ಸೋಮವಾರ ಆರಂಭವಾದ ಲೋಕಸಭಾ ಅಧಿವೇಶನದಲ್ಲಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದೆ, ಸಂಸ್ಕೃತದಲ್ಲಿ ಸ್ವೀಕರಿಸಿದ್ದಾರೆ. ಕಾಗೇರಿ ಧೋರಣೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನರ ನುಡಿಯನ್ನು ಬೇಡ ಎನ್ನುವವರು ನಿಜಕ್ಕೂ ಜನ ದ್ರೋಹಿಗಳು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹಲವಾರು ಸಂಸದರು ಕನ್ನಡದಲ್ಲಿ ಪ್ರಮಾಣವಚನ ಪಡೆದಿದ್ದಾರೆ. ಆದರೆ, ಕಾಗೇರಿ ಮಾತ್ರ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. “ಕಾಗೇರಿಯವರಿಗೆ ಜನರ ನುಡಿ ಬೇಕಾಗಿಲ್ಲ. ಅವರದೇನಿದ್ದರೂ ದೇವರ ಜೊತೆ ಮಾತುಕತೆ. ಜನರ ನುಡಿ ಬೇಡವೆನ್ನುವವರಿಗೆ ಜನರೂ ಬೇಕಾಗಿರುವುದಿಲ್ಲ. ಇವರೇ ನಿಜವಾದ ಜನದ್ರೋಹಿಗಳು” ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಾರಾಯಣಗೌಡ, “ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆಗಳು. ಕರ್ನಾಟಕದ ಪ್ರತಿನಿಧಿಗಳಾದ ನೀವು ನಾಡಿನ ಏಳಿಗೆಗೆ ದುಡಿಯುತ್ತೀರಿ ಎಂಬ ಆಶಯ ನನ್ನದು. ಕರ್ನಾಟಕಕ್ಕೆ ಏನೇ ಅನ್ಯಾಯವಾದರೂ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿ. ನಿಮಗೆ ಕನ್ನಡಿಗರೇ ನಿಜವಾದ ಹೈಕಮಾಂಡ್ ಅನ್ನುವುದನ್ನು ಮರೆಯಬೇಡಿ. ಎಲ್ಲರಿಗೂ ಶುಭಾಶಯಗಳು” ಎಂದಿದ್ದಾರೆ.
ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆಗಳು. ಕರ್ನಾಟಕದ ಪ್ರತಿನಿಧಿಗಳಾದ ನೀವು ನಾಡಿನ ಏಳಿಗೆಗೆ ದುಡಿಯುತ್ತೀರಿ ಎಂಬ ಆಶಯ ನನ್ನದು. ಕರ್ನಾಟಕಕ್ಕೆ ಏನೇ ಅನ್ಯಾಯವಾದರೂ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿ. ನಿಮಗೆ ಕನ್ನಡಿಗರೇ ನಿಜವಾದ ಹೈಕಮಾಂಡ್ ಅನ್ನುವುದನ್ನು ಮರೆಯಬೇಡಿ. ಎಲ್ಲರಿಗೂ ಶುಭಾಶಯಗಳು pic.twitter.com/nnOKzwK6et
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 25, 2024