‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ’ ಎಂದು ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಮಲ್ ವಿರುದ್ಧ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಮಲ್ ಅವರಿಗೆ ಹಲವರು ಭಾಷಾ ಇತಿಹಾಸದ ಪಾಠ ಹೇಳುತ್ತಿದ್ದಾರೆ. ಇದೀಗ, ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳದಿದ್ದರೆ, ಅವರ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವುದಾಗಿ ಕರ್ನಾಟಕ ಸರ್ಕಾರ ಎಚ್ಚರಿಕೆ ನೀಡಿದೆ.
ಕಮಲ್ ಹಾಸನ್ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. “ಕನ್ನಡ ಭಾಷೆಯ ಕುರಿತು ಹಗುರವಾಗಿ ಮಾತನಾಡಿರುವ ಬಹುಭಾಷ ನಟ ಕಮಲ್ ಹಾಸನ್ ಕೂಡಲೇ ರಾಜ್ಯದ ಜನರ ಎದುರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ, ಅವರ ಸಿನಿಮಾಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರುವಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾರೇ ಹಗುರವಾಗಿ ಮಾತನಾಡಿದರೂ ಸಹಿಸುವುದಿಲ್ಲ. ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕನ್ನಡ ವಿರೋಧಿ ಹೇಳಿಕೆಗಳನ್ನು ಸಹಿಸುವ ಮಾತೇ ಇಲ್ಲ. ಕಮಲ್ ಕ್ಷಮೆಯಾಚಿಸಬೇಕು” ಎಂದು ಸಚಿವರು ಆಗ್ರಹಿಸಿದ್ದಾರೆ.
“ಕಮಲ್ ಹಾಸನ್ ಅವರು ಕನ್ನಡದಲ್ಲಿಯೂ ಹಲವು ಚಿತ್ರಗಳನ್ನು ಮಾಡಿದ್ದಾರೆ. ಅವರಿಗೆ ನಟನೆ ಮತ್ತು ಹಣ ಸಂಪಾದನೆಗೆ ನಮ್ಮ ಭಾಷೆ ಬೇಕು. ಆದರೆ, ಹಿರಿಯ ನಟನಾಗಿ ಪುಗಸಟ್ಟೆ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ಅವರು ನೀಡಬಾರದು. ಅವರು ಕ್ಷಮೆ ಕೇಳದಿದ್ದರೆ, ಅವರ ಚಿತ್ರಗಳನ್ನು ಬ್ಯಾನ್ ಮಾಡಲಾಗುವುದು” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಕಮಲ್ ಹಾಸನ್ ಎಂಬ ಅಜ್ಞಾನಿಯಿಂದ ಕನ್ನಡಕ್ಕೆ ಅವಮಾನ: ಇಂಥವರಿಗೆ ನಿರ್ಲಕ್ಷ್ಯವೇ ಮದ್ದು
ಕಮಲ್ ಅವರು ತಮ್ಮ ಸಿನಿಮಾ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಕೂಡ ಭಾಗಿಯಾಗಿದ್ದರು. ಕಮಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್‌ಕುಮಾರ್, ‘ಕಮಲ್ ಅವರಿಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇದೆ’ ಎಂದು ಹೇಳಿದ್ದಾರೆ. ಕಮಲ್ ವಿರುದ್ಧ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.