ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ, ಶ್ರೀಲಂಕಾದ ಭಾಗವಾಗಿರುವ ಕಚ್ಚತೀವು ದ್ವೀಪದ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್‌ಅನ್ನು ವಿರುದ್ಧ ವಾಗ್ದಾಳಿ ನಡೆಸುತ್ತಿದೆ. 1974ರಲ್ಲಿ ಶ್ರೀಲಂಕಾಗೆ ಸಣ್ಣ ದ್ವೀಪವಾದ ‘ಕಚ್ಚತೀವು’ಅನ್ನು ಬಿಟ್ಟುಕೊಟ್ಟಿದೆ ಎಂದು ಕಾಂಗ್ರೆಸ್‌ಅನ್ನು ಬಿಜೆಪಿ ದೂಷಿಸಿದೆ. ಈ ಬಗ್ಗೆ ಶ್ರೀಲಂಕಾ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದ್ದು, ಕಚ್ಚತೀವು ಬಗ್ಗೆ ಭಾರತ ಯಾವತ್ತಿಗೂ ಪ್ರಸ್ತಾಪಿಸಿಲ್ಲ ಎಂದು ಶ್ರೀಲಂಕಾ ಸರ್ಕಾರದ ವಕ್ತಾರರು ಮಂಗಳವರ ಹೇಳಿದ್ದಾರೆ.
ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಬಿಟ್ಟುಕೊಟ್ಟಿರುವುದಾಗಿ ಹೊಸ ಸಂಗತಿಗಳು ಬಹಿರಂಗಪಡಿಸುತ್ತವೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ, ಕಚ್ಚತೀವು ದ್ವೀಪದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದವರು ಕಚ್ಚತೀವು ದ್ವೀಪದ ಬಗ್ಗೆ ಅಸಡ್ಡೆ ಪ್ರದರ್ಶಿಸಿದರು. ಕಾನೂನು ದೃಷ್ಟಿಕೋನಗಳ ಹೊರತಾಗಿಯೂ ಭಾರತೀಯ ಮೀನುಗಾರರ ಹಕ್ಕುಗಳ ಬಗ್ಗೆ ಅವರು ಕಾಳಜಿ ವಹಿಸಲಿಲ್ಲ” ಎಂದು ಜೈಶಂಕರ್ ಸೋಮವಾರ ಆರೋಪಿಸಿದ್ದಾರೆ.
ಮೊದಲು 1974ರಲ್ಲಿ ಮತ್ತು ನಂತರ 1976ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಗಳ ವಿವರಗಳನ್ನು ಉಲ್ಲೇಖಿಸಿರುವ ಜೈಶಂಕರ್, “ಭಾರತದ ಭೂಪ್ರದೇಶದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಅಂದಿನ ಪ್ರಧಾನ ಮಂತ್ರಿಗಳು ಅಸಡ್ಡೆ ತೋರಿಸಿದ್ದು, ಪುನರಾವರ್ತಿತ ವಿಷಯವಾಗಿದೆ” ಎಂದಿದ್ದಾರೆ.
ಏತನ್ಮಧ್ಯೆ, “ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಲಕ್ಷಾಂತರ ತಮಿಳರ ಜೀವ ಉಳಿಸಲು ಕಚ್ಚತೀವು ಶ್ರೀಲಂಕಾಕ್ಕೆ ಬಿಟ್ಟುಕೊಡಲಾಗಿದೆ. 1974ರಲ್ಲಿ ಇತ್ಯರ್ಥವಾದ ಸಮಸ್ಯೆಯನ್ನು ಪ್ರಧಾನಿ ಏಕೆ ಈಗ ಕೆದಕುತ್ತಿದ್ದಾರೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“1974ರಲ್ಲಿ, ಇಂದಿರಾ ಗಾಂಧಿ ಸರ್ಕಾರ, ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅಲ್ಲಿ ಲಕ್ಷಾಂತರ ತಮಿಳರಿಗೆ ಸಹಾಯ ಮಾಡಲು, ದ್ವೀಪ ರಾಷ್ಟ್ರದ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು. ಮಾತುಕತೆಗಳ ನಂತರ, ಸುಮಾರು 1.9 ಚದರ ಕಿ.ಮೀ ವಿಸ್ತೀರ್ಣದ ಅತ್ಯಂತ ಚಿಕ್ಕ ದ್ವೀಪವಾದ ಕಚ್ಚತೀವುಅನ್ನು ಶ್ರೀಲಂಕಾಗೆ ಸೇರಿದ್ದು ಎಂದು ಭಾರತ ಒಪ್ಪಿಕೊಂಡಿತು. ಇದಕ್ಕೆ ಪ್ರತಿಯಾಗಿ ಆರು ಲಕ್ಷ ತಮಿಳರು ಭಾರತಕ್ಕೆ ಬರಲು ಶ್ರೀಲಂಕಾ ಅನುವು ಮಾಡಿಕೊಟ್ಟಿತು” ಎಂದು ಚಿದಂಬರಂ ಹೇಳಿದ್ದಾರೆ.
“ತಮಿಳರು ಭಾರತಕ್ಕೆ ಬಂದಿದ್ದಾರೆ. ಅವರ ಕುಟುಂಬಗಳು ಇಲ್ಲವೆ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಇಲ್ಲಿದ್ದಾರೆ. ಈ ಸಮಸ್ಯೆಯನ್ನು 50 ವರ್ಷಗಳ ಹಿಂದೆ ಪರಿಹರಿಸಲಾಗಿದೆ” ಎಂದು ಚಿದಂಬರಂ ವಿವರಿಸಿದ್ದಾರೆ.