಲ್ ಅವರು ಗುರುವಾರ ಬಿಜಾಪುರಕ್ಕೆ ಬಂದರು. ಅವರು ಬಂದದ್ದು ಗೋಲ್‌ಗುಂಬಸ್ ನೋಡುವುದಕ್ಕೆ ಅಲ್ಲ. ಬದಲಿಗೆ, ಬೇರೆ ಉದ್ದೇಶಕ್ಕೆ. ಅವರ ಉದ್ದೇಶ ಏನಾಗಿತ್ತು ಅನ್ನುವುದೇ ದೊಡ್ಡ ಸಮಸ್ಯೆ.
ಈ ಜೆಪಿಸಿ ಎಲ್ಲಿಗಾದರೂ ಹೋಗಬೇಕೆಂದರೆ, ಸಾಮಾನ್ಯವಾಗಿ ಎಲ್ಲ ಸದಸ್ಯರೂ ಒಟ್ಟು ಸೇರಿ ಹೋಗುತ್ತಾರೆ. ಕನಿಷ್ಠ ಅವರೆಲ್ಲರಿಗೂ ಮಾಹಿತಿಯಾದರೂ ಇರುತ್ತದೆ. ಸದರಿ ಜೆಪಿಸಿಯಲ್ಲಿ ಕರ್ನಾಟಕದ ಇಬ್ಬರು ಸದಸ್ಯರಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಡಾ. ಸಯ್ಯದ್ ನಾಸಿರ್ ಹುಸೇನ್. ತೇಜಸ್ವಿ ಸೂರ್ಯ ಅವರು ಜಗದಂಬಿಕಾ ಪಾಲ್ ಜೊತೆಗೇ ಇದ್ದರು. ಹಾಗಾಗಿ ಅವರಿಗೆ ಮಾಹಿತಿ ಇತ್ತು ಎಂದಾಯಿತು. ಆದರೆ, ಮತ್ತೊಬ್ಬ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಅವರಿಗೆ ಮಾಹಿತಿಯೇ ಇರಲಿಲ್ಲ. ಇದನ್ನು ಸ್ವತಃ ಹುಸೇನ್ ಅವರೇ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
ಈದಿನ.ಕಾಮ್ ಹುಸೇನ್ ಅವರನ್ನು ಮಾತನಾಡಿಸಿದೆ. ಅವರು ಹೇಳುವಂತೆ, ಅವರಿಗೆ ಮಾತ್ರವಲ್ಲ, ಜೆಪಿಸಿಯ ಯಾವೊಬ್ಬ ಸದಸ್ಯರಿಗೂ ಜಗದಂಬಿಕಾ ಪಾಲ್ ಅವರಾಗಲೀ, ಅವರ ಕಚೇರಿಯಿಂದಾಗಲೀ, ಸಂಸತ್ತಿನ ಕಚೇರಿಯಿಂದ ಆಗಲಿ ಯಾವುದೇ ಮಾಹಿತಿ ನೀಡಲಾಗಿಲ್ಲ. ಈ ಜೆಪಿಸಿಯಲ್ಲಿ ಹಲವಾರು ಪಕ್ಷಗಳ ಸದಸ್ಯರು ಇರುತ್ತಾರೆ. ಅವರಾರಿಗೂ ಮಾಹಿತಿ ನೀಡದೇ ಇದ್ದಕ್ಕಿದ್ದಂತೆ ಜೆಪಿಸಿ ಅಧ್ಯಕ್ಷರು ಇನ್ನೊಬ್ಬ ವಿವಾದಿತ ಸಂಸದ, ಅದರಲ್ಲೂ ವಕ್ಫ್ ವಿಚಾರದಲ್ಲಿ ಈಗಾಗಲೇ ಸುಳ್ಳು ಸುದ್ದಿ ಹರಿಬಿಟ್ಟು, ಎಫ್‌ಐಆರ್ ದಾಖಲಿಸಿಕೊಂಡಿರುವ ತೇಜಸ್ವಿ ಸೂರ್ಯರೊಂದಿಗೆ ಹೋಗುವುದು ಜೆಪಿಸಿ ಕೆಲಸ ಹೇಗಾಗುತ್ತದೆ? ಇದು ಪ್ರಶ್ನೆ.
ನಾನಾ ಸುಳ್ಳುಗಳ ಮೂಲಕ ವಿವಾದದಲ್ಲೇ ಇರುವ ತೇಜಸ್ವಿ ಸೂರ್ಯ– ಒಬ್ಬನನ್ನೇ ಕರೆದುಕೊಂಡು ಜೆಪಿಸಿ ಅಧ್ಯಕ್ಷರು ಯಾರಿಗೂ ಮಾಹಿತಿ ಕೊಡದೇ ಕರ್ನಾಟಕಕ್ಕೆ ಬಂದುಬಿಟ್ಟರು. ಇವರ ಟೂರ್ ಪ್ರೋಗ್ರಾಮಿನಲ್ಲಿ ಇದನ್ನ ಅಧಿಕೃತ ಜೆಪಿಸಿ ಕಾರ್ಯಕ್ರಮ ಅನ್ನುವ ಥರಾ ಬಿಂಬಿಸಿಕೊಂಡಿದ್ದಾರೆ. ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಮತ್ತು ವಿಜಯಪುರದಿಂದ ಬೆಳಗಾವಿಗೆ EC 135 ಹೆಲಿಕಾಪ್ಟರಿನಲ್ಲಿ ಓಡಾಡಿದ್ದಾರೆ. ಇದಕ್ಕೆ ಯಾರು ದುಡ್ಡು ಕೊಟ್ಟರು? ತಮ್ಮ ಖಾಸಗಿ ಕಾರ್ಯಕ್ರಮಕ್ಕೇನಾದರೂ ಸರ್ಕಾರಿ ಹಣ ಬಳಸಿದ್ದಾರಾ ಅಂತ ತನಿಖೆ ಮಾಡಬೇಕು. ಇರಲಿ.
ವಿಜಯಪುರಕ್ಕೆ ಬಂದವರು ನೇರವಾಗಿ ವಕ್ಫ್ ವಿಚಾರದಲ್ಲಿ ಧರಣಿ ಕೂತಿರೋ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಬಳಿ ಹೋದರು. ಈ ಇಬ್ಬರೂ ಯಾವ ಸಂದರ್ಭದಲ್ಲಿ ಮಾತ್ರ ಆಕ್ಟೀವ್ ಆಗಿರುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಅವರಿಬ್ಬರೂ ಈಗ ರೈತರ ಪರವೆಂಬ ಮುಖವಾಡ ಹಾಕಿಕೊಂಡು ಕುಳಿತಿದ್ದಾರೆ. ಆದರೆ, ಅದೇ ವಿಜಯಪುರ ಜಿಲ್ಲೆಯಲ್ಲಿ ಅದೇ ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ರೈತರಿಗೆ ನೋಟಿಸ್ ಸಹ ಕೊಡದೇ ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ಬಿಜೆಪಿ ಸರ್ಕಾರ ತಿದ್ದಿದಾಗ ಈ ಇಬ್ಬರೂ ರೈತರ ಪರವಾಗಿ ಇಲ್ಲದ ಕಾಳಜಿ ಈಗ ಯಾಕೆ ಹುಟ್ಟಿಕೊಂಡಿತು?

ಅಷ್ಟೇ ಅಲ್ಲ, ಇದೇ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಒಂದು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಅದರಲ್ಲಿ ಸ್ಥಳೀಯ ಶಾಸಕರಾದ ಯತ್ನಾಳ್ ಅವರ ಹೆಸರೇ ಇರಲಿಲ್ಲ. ಅವರು ಕೂಗಾಡಿದ ಬಳಿಕ, ಅವರ ಹೆಸರನ್ನು ಸೇರಿಸಲಾಯಿತು. ಅವರು ಈಗ ಧರಣಿ ನಡೆಸುತ್ತಿದ್ದಾರೆ. ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಮುನಿಸಿಕೊಂಡಿರುವ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆಯೂ ಸೇರಿಕೊಂಡಿದ್ದಾರೆ. ಇದೀಗ, ಆ ಜಾಗಕ್ಕೆ ಜೆಪಿಸಿ ಹೆಸರಿನಲ್ಲಿ, ಜೆಪಿಸಿ ಅಲ್ಲದ ಸಮಿತಿ ಬಂದಿದೆ. ‘ನಾವೆಲ್ಲ ನೋಡ್ಕೋತೀವಿ ನೀವು ಎದ್ದೇಳಿ’ ಅನ್ನುತ್ತಾರೆ. ನೀವು ಏನು ನೋಡ್ಕೊಳೋದು? ನಿಮ್ಮ ಜೆಪಿಸಿ ಏನು ತೀರ್ಮಾನ ಕೊಡಬೇಕು ಅನ್ನೋದನ್ನ ಜೆಪಿಸಿ ತಾನೇ ತೀರ್ಮಾನ ಮಾಡಬೇಕಿರುವುದು. ಬಹಳ ವಿಚಿತ್ರವಾಗಿದೆ ಇದು.
ಇನ್ನೂ ಅಪಾಯಕಾರಿಯಾದ ವಿಚಾರ ಬೇರೆ ಇದೆ. ಅದೇನೆಂದರೆ, ಈ ಅನಧಿಕೃತ ಜೆಪಿಸಿ ಜನ ಅಲ್ಲಿಗೆ ಬಂದು ರೈತರು, ಮಠ ಮಂದಿರಗಳಿಗೆ ತೊಂದರೆಯಾಗದ ಹಾಗೆ ನಾವು ವಕ್ಫ್ ಕಾನೂನನ್ನು ಬದಲಿಸುತ್ತೀವಿ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಅಂದರೆ, ಅವರು ಮನಾಮನಿ ಸುಳ್ಳು ಕತೆ ಕಟ್ತಾ ಇದಾರೆ. ಮೊದಲನೆಯದಾಗಿ ಬಿಜಾಪುರದಲ್ಲಿ ವಕ್ಫ್‌ನ ಶೇ.90ರಷ್ಟು ಆಸ್ತಿ ಲ್ಯಾಂಡ್ ಟ್ರಿಬ್ಯುನಲ್‌ನಲ್ಲಿ ರೈತರ ಕೈಗೆ ಹೋಗಿದೆ. ಆದರೆ, ಇವರು ರೈತರ ಆಸ್ತಿ ಉಳಿಸುತ್ತೇವೆ ಎಂದಿದ್ದಾರೆ. ಹದಿನೈದು ದಿನ ಸತತವಾಗಿ ಟೀವಿಲಿ, ಪತ್ರಿಕೇಲಿ, ವಾಟ್ಸಾಪ್ ಯೂನಿವರ್ಸಿಟಿಲಿ ಸುಳ್ಳು ಬಿತ್ತಿ, ಅದರ ಆಧಾರದ ಮೇಲೆ ಒಂದು ಸಂಸದೀಯ ಸಮಿತಿ ಬೀದೀಲಿ ನಿಂತು– ನಾವು ನಮಗಿಷ್ಟ ಬಂದ ಹಾಗೆ ಕಾಯ್ದೆ ಬದಲಿಸುತ್ತೇವೆ ಎಂದು ಹೇಳುವುದಕ್ಕೆ ಅವರಿಗೆ ಅಧಿಕಾರ ಕೊಟ್ಟವರು ಯಾರು?
ನಾವು ವಕ್ಫ್ ಆಸ್ತಿಯನ್ನು ವಶಪಡಿಸಿಕೊಳ್ಳುತ್ತೇವೆ. ರಾಷ್ಟ್ರೀಕರಣ ಮಾಡುತ್ತೇವೆ ಎಂದು ಇವರು ಹೇಳುತ್ತಿದ್ದಾರೆ. ವಕ್ಫ್ ಎಂದರೆ ಅವರು ಏನೆಂದು ಅರ್ಥ ಮಾಡಿಕೊಂಡಿದ್ದಾರೆ. ಯಾರ ಆಸ್ತಿ ಅದು? ಯಾರೋ ಧರ್ಮಾತ್ಮರು ಕೊಟ್ಟ ಆಸ್ತಿ. ಅದನ್ನು ಬಿಜೆಪಿ ತಮಗಿಷ್ಟ ಬಂದ ರೀತಿಯಲ್ಲಿ ವಶಕ್ಕೆ ಪಡೆಯಲು, ರಾಷ್ಟ್ರೀಕರಣ ಮಾಡಲು ಸಾಧ್ಯವೇ? ಒಂದು ವೇಳೆ ಮಾಡುತ್ತಾರೆ ಅಂತಲೇ ಭಾವಿಸೋಣ. ಇವರದ್ದೇ ಮೈತ್ರಿ ಪಕ್ಷದ ಆಂಧ್ರ ಸರ್ಕಾರ, ದೇವಸ್ಥಾನದ ಜಾಗ 87,000 ಎಕರೆ ಒತ್ತುವರಿ ಆಗಿದೆ, ಅದನ್ನ ಮರಳಿ ಪಡೆಯುತ್ತೇವೆ ಎಂದಿದೆ. ಈಗ, ಅಲ್ಲಿ ಬಿಜೆಪಿಗರು ರೈತರ ಪರವಾಗಿ ನಿಲ್ಲುವರೋ? ಅಥವಾ ದೇವಸ್ಥಾನಗಳ ಪರವಾಗಿ ನಿಲ್ಲುವರೋ? ಕರ್ನಾಟಕದಲ್ಲಿ ಇನಾಂ ರದ್ದತಿ ಕಾಯ್ದೆ ಮತ್ತು ಉಳುವವನಿಗೇ ಭೂಮಿ ಕಾಯ್ದೆಯಡಿ ಲಕ್ಷಾಂತರ ಎಕರೆ ಜಾಗ ರೈತರಿಗೆ ಹೋಗಿದೆ. ಅವನ್ನೆಲ್ಲ ಇವರು ಮತ್ತೆ ಕಿತ್ತುಕೊಳ್ಳುತ್ತಾರಾ? ಏಕಕಾಲದಲ್ಲಿ ಇದು ಧರ್ಮ ವಿರೋಧಿ ಮತ್ತು ರೈತ ವಿರೋಧಿ ಕ್ರಮ. ರೈತರಿಗೆ ಭೂಮಿ ಕೊಡೋದೇ ಧರ್ಮ. ಆದರೆ ಸುಳ್ಳು ಹೇಳೋದು ಧರ್ಮ ಅಲ್ಲ. ಅಂತಹ ಸುಳ್ಳು ಹೇಳ್ತಿರೋದು ಕಳೆದ 15-20 ದಿನಗಳಲ್ಲಿ ಸಿಕ್ಕಾಪಟ್ಟೆ ಆಗಿದೆ. ಜನ ನಿಜಕ್ಕೂ ನಿಜ ಅಂತ ನಂಬುವ ಹಾಗೆ ಮಾಡಿದ್ದಾರೆ. ದಿನಕ್ಕೊಂದು ಕಡೆ – ಅದೂ ವಕ್ಫ್ ಅಂತೆ, ಇದೂ ವಕ್ಫ್ ಅಂತೆ ಎಂದು ತೋರಿಸುತ್ತಿದ್ದಾರೆ. ಮಾಧ್ಯಮಗಳೂ ಸುದ್ದಿ ಮಾಡುತ್ತಿವೆ.
ನಿಜ ಏನು ಅಂದರೆ, ಈ ರಾಜ್ಯದಲ್ಲಿ ಲಕ್ಷಾಂತರ ಎಕರೆ ಜಾಗದ ಪಹಣಿಯಲ್ಲಿ ಅಥವಾ ಖಾತೆಯಲ್ಲಿ ಅನುಭೋಗದಾರರು ಯಾರೋ ಇದ್ದಾರೆ. ಹೆಸರು ಇನ್ಯಾರದ್ದೋ ಇದೆ. ಅದರಲ್ಲಿ ದೇವಸ್ಥಾನದ್ದು ಇದೆ, ವಕ್ಫ್‌ದು ಇದೆ, ಸರ್ಕಾರದ್ದು ಇದು, ಸರ್ಕಾರದಲ್ಲೂ ಯಾವ್ಯಾವುದೋ ಇಲಾಖೆ ಹೆಸರು ಇದೆ, ರೈಲ್ವೇದು ಇದೆ, ನಿಮಗೆ ಊಹಿಸಿಕೊಳ್ಳೋಕೆ ಆಗದಷ್ಟು ರೀತಿಯ ವ್ಯತ್ಯಾಸ ಇದೆ. ಅವೆಲ್ಲವನ್ನೂ ಪ್ರತೀ ದಿನ ಪೇಪರ್‌ನಲ್ಲಿ, ಟೀಟಿಯಲ್ಲಿ, ವಾಟ್ಸಾಪ್‌ನಲ್ಲಿ ಸುದ್ದಿ ಮಾಡ್ತಾರಾ? ಇನ್ನು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆಯೇ ಲಕ್ಷ ಲಕ್ಷ ಎಕರೆಗಳ ವಿವಾದ ಇದೆ. ಅದರಿಂದ ರೈತರೂ ಹೈರಾಣಾಗುತ್ತಿದ್ದಾರೆ. ಯಾವ ಬಿಜೆಪಿಯವರೂ ಅಲ್ಲಿಗೆ ಹೋಗಿಲ್ಲ. ಬದಲಿಗೆ ಸುಳ್ಳಿನ ಮೇಲೊಂದು ಸುಳ್ಳು ಕಟ್ಟುತ್ತಿದ್ದಾರೆ. ಇದು ಜನರಿಗೆ ಅರ್ಥವಾಗದೇ ಇರದು.
ಅಂತಹದೊಂದು ಸುಳ್ಳನ್ನು ಇದೇ ತೇಜಸ್ವಿ ಸೂರ್ಯ, ಇದೇ ಜೆಪಿಸಿ ಸದಸ್ಯ, ಇದೇ ಅನಧಿಕೃತ ಜೆಪಿಸಿ ಬಂದಾಗಲೇ ಹೇಳಿದ್ದೂ ಆಗಿದೆ. 2022ರಲ್ಲಿ ಬೊಮ್ಮಾಯಿ ಸರ್ಕಾರ ಇದ್ದಾಗ, ಬೊಮ್ಮಾಯಿಯವರ ಜಿಲ್ಲೆ ಹಾವೇರಿಯಲ್ಲಿ, ಐಸಿಐಸಿಐ ಬ್ಯಾಂಕಿನಿಂದ ನಾಲ್ಕೈದು ಲಕ್ಷ ಸಾಲ ತಗೊಂಡು ತೀರಿಸೋಕಾಗದೆ ಸಂಕಷ್ಟದಿಂದ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ತನಿಖೆ ಆಗಿ, ಆತನದ್ದೇ ಹೆಸರಿನಲ್ಲಿ ಇದ್ದ ಜಮೀನಿನ ಸರ್ವೆ ನಂಬರ್ ಲೆಕ್ಕಕ್ಕೇ ಅಧಿಕಾರಿಗಳು ಪರಿಹಾರವನ್ನೂ ಮಂಜೂರು ಮಾಡಿದ್ದರು. ಹೀಗಿದ್ದರೂ, ಮೊನ್ನೆ ಮೊನ್ನೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಿ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಅದನ್ನೇ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ರೀ-ಟ್ವೀಟ್ ಮಾಡಿದ್ದರು. ಆದರೆ, ಅದು ಸುಳ್ಳು ಎಂಬುದು ಕ್ಷಣಾರ್ಧದಲ್ಲೇ ಬಟಾಬಯಲಾಯಿತು.
ಈ ವರದಿ ಓದಿದ್ದೀರಾ?: ಕೋವಿಡ್ ಹಗರಣ | 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
ಈ ವಕ್ಫ್ ವಿಚಾರದಲ್ಲಿ ಬಹಳ ಜನ ತಪ್ಪು ತಿಳಿದುಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಕಡೆ ವಕ್ಫ್ ಅಂತ ಇತ್ತು. ಅದನ್ನೇ ದಾಳವಾಗಿಟ್ಟುಕೊಂಡು ಬಿಜೆಪಿಗರು ಜನರಲ್ಲಿ ಗಾಬರಿ ಹುಟ್ಟಿಸುವ ಕೆಲಸ ಮಾಡಿದ್ದಾರೆ.
ತಾವು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿನ ಕುರಿತು ರೈತರು ಆತಂಕಕ್ಕೆ ಒಳಗಾಗೋದು ಸಹಜ. ಆದರೆ, ಅದನ್ನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಳ್ಳೋದು; ಅದಕ್ಕಾಗಿ ಜಂಟಿ ಸಂಸದೀಯ ಸಮಿತಿಯ ಹೆಸರು ಎತ್ತಿಕೊಳ್ಳೋದು, ಸರ್ಕಾರಿ ಖರ್ಚಿನಲ್ಲಿ ದುರುದ್ದೇಶದ ಕೆಲಸ ಮಾಡೋದು, ಅಂತಿಮವಾಗಿ ನಾವು ಯಾವುದೋ ಜಮೀನನ್ನ ಇನ್ಯಾರಿಗೋ ಕೊಡುವ ಕಾನೂನು ತರುತ್ತೇವೆ ಎಂಬಂತಹ ಹೇಳಿಕೆ ಕೊಡಬಹುದೇ? ನಾಳೆ ಇದು ಯಾರ್‍ಯಾರ ಜಮೀನು, ಆಸ್ತಿಗೆ ಕುತ್ತು ತರಬಹುದು ಅನ್ನುವ ಪರಿಜ್ಞಾನ ಅವರಿಗೆ ಇದೆಯಾ? ಹೇಳೋಕಾಗಲ್ಲ.
ಇದೇ ಅಪಾಯ. ಇದನ್ನೇ ಸಂವಿಧಾನ ಬದಲಿಸೋದು ಅನ್ನುವುದು. ಅದನ್ನ ಹಂತ ಹಂತವಾಗಿ, ಬೇರೆ ಬೇರೆ ಹೆಸರಿನಲ್ಲಿ ಮಾಡಲಾಗುತ್ತಿದೆ. ಅಂತಿಮವಾಗಿ ಇದು ದೇಶದಲ್ಲಿ ಒಂದು ಅರಾಜಕತೆ ತರುತ್ತದೆ. ಅಂತಹ ಅರಾಜಕತೆ, ಅದರಲ್ಲೂ ಸುಳ್ಳಿನ ಮೇಲೆ ನಿಂತಿರೋ ಅರಾಜಕತೆ ದೇಶವನ್ನ ಉಳಿಸುವುದಿಲ್ಲ. ನಿನ್ನೆ ಬಿಜಾಪುರದಲ್ಲಿ ನಡೆದದ್ದು ಅಂತಹದ್ದೇ ಒಂದು ವಿದ್ಯಮಾನ. ಈ ರಾಜ್ಯದ ಜನರು ಇದರ ಬಗ್ಗೆ ಎಚ್ಚರದಿಂದಿರುವ ಅಗತ್ಯ ಇದೆ. ಇಲ್ಲದೇ ಇದ್ದರೆ, ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆಗೆದಂತೆ ತೆಗೆದು ಅವರು ಎಲ್ಲೋ ನೆಗೆದು ಸೇಫ್ ಆಗಿಬಿಡುತ್ತಾರೆ. ಸಾಮಾನ್ಯ ಜನರು ಸಿಕ್ಕಾಕಿಕೊಳ್ಳುತ್ತಾರೆ. ಆದರೆ, ರಾಜ್ಯದ ಜನರಿಗೆ ಇದು ಅರ್ಥವಾಗುತ್ತದೆ; ಹಿಂದೆಯೂ ಆಗಿದೆ. ಈ ಅರಾಜಕತೆಯನ್ನ ನಮ್ಮ ರಾಜ್ಯದಿಂದ ಹೊರಗೆ ಹಾಕುವ ಅಗತ್ಯವಿದೆ.