ಪ್ರತಿಯೊಂದು ವ್ಯವಸ್ಥೆಯು ಎಷ್ಟೇ ಬಲಿಷ್ಠವಾಗಿದ್ದರೂ, ವೃತ್ತಿಪರ ದುಷ್ಕೃತ್ಯದಿಂದ ಸಮಸ್ಯೆಗಳಿಗೆ ಗುರಿಯಾಗುತ್ತದೆ. ದುಃಖಕರವೆಂದರೆ, ನ್ಯಾಯಾಂಗದೊಳಗೆ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ನಿದರ್ಶನಗಳು ಹೊರಹೊಮ್ಮಿವೆ. ಜೊತೆಗೆ, ನ್ಯಾಯಾಧೀಶರು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಜನರಲ್ಲಿ ನ್ಯಾಯಾಂಗದ ಮೇಲೆ ಅನುಮಾನ ಮೂಡಿಸುವ ಸಾಧ್ಯತೆಗಳಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹೇಳಿದ್ದಾರೆ.
ಯುಕೆಯಲ್ಲಿ ನಡೆದ ‘ನ್ಯಾಯಾಂಗ ಕಾನೂನುಬದ್ಧತೆ ಮತ್ತು ಸಾರ್ವಜನಿಕ ವಿಶ್ವಾಸ ಕಾಪಾಡಿಕೊಳ್ಳುವುದು’ ವಿಷಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಸಿಜೆಐ ಗವಾಯಿ ಮಾತನಾಡಿದ್ದಾರೆ. “ಪ್ರತಿಯೊಂದು ಪ್ರಜಾಪ್ರಭುತ್ವದಲ್ಲೂ ನ್ಯಾಯಾಂಗವು ನ್ಯಾಯವನ್ನು ವಿತರಿಸುವುದಲ್ಲದೆ, ಸತ್ಯವನ್ನು ಎತ್ತಿ ತೋರಿಸಲು ಅರ್ಹವಾದ ಸಂಸ್ಥೆಯಾಗಿಯೂ ಕಾಣಬೇಕು” ಎಂದಿದ್ದಾರೆ.
“ಭ್ರಷ್ಟಾಚಾರ ಮತ್ತು ದುಷ್ಕೃತ್ಯದಂತಹ ನಡೆಗಳು ಒಟ್ಟಾರೆಯಾಗಿ ವ್ಯವಸ್ಥೆಯ ಸಮಗ್ರತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕಳೆದುಹೋಗುತ್ತಿರುವ ವಿಶ್ವಾಸವನ್ನು ಪುನರ್ನಿರ್ಮಿಸುವ ಮಾರ್ಗವು ಈ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಂಡ ತ್ವರಿತ, ನಿರ್ಣಾಯಕ ಮತ್ತು ಪಾರದರ್ಶಕ ಕ್ರಮದಲ್ಲಿದೆ. ಭಾರತದಲ್ಲಿ, ಅಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ಸುಪ್ರೀಂ ಕೋರ್ಟ್ ನಿರಂತರವಾಗಿ ದುಷ್ಕೃತ್ಯವನ್ನು ಪರಿಹರಿಸಲು ತಕ್ಷಣದ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಜೆಪಿ ಪ್ರಕಾರ ‘ಆಪರೇಷನ್ ಸಿಂಧೂರ’ ಯಶಸ್ವಿ: ಅಭಿಯಾನ ಆರಂಭಿಸಿದ ಸ್ತ್ರೀದ್ವೇಷಿಗಳು!
“ನ್ಯಾಯಾಧೀಶರು ನಿವೃತ್ತಿಯ ನಂತರದ ತೆಗೆದುಕೊಳ್ಳುವ ನಿರ್ಧಾರಗಳು ಅಥವಾ ಸರ್ಕಾರದಿಂದ ಪಡೆಯುವ ಮತ್ತೊಂದು ನೇಮಕಾತಿಯು ಅವರು ನಿವೃತ್ತಿಗೂ ಮುನ್ನ ನಿರ್ವಹಿಸಿದ್ದ ಕೆಲಸಗಳ ಬಗ್ಗೆ ಅನುಮಾನ ಹುಟ್ಟುಹಾಕಬಹುದು. ಅಲ್ಲದೆ, ಚುನಾವಣೆಗಳಲ್ಲಿ ಸ್ಪರ್ಧಿಸಲು ಅವರು ನ್ಯಾಯಾಂಗಕ್ಕೆ ರಾಜೀನಾಮೆ ನೀಡಿದರೆ, ಅದು ಗಮನಾರ್ಹವಾದ ನೈತಿಕ ಕಾಳಜಿಗಳನ್ನು ಹುಟ್ಟುಹಾಕುತ್ತದೆ. ಸಾರ್ವಜನಿಕ ಪರಿಶೀಲನೆಗೆ ಒಳಪಡುತ್ತದೆ. ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ’ ಎಂದಿದ್ದಾರೆ.
“ರಾಜಕೀಯ ಹುದ್ದೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನ್ಯಾಯಾಧೀಶರು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತದ ಬಗ್ಗೆ ಅನುಮಾನಗಳು ಹುಟ್ಟಲು ಕಾರಣವಾಗಬಹುದು. ಏಕೆಂದರೆ, ಇದನ್ನು ಹಿತಾಸಕ್ತಿ ಸಂಘರ್ಷ ಅಥವಾ ಸರ್ಕಾರದ ಪರವಾಗಿ ಪಡೆಯುವ ಪ್ರಯತ್ನವೆಂದು ಪರಿಗಣಿಸುವ ಸಾಧ್ಯತೆಗಳಿವೆ. ನಿವೃತ್ತಿಯ ನಂತರ ಅವರು ಪಡೆಯುವ ಹುದ್ದೆ ಅಥವಾ ಅವರು ನಿರ್ವಹಿಸುವ ಬೇರೆ ಯಾವುದೇ ಪಾತ್ರವೂ ನ್ಯಾಯಾಂಗದ ಸಮಗ್ರತೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡಬಹುದು. ಏಕೆಂದರೆ, ಅವರು ಸೇವೆಯಲ್ಲಿದ್ದಾಗ ತೆಗೆದುಕೊಳ್ಳುವ ನ್ಯಾಯಾಂಗ ನಿರ್ಧಾರಗಳು ಭವಿಷ್ಯದ ಸರ್ಕಾರಿ ನೇಮಕಾತಿ ಅಥವಾ ರಾಜಕೀಯ ಒಳಗೊಳ್ಳುವಿಕೆಯ ನಿರೀಕ್ಷೆಯಿಂದ ಪ್ರಭಾವಿತವಾಗಿವೆ ಎಂಬ ಗ್ರಹಿಕೆಯನ್ನು ಹುಟ್ಟುಹಾಕಬಹುದು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಆಪರೇಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ
“ಅದಕ್ಕಾಗಿಯೇ, ನಮ್ಮ ಅನೇಕ ಸಹೋದ್ಯೋಗಿಗಳು ನಿವೃತ್ತಿಯ ನಂತರ ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ಪ್ರಯತ್ನದಲ್ಲಿ ಸರ್ಕಾರದಿಂದ ಯಾವುದೇ ಹುದ್ದೆ ಅಥವಾ ಪಾತ್ರಗಳನ್ನು ಸ್ವೀಕರಿಸುವುದಿಲ್ಲ ಎಂವಯದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು” ಎಂದಿದ್ದಾರೆ.