ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೂ, ಹಣರಣದ ತನಿಖೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾಕೆ ಆದೇಶಿಸಿಲ್ಲ ಎಂದು ತೆಲಂಗಾಣ ಪ್ರವಾಸೋದ್ಯಮ ಮತ್ತು ಅಬಕಾರಿ ಸಚಿವ ಜೂಪಲ್ಲಿ ಕೃಷ್ಣರಾವ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರವು ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳಿಂದ ಅನೇಕ ಜನರನ್ನು ಬಂಧಿಸಿದೆ. ಆದರೆ, ಬಿಆರ್‌ಎಸ್ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಸುಲಿಗೆ ಕುರಿತು ಈ ಸಂಸ್ಥೆಗಳು ಯಾಕೆ ತನಿಖೆ ನಡೆಸುತ್ತಿಲ್ಲ. ಈ ಬಗ್ಗೆ ಬಿಜೆಪಿಗರು ವಿವರಿಸಬೇಕು” ಎಂದು ಹೇಳಿದ್ದಾರೆ.
“ಕೃಷ್ಣಾ ಜಲ ವಿವಾದವನ್ನು ಇತ್ಯರ್ಥಪಡಿಸಿ ತೆಲಂಗಾಣಕ್ಕೆ ನ್ಯಾಯಯುತವಾದ ಪಾಲು ನೀಡುವ ವಿಷಯದ ಬಗ್ಗೆ ಚುನಾವಣೆ ಸಮಯದಲ್ಲಿ ಕೇಂದ್ರ ಮಾತನಾಡುತ್ತಿದೆ. ಜಲ ವಿವಾದವನ್ನು ಇತ್ಯರ್ಥಪಡಿಸದೆ ತೆಲಂಗಾಣ ಜನತೆಯ ಮತ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ” ಎಂದು ಕಿಡಿಕಾರಿದ್ದಾರೆ.
“ಪಾಲಮುರು-ರಂಗಾರೆಡ್ಡಿ ಏತ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯ ಸ್ಥಾನಮಾನವನ್ನು ಏಕೆ ನೀಡುತ್ತಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ವಿವರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಮತ ಗಳಿಸಲು ಯತ್ನಿಸುತ್ತಿದ್ದಾರೆ. ಅವರು ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಏಕೆ ನ್ಯಾಯಯುತ, ನ್ಯಾಯೋಚಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಬಿಆರ್‌ಎಸ್ ಮೈತ್ರಿಯು ಎರಡು ಸ್ಥಾನಗಳನ್ನೂ ಗೆಲ್ಲುವುದಿಲ್ಲ. ತೆಲಂಗಾಣ ಜನತೆ ಬಿಜೆಪಿ ಮತ್ತು ಬಿಆರ್‌ಎಸ್ ಎರಡಕ್ಕೂ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕೃಷ್ಣರಾವ್ ಹೇಳಿದ್ದಾರೆ.