‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಕೆಳ ನ್ಯಾಯಾಲಯ ನೀಡಿದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರಾದ ಹೇಮಂತ್ ಎಂ ಪ್ರಚ್ಚಕ್ ಸೇರಿ 23 ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ವರ್ಗಾವಣೆಗೆ ಶಿಫಾರಸು ಮಾಡಿದೆ.
ಪ್ರಚ್ಚಕ್ ಅವರನ್ನು ಗುಜರಾತ್ ಹೈಕೋರ್ಟ್ ನಿಂದ ಬಿಹಾರದ ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ.
ಈ ಹಿಂದೆ 2002ರ ಗುಜರಾತ್ ಗಲಭೆ ಪ್ರಕರಣದ ಆರೋಪಿಯಾಗಿದ್ದ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಸಮರ್ಥಿಸುವ ವಕೀಲರ ತಂಡದಲ್ಲಿ ನ್ಯಾಯಮೂರ್ತಿ ಪ್ರಚ್ಚಕ್ ಒಬ್ಬರಾಗಿದ್ದರು.
ನ್ಯಾಯಮೂರ್ತಿ ಪ್ರಚ್ಚಕ್ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು ಮತ್ತು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ತಂಡದಲ್ಲಿ ಗುಜರಾತ್ ಸರ್ಕಾರದ ಸಹಾಯಕ ವಕೀಲರಾಗಿ ಕೆಲಸ ಮಾಡಿದ್ದರು.
2015 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಒಂದು ವರ್ಷದ ನಂತರ, ಅವರನ್ನು ಗುಜರಾತ್ ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಪರ ವಕೀಲರಾಗಿ ನೇಮಿಸಲಾಯಿತು. ಅವರು 2019 ರವರೆಗೆ ಈ ಹುದ್ದೆಯಲ್ಲಿದ್ದರು. 2021ರಲ್ಲಿ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಬಗ್ಗೆ ಅಮಿತ್ ಶಾ ಸುಳ್ಳು ಆರೋಪ: ಕಾಂಗ್ರೆಸ್ ಸಹಾಯ ಸ್ಮರಿಸಿದ ರೈತ ಮಹಿಳೆ ಕಲಾವತಿ
ಮಾನನಷ್ಟ ಮೊಕದ್ದಮೆಯಲ್ಲಿನ ಶಿಕ್ಷೆಯ ವಿರುದ್ಧ ರಾಹುಲ್ ಗಾಂಧಿಯ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಮೂರ್ತಿ ಗೀತಾ ಗೋಪಿ ಮತ್ತು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಸಮೀರ್ ದವೆ ಸೇರಿದಂತೆ ಗುಜರಾತ್ ಹೈಕೋರ್ಟ್‌ನ ಇತರ ಮೂವರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ಸಮೀರ್ ದವೆ ಅವರನ್ನು ರಾಜಸ್ಥಾನ ಹೈಕೋರ್ಟ್‌ಗೆ ಮತ್ತು ನ್ಯಾಯಮೂರ್ತಿ ಗೀತಾ ಗೋಪಿ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಗುಜರಾತ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಾಧೀಶ ನ್ಯಾಯಮೂರ್ತಿ ಅಲ್ಪೇಶ್ ವೈ ಕೊಗ್ಜೆ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಇದಲ್ಲದೆ ಅಲಹಾಬಾದ್, ಗುಜರಾತ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಆಗಸ್ಟ್ 3 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿತು.